ಕಾಪು ಸಮಾಜ ಸೇವಕ ಸೂರಿ ಶೆಟ್ಟಿ ತಂಡದಿಂದ ನಂದಳಿಕೆಯಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ವೃದ್ಧರ ಅಂತಿಮ ಸಂಸ್ಕಾರ
(Kaup) ಕಾಪು: ಕಾಪುವಿನ ಖ್ಯಾತ ಸಮಾಜ ಸೇವಕ ಸುರೇಶ್ ಶೆಟ್ಟಿ ಯಾನೆ ಸೂರಿಯವರ ತಂಡ ಗುರುವಾರ ಕಾರ್ಕಳ ತಾಲೂಕಿನ ನಂದಳಿಕೆಯಲ್ಲಿ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದ ಮೃತ ದೇಹಕ್ಕೆ ಅಂತಿಮ ಸಂಸ್ಕಾರ ಮಾಡಿ ಸಾರ್ಥಕತೆ ಮೆರೆದಿದ್ದಾರೆ.
ನಂದಳಿಕೆಯಲ್ಲಿ ವಯೋ ವೃದ್ಧ ಶಾಂತರಾಮ ಆಚಾರ್ಯ (68) ರವರು ತಮ್ಮ ವಾಸದ ಮನೆಯಲ್ಲಿ ಕಳೆದ ಹತ್ತು- ಹದಿನೈದು ದಿನಗಳ ಹಿಂದೆ ಮೃತಪಟ್ಟಿದ್ದರು. ಅವರ ಮನೆಗೆ ಸ್ಥಳೀಯರ ಸಂಪರ್ಕ ಇಲ್ಲದ ಕಾರಣ ಅವರು ಮೃತಪಟ್ಟ ಸುದ್ದಿ ಯಾರಿಗೂ ತಿಳಿದಿರಲಿಲ್ಲ. ಮನೆಯಿಂದ ಕೊಳೆತು ನಾರುತ್ತಿರುವ ವಾಸನೆ ಪರಿಸರದಲ್ಲಿ ಪಸರಿಸಿದಾಗ ಮತ್ತು ಅವರ ಮನೆಗೆ ಹೋಗಿ ನೋಡಿದಾಗ, ಅವರ ಮೃತ ದೇಹ ಕೊಳೆತು ನಾರುತ್ತಿತ್ತು.
ಸ್ಥಳೀಯರೋರ್ವರು ಸೂರಿ ಶೆಟ್ಟಿಯವರಿಗೆ ದೂರವಾಣಿ ಕರೆ ಮಾಡಿ ಪರಿಸ್ಥಿತಿಯನ್ನು ವಿವರಿಸಿ ಅಂತಿಮ ಸಂಸ್ಕಾರ ಮಾಡುವಂತೆ ಮನವಿ ಮಾಡಿದ್ದಾರೆ.
ಎರ್ಮಾಳಿನಲ್ಲಿ ಅಂತ್ಯಸಂಸ್ಕಾರ ಮಾಡುತ್ತಿದ್ದ ಸೂರಿ ಶೆಟ್ಟಿಯವರ ತಂಡ, ಅಲ್ಲಿಯ ವಿಧಿ ವಿಧಾನ ಪೂರ್ಣಗೊಳಿಸಿ ತನ್ನ ತಂಡದ ಸದಸ್ಯರಾದ ನಾಗರಾಜ್, ದಯಾನಂದ ಮಲ್ಲಾರು, ರೂಪೇಶ್ ರವರೊಂದಿಗೆ ಟೆಂಪೋದಲ್ಲಿ ಕಟ್ಟಿಗೆ ಸಹಿತ ಅಂತಿಮ ಸಂಸ್ಕಾರಕ್ಕೆ ಬೇಕಾದ ವಸ್ತುಗಳನ್ನು ಕೊಂಡೊಯ್ದು, ಮಳೆಯ ನಡುವೆಯೂ ಅಂತಿಮ ಸಂಸ್ಕಾರ ಪೂರ್ಣಗೊಳಿಸಿ ಸಾರ್ಥಕತೆ ಹೊಂದಿದ್ದಾರೆ.
ಸೂರಿ ಶೆಟ್ಟಿವರು “ಈ ಮೀಡಿಯಾ ಕನ್ನಡ”ದೊಂದಿಗೆ ಮಾತನಾಡಿ, ನೂರಾರು ಅಂತ್ಯ ಸಂಸ್ಕಾರ ನೆರವೇರಿಸಿರುವ ನನಗೆ ಇದು ಸವಾಲಾಗಿತ್ತು. ಶಾಂತರಾಮ ಆಚಾರ್ಯರವರ ಮನೆ ತನಕ ವಾಹನ ಸಾಗಲು ದಾರಿ ಇಲ್ಲದ್ದರಿಂದ ನಾವು ತಂದ ಕಟ್ಟಿಗೆ ಮತ್ತಿತರ ಸಾಮಾನುಗಳನ್ನು ಹೊತ್ತೊಯ್ಯಬೇಕಾಯಿತು. ಪರಿಸರದಲ್ಲಿ ವಿಪರೀತ ಮಳೆ ಇದ್ದುದರಿಂದ ಇದು ನಮ್ಮ ತಂಡಕ್ಕೆ ಸವಾಲಾಗಿತ್ತು. ಅಂತೂ, ವಯೋ ವೃದ್ಧರ ಅಂತಿಮ ಸಂಸ್ಕಾರ ನೆರವೇರಿಸಿದ ಬಳಿಕ ಮನಸ್ಸಿಗೆ ನೆಮ್ಮದಿ ಸಿಕ್ಕಿದೆ ಎಂದ ಅವರು, ಸ್ಥಳೀಯ ವಿಶ್ವಕರ್ಮ ಸಂಘದ ಸದಸ್ಯರು ಸಾಥ್ ನೀಡಿದ್ದಾಗಿ ಹೇಳಿದ್ದಾರೆ.

