ಕೆಎಂಸಿ ಮಣಿಪಾಲದಲ್ಲಿ ಮೂರು ದಿನಗಳ ಔಷಧಿ ರಾಷ್ಟ್ರೀಯ ಕಾರ್ಯಾಗಾರ
ಭಾರತದಲ್ಲಿ ಟ್ರಾನ್ಸ್‌ಫ್ಯೂಷನ್ ಮೆಡಿಸಿನ್ ಕ್ಷೇತ್ರದಲ್ಲಿ ನಡೆದ ಮೊದಲ ಉಪಕ್ರಮ
(Manipala) ಮಣಿಪಾಲ : ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ಇಮ್ಯುನೊಹೆಮಟಾಲಜಿ ಮತ್ತು ರಕ್ತ ವರ್ಗಾವಣೆ ವಿಭಾಗ ಹಾಗೂ ಇಮ್ಯುನೊಹೆಮಟಾಲಜಿಯಲ್ಲಿ ಶ್ರೇಷ್ಠತೆಯ ಕೇಂದ್ರವು ಕ್ವಿಡೆಲ್ ಆರ್ಥೋ ಬೆಂಬಲದೊಂದಿಗೆ, “ಲೀನ್ ಸಿಕ್ಸ್ ಸಿಗ್ಮಾ ಇನ್ ಟ್ರಾನ್ಸ್‌ಫ್ಯೂಷನ್ ಮೆಡಿಸಿನ್” ಕುರಿತು ಮೂರು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಆಯೋಜಿಸಿತ್ತು.
ಇದು ಭಾರತದಲ್ಲಿ ಟ್ರಾನ್ಸ್‌ಫ್ಯೂಷನ್ ಮೆಡಿಸಿನ್ ಕ್ಷೇತ್ರದಲ್ಲಿ ನಡೆದ ಮೊದಲ ಉಪಕ್ರಮವಾಗಿದೆ.
ಕಾರ್ಯಾಗಾರವನ್ನು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಉದ್ಘಾಠಿಸಿದರು.
ಅವರು ಮಾತನಾಡಿ, ಆರೋಗ್ಯ ಸೇವೆಯಲ್ಲಿ ಗುಣಮಟ್ಟದ ಸೇವೆಗಳನ್ನು ಒದಗಿಸುವ ಸಂಸ್ಥೆಯ ಬದ್ಧತೆಯನ್ನು ಒತ್ತಿ ಹೇಳಿದರು.
ವಿಭಾಗದ ಮುಖ್ಯಸ್ಥ ಡಾ. ಗಣೇಶ್ ಮೋಹನ್ ಸ್ವಾಗತಿಸಿ, ಪ್ರಯೋಗಾಲಯ ಮತ್ತು ರಕ್ತ ವರ್ಗಾವಣೆ ಪದ್ಧತಿಗಳಲ್ಲಿ ನಿರಂತರ ಕಲಿಕೆ ಹಾಗೂ ಗುಣಮಟ್ಟ ಸುಧಾರಣೆಯ ಮಹತ್ವದ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸೆಂಟರ್ ಆಫ್ ಎಕ್ಸಲೆನ್ಸ್‌ನ ಪ್ರಾಧ್ಯಾಪಕಿ ಮತ್ತು ಸಂಯೋಜಕಿ ಡಾ. ಶಮೀ ಶಾಸ್ತ್ರಿ, ಈ ಕಾರ್ಯಾಗಾರವು ಲೀನ್ ಸಿಕ್ಸ್ ಸಿಗ್ಮಾ ತತ್ವಗಳನ್ನು ಟ್ರಾನ್ಸ್‌ಫ್ಯೂಷನ್ ಮೆಡಿಸಿನ್‌ಗೆ ಸಂಯೋಜಿಸುವ ಪ್ರಯಾಣದಲ್ಲಿ ಒಂದು ಪ್ರಮುಖ ಮೈಲಿಗಲ್ಲು ಎಂದ ಅವರು, ಈ ಕಾರ್ಯಕ್ರಮವು ಕೈಗಾರಿಕೆ – ಶೈಕ್ಷಣಿಕ ಸಹಯೋಗದ ಫಲಿತಾಂಶವಾಗಿದ್ದು, ದಕ್ಷತೆಯನ್ನು ಹೆಚ್ಚಿಸಲು, ತ್ಯಾಜ್ಯವನ್ನು ಕಡಿಮೆ ಮಾಡಲು ಮತ್ತು ಟ್ರಾನ್ಸ್‌ಫ್ಯೂಷನ್ ಸೇವೆಗಳಲ್ಲಿ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರದ ದೃಷ್ಟಿಕೋನಕ್ಕೆ ಅನುಗುಣವಾಗಿದೆ ಎಂದರು.
ತರಬೇತಿ ಅವಧಿಗಳನ್ನು ಅಮೇರಿಕನ್ ಸೊಸೈಟಿ ಫಾರ್ ಕ್ವಾಲಿಟಿ (ASQ) ಯ ಪ್ರಮಾಣೀಕೃತ ತರಬೇತುದಾರರಾದ ಅಭಿಷೇಕ್ ಬುಧರಾಜ ಅವರು ನಡೆಸಿಕೊಟ್ಟರು.
ಅವರು ರಕ್ತ ಕೇಂದ್ರದ ಕಾರ್ಯನಿರ್ವಹಣೆಯಲ್ಲಿ ಅನ್ವಯವಾಗುವ ಲೀನ್ ಸಿಕ್ಸ್ ಸಿಗ್ಮಾದ ಕುರಿತು ಪ್ರಾಯೋಗಿಕ ಪರಿಕರಗಳು ಮತ್ತು ವಿಧಾನಗಳ ಮೂಲಕ ಭಾಗವಹಿಸಿದವರಿಗೆ ಮಾರ್ಗದರ್ಶನ ನೀಡಿದರು.
ಕ್ವಿಡೆಲ್ ಆರ್ಥೋದ ಡಾ. ಶಿಖಾ ಮಲ್ಹೋತ್ರಾ ಮತ್ತು ಶ್ರೀ ಕಮಲ್ ಕಾರ್ಯ ಉಪಸ್ಥಿತರಿದ್ದರು.
ಡಾ. ದೀಪಿಕಾ ಚೆನ್ನಾ ವಂದಿಸಿದರು.
ಭಾರತದಾದ್ಯಂತದ ಪ್ರತಿಷ್ಠಿತ ಸಂಸ್ಥೆಗಳ ಪ್ರತಿನಿಧಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಕಾರ್ಯಾಗಾರದ ಮುಂದುವರಿದ ಭಾಗವಾಗಿ, ಭಾಗವಹಿಸಿದವರು ತಮ್ಮ ತಮ್ಮ ಕೇಂದ್ರಗಳಲ್ಲಿ ಲೀನ್ ಸಿಕ್ಸ್ ಸಿಗ್ಮಾ ಪರಿಕಲ್ಪನೆಗಳನ್ನು ಕಾರ್ಯಗತಗೊಳಿಸಲು 100 ದಿನಗಳ ಯೋಜನೆಯನ್ನು ಕೈಗೊಳ್ಳುತ್ತಾರೆ, ಇದು ಗುಣಮಟ್ಟದ ಸುಧಾರಣೆಯ ಸಂಸ್ಕೃತಿಯನ್ನು ಬೆಳೆಸುತ್ತದೆ.

