ಎ. 23– ಮೇ 4: ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ
ಸಂಪೂರ್ಣ ಕಾರ್ಯಕ್ರಮ ಯಶಸ್ವಿಗೊಳಿಸಲು ಶಾಸಕ ಸುರೇಶ್ ಶೆಟ್ಟಿ ಮನವಿ
ಚಿತ್ರ ಕೃಪೆ : ರವಿ ಡಿಜಿಟಲ್ಸ್, ಪಡುಬಿದ್ರಿ
(Padubidri) ಪಡುಬಿದ್ರಿ, ಎ. 1: ಪುರಾಣ ಪ್ರಸಿದ್ಧ ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವರ ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಪೂರ್ವಭಾವೀ ಪ್ರಥಮ ಅಂಗವಾದ ಚಪ್ಪರ ಮಹೂರ್ತವು ಗುರುವಾರ, ಎ. 2ರಂದು ಬೆಳಿಗ್ಗೆ 9:30ಕ್ಕೆ ಶ್ರೀ ಕ್ಷೇತ್ರದ ತಂತ್ರಿಗಳಾದ ಕೊಡವೂರು ಕಂಬಳಕಟ್ಟ ವೇದಮೂರ್ತಿ ರಾಧಾಕೃಷ್ಣ ಉಪಾಧ್ಯಾಯ ಅವರ ನೇತೃತ್ವದಲ್ಲಿ ನಡೆಯಲಿರುವುದಾಗಿ ಶ್ರೀ ದೇವಸ್ಥಾನದಲ್ಲಿ ಬುಧವಾರ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ತಿಳಿಸಿದರು.
ಪಡುಬಿದ್ರಿ ಶ್ರೀ ದೇಗುಲದ ಪುನರ್ ನಿರ್ಮಾಣದ ಕಾರ್ಯವು ಜೀರ್ಣೕೊದ್ಧಾರ ಸಮಿತಿಯ ಅಧ್ಯಕ್ಷ, ಬೆಂಗಳೂರಿನ ಉದ್ಯಮಿ ಡಾ. ಕೆ. ಪ್ರಕಾಶ್ ಶೆಟ್ಟಿ ಅವರ ನೇತೃತ್ವದಲ್ಲಿ ನಡೆಯುತ್ತಿದ್ದು, ದೇವರ ಪುನರ್ ಪ್ರತಿಷ್ಟೆ ಬ್ರಹ್ಮಕಲಶೋತ್ಸವವನ್ನು ಎಲ್ಲರೂ ಜತೆಗೂಡಿ ಯಶಸ್ವಿಗೊಳಿಸೋಣವೆಂದು ಶಾಸಕ ಗುರ್ಮೆ ಮನವಿ ಮಾಡಿದರು.
ಬ್ಲೂ ಫ್ಲ್ಯಾಗ್ ಬೀಚ್‌ಗೆ ಇಲ್ಲಿನ ಕಾರ್ಯಕ್ರಮದ ಸಂದರ್ಭಗಳಲ್ಲಿ ಪರ್ಯಾಯ ಮಾರ್ಗವನ್ನು ಅನುಸರಿಸಲು ಅನುಕೂಲವಾಗುವಂತೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ದೇವಸ್ಥಾನದ ಆಡಳಿತ ಮಂಡಳಿಯಿದ್ದು ಸಭೆಯನ್ನು ಶೀಘ್ರವಾಗಿ ನಡೆಸಲಾಗುವುದೆಂದೂ ಶಾಸಕ ಸುರೇಶ್ ಶೆಟ್ಟಿಯವರು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಾ ತಿಳಿಸಿದರು.
ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುರಳೀನಾಥ ಶೆಟ್ಟಿ ಅವರು ವ್ಯವಸ್ಥೆಗಳ ಕುರಿತಾಗಿ ವಿವರಿಸಿ, ಎ. 23ರಿಂದ ಮೇ 04ರವರೆಗಿನ 12 ದಿನಗಳಲ್ಲಿ ಸುಮಾರು ಒಂದೂವರೆ ಲಕ್ಷ ಭಕ್ತರು ಶ್ರೀ ಕ್ಷೇತ್ರವನ್ನು ಸಂದರ್ಶಿಸುವ ನಿರೀಕ್ಷೆ ಇದೆ. ಈ ಎಲ್ಲಾ ದಿನಗಳಲ್ಲಿ ನಡೆಯುವ ಊಟೋಪಚಾರದ ವ್ಯವಸ್ಥೆಗಾಗಿ ದೇವಸ್ಥಾನದ ಉತ್ತರ ಭಾಗದಲ್ಲಿ ಪಾಕಶಾಲೆ ಮತ್ತು ಭೋಜನಶಾಲೆಯ ವ್ಯವಸ್ಥೆಯನ್ನು ಮಾಡಲಾಗಿದೆ. ದೇಗುಲದ ಪಶ್ಚಿಮದಲ್ಲಿ ಉಗ್ರಾಣದ ವ್ಯವಸ್ಥೆಇದೆ.
ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾದಿಗಳ ವಾಹನ ದಟ್ಟನೆಯನ್ನು ನಿರ್ವಹಿಸಲು ಕ್ರಮ ಕೈಕೊಳ್ಳಲಾಗಿದೆ. ದೇಗುಲದ ಮುಂಭಾಗದ ಹಳೇ ಬಿಎಂಸಿ ರಸ್ತೆಯನ್ನು ಆದಷ್ಟು ವಾಹನ ಮುಕ್ತವಾಗಿರಿಸಲು ಬಯಸಲಾಗಿದೆ. ಇದಕ್ಕಾಗಿ ಸಾರ್ವಜನಿಕ ಸಹಕಾರವನ್ನು ಶ್ರೀ ದೇವಸ್ಥಾನದ ಆಡಳಿತ ಮಂಡಳಿಯು ಬಯಸಿದೆ. ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಉಡುಪಿ, ಕಾರ್ಕಳ ಮುಂತಾದ ಉತ್ತರ ಕಡೆಯಿಂದ ಬರುವ ಭಕ್ತರಿಗೆ ರಾಷ್ಟ್ರೀಯ ಹೆದ್ದಾರಿಯ ಅಕ್ಕ ಪಕ್ಕದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮತ್ತು ಮಂಗಳೂರು, ಕಟೀಲು, ಮೂಡುಬಿದಿರೆ ಭಾಗಗಳಿಂದ ಬರುವ ಭಕ್ತರಿಗೆ ದೇವಸ್ಥಾನದ ಹಿಂಭಾಗ ಬೀಚ್ ರಸ್ತೆಯಲ್ಲಿ ಪಾರ್ಕಿಂಗ್ ವ್ಯವಸ್ಥೆಗಳನ್ನು ಮತ್ತು ಇಕ್ಕೆಲಗಳಿಂದಲೂ ಶ್ರೀ ದೇಗುಲಕ್ಕೆ ಬರಲು ಉಚಿತ ಆಟೋರಿಕ್ಷಾಗಳ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ವಿಐಪಿ ವಾಹನ ಪಾರ್ಕಿಂಗ್‌ಗೂ ಪ್ರತ್ಯೇಕ ವ್ಯವಸ್ಥೆಯಿದ್ದು, ಶ್ರೀ ಕ್ಷೇತ್ರವನ್ನು ಸಂದರ್ಶಿಸುವ ಭಕ್ತರ ಅನುಕೂಲಕ್ಕಾಗಿ ಸಾಕಷ್ಟು ಶೌಚಾಲಯ ವ್ಯವಸ್ಥೆಗಳನ್ನೂ ಮಾಡಲಾಗುತ್ತಿದೆ ಎಂದೂ ಮುರಳೀನಾಥ್ ಶೆಟ್ಟಿ ತಿಳಿಸಿದರು.
ದೇವಸ್ಥಾನದ ಮುಂಭಾಗದಲ್ಲಿ ರಸ್ತೆ ಬದಿ ಯಾವುದೇ ಬ್ಯಾನರ್ ಅಥವಾ ಫ್ಲೆಕ್ಸ್ ಗಳನ್ನು ಹಾಕದಿರಲು ಶ್ರೀ ದೇವಳದ ಆಡಳಿತ ಮತ್ತು ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಸಮಿತಿ ಬಯಸಿದ್ದು ಸಾರ್ವಜನಿಕರು ಈ ನಿಟ್ಟಿನಲ್ಲಿ ಸಹಕರಿಸಬೇಕು ಎಂದು ಸುದ್ದಿಗೋಷ್ಟಿಯಲ್ಲಿ ಮನವಿ ಮಾಡಿದರು.
ಪತ್ರಿಕಾಗೋಷ್ಟಿಯಲ್ಲಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲದ ಅನುವಂಶಿಕ ಮೊಕ್ತೇಸರರಾದ ರತ್ನಾಕರ ರಾಜ್ ಅರಸ್ ಕಿನ್ಯಕ್ಕ ಬಲ್ಲಾಳರು ಮತ್ತು ಪಡುಬಿದ್ರಿ ಪೇಟೆಮನೆ ಭವಾನಿ ಶಂಕರ ಹೆಗ್ಡೆ, ಜೀರ್ಣೕೊದ್ಧಾರ ಸಮಿತಿಯ ಉಪಾಧ್ಯಕ್ಷ ಪಿ. ರವೀಂದ್ರನಾಥ ಜಿ. ಹೆಗ್ಡೆ, ದೇಗುಲದ ಕಾರ್ಯನಿರ್ವಹಣಾಧಿಕಾರಿ ಕೆ. ರಾಜಗೋಪಾಲ ಉಪಾಧ್ಯಾಯ, ನವೀನ್ ಚಂದ್ರ ಜೆ. ಶೆಟ್ಟಿ, ನವೀನ್ ಎನ್ ಶೆಟ್ಟಿ, ವೈ. ಸುಕುಮಾರ್, ಅನಂತ ಪಟ್ಟಾಭಿ ರಾವ್, ಶ್ರೀನಾಥ ಹೆಗ್ಡೆ, ಅಶೋಕ್ ಸಾಲ್ಯಾನ್ ಉಪಸ್ಥಿತರಿದ್ದರು,
ಪಡುಬಿದ್ರಿ ಪೇಟೆಮನೆ ಭವಾನಿಶಂಕರ ಹೆಗ್ಡೆ ಸ್ವಾಗತಿಸಿದರು. ಮುರಳೀನಾಥ ಶೆಟ್ಟಿ ವಂದಿಸಿದರು.

