ಕುತ್ಯಾರು ಸೂರ್ಯ ಚೈತನ್ಯ ಶಾಲಾ ವಿದ್ಯಾರ್ಥಿಗಳಿಂದ ಶಿರ್ವ ಪೊಲೀಸ್ ಠಾಣೆಗೆ ಭೇಟಿ
ಶಿರ್ವ ಠಾಣಾಧಿಕಾರಿ ಮಂಜುನಾಥ ಮರಬದರವರಿಂದ ಪೊಲೀಸ್ ಠಾಣೆಯ ಬಗ್ಗೆ ಸಂಪೂರ್ಣ ಮಾಹಿತಿ
(Shirva) ಶಿರ್ವ: ಕುತ್ಯಾರಿನ ಸೂರ್ಯ ಚೈತನ್ಯ ಶಾಲೆಯ ವಿದ್ಯಾರ್ಥಿಗಳು ಸೋಮವಾರ ಬೆಳಿಗ್ಗೆ ಶಿರ್ವ ಠಾಣೆಗೆ ಆಗಮಿಸಿದ್ದು, ಅವರಿಗೆ ಶಿರ್ವ ಠಾಣಾಧಿಕಾರಿ ಮಂಜುನಾಥ ಮರಬದರವರು ಪೊಲೀಸ್ ಠಾಣೆಯ ಬಗ್ಗೆ, ಠಾಣೆಯಲ್ಲಿ ನೆಡೆಯುವ ದೈನಂದಿನ ಕಾರ್ಯಚಟುವಟಿಕೆಗಳ ಬಗ್ಗೆ, ದಾಖಲಾತಿ ಬಗ್ಗೆ, ಆಯುಧಗಳ ಬಗ್ಗೆ, ವಾಕಿ ಟಾಕಿ ಬಗ್ಗೆ ಮಾಹಿತಿ ನೀಡಿದರು.
ಅಪರಾಧ ತಡೆ ಮಾಸಾಚರಣೆಯ ಪ್ರಯುಕ್ತ ಪಿಎಸ್ಐ ಮಂಜುನಾಥ ಮರಬದರವರು ಮಾದಕ ದ್ರವ್ಯ, ಸೈಬರ್ ಕ್ರೈಂ ಮತ್ತು ಅತಿಯಾಗಿ ಮೊಬೈಲ್ ಉಪಯೋಗದ ದುಷ್ಪರಿಣಾಮದ ಬಗ್ಗೆ ಮಾಹಿತಿ ನೀಡಿದರು.
ಕುತ್ಯಾರಿನ ಸೂರ್ಯ ಚೈತನ್ಯ ಶಾಲೆಯ ಸುಮಾರು 75 ವಿದ್ಯಾರ್ಥಿಗಳು ಭಾಗವಹಿಸಿದ್ದು, ಶಿಕ್ಷಕರಾದ ಪ್ರಶಾಂತ್ ಆಚಾರ್ಯ, ಪ್ರತಿಮಾ ಹಾಗೂ ವಾಣಿ ಯವರು ನೇತೃತ್ವ ವಹಿಸಿದ್ದರು.
ಠಾಣಾ ಅಧಿಕಾರಿ ಹಾಗೂ ಹೆಡ್ ಕಾನ್ಸ್ಟೇಬಲ್ ಮಂಜುನಾಥ್ ಅಡಿಗ, ಎ ಎಸ್ ಐ ಶ್ರೀಧರ್ ಕೆ ಹಾಗೂ ಸಿಬ್ಬಂದಿಯವರು ಹಾಜರಿದ್ದರು.
ಶಾಲಾ ವಿದ್ಯಾರ್ಥಿಗಳಾದ ರಮ್ಯ ಹಾಗೂ ತೇಜಸ್ ಕೆ ಯವರು ತಮಗೆ ಠಾಣೆಯಲ್ಲಿ ಆದ ಅತ್ಯುತ್ತಮ ಅನುಭವ, ಪೊಲೀಸರ ಬಗ್ಗೆ ಮಾಹಿತಿ, ಪೊಲೀಸರು ದಿನದ 24 ಗಂಟೆ ಜನರ ಸೇವೆಯನ್ನು ಮಾಡುತ್ತಾ, ಸಮಾಜ ಕಂಟಕರನ್ನು ಹಿಡಿಯುತ್ತಾರೆ. ಪೋಲೀಸ್ ಸೇವೆಯ ಅನುಭವ ಇವತ್ತು ನಮಗೆ ದೊರೆತಿದೆ ಎಂದು ತಿಳಿಸಿದರು.

