ಕುರ್ಕಾಲು ಗಿರಿ ನಗರ: ಬೋನಿಗೆ ಬಿದ್ದ ಚಿರತೆ
ಕುರ್ಕಾಲು ಗಿರಿ ನಗರ: ಬೋನಿಗೆ ಬಿದ್ದ ಚಿರತೆ
(Kurkalu) ಕುರ್ಕಾಲು: ಕುರ್ಕಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂಜಾರುಗಿರಿಯ ಗಿರಿನಗರದಲ್ಲಿ ಅರಣ್ಯ ಇಲಾಖೆ ಇರಿಸಿದ ಬೋನಿಗೆ ಚಿರತೆ ಬಿದ್ದಿದೆ. ಇದರಿಂದ ಭಯ ಭೀತ ಸ್ಥಳೀಯರು ಸ್ವಲ್ಪ ನೆಮ್ಮದಿ ಕಂಡಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಚಿರತೆ ಓಡಾಟ ಈ ಪರಿಸರದಲ್ಲಿ ಇದ್ದು, ಸಾಕು ನಾಯಿ ಸಹಿತ ಕೆಲವು ಪ್ರಾಣಿಗಳನ್ನು ಚಿರತೆ ಭಕ್ಷಿಸಿದೆ.
ಇದರಿಂದ ಭಯಭೀತ ಜನತೆ ಅರಣ್ಯ ಇಲಾಖೆಗೆ ಚಿರತೆ ಸಂಚಾರದ ಬಗ್ಗೆ ಮಾಹಿತಿ ನೀಡಿದ್ದರು. ಆ ಪ್ರಯುಕ್ತ ಎರಡು ದಿನಗಳ ಹಿಂದೆ ಗಿರಿನಗರದಲ್ಲಿ ಚಿರತೆಗಾಗಿ ಬೋನನ್ನು ಇರಿಸಲಾಗಿತ್ತು.
ಬುಧವಾರ ಬೆಳಿಗ್ಗೆ ಸುಮಾರು ಎರಡು ವರ್ಷ ಪ್ರಾಯದ ಹೆಣ್ಣು ಚಿರತೆ ಬೋನಿನಲ್ಲಿ ಸಿಲುಕಿದೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖಾಧಿಕಾರಿಗಳು ಸ್ಥಳೀಯರ ಸಹಕಾರದೊಂದಿಗೆ ಬೋನಿನಲ್ಲಿರುವ ಚಿರತೆಯನ್ನು ಸಂರಕ್ಷಿಸಿ, ಹುಲಿಕಲ್ ಘಾಟ್ ರಕ್ಷಿತಾರಣ್ಯದಲ್ಲಿ ಬಿಟ್ಟಿದ್ದಾರೆ.
