• Home  
  • ಕೊನೆಗೂ ಮಾಧ್ಯಮ ಶಕ್ತಿಗೆ ತಲೆಬಾಗಿ ಕ್ಷಮೆ ಕೋರಿದ ದರ್ಶನ್
- ಮನೋರಂಜನೆ

ಕೊನೆಗೂ ಮಾಧ್ಯಮ ಶಕ್ತಿಗೆ ತಲೆಬಾಗಿ ಕ್ಷಮೆ ಕೋರಿದ ದರ್ಶನ್

Share: ಕೊನೆಗೂ ಮಾಧ್ಯಮ ಶಕ್ತಿಗೆ ತಲೆಬಾಗಿ ಕ್ಷಮೆ ಕೋರಿದ ಚಿತ್ರ ನಟ ದರ್ಶನ್  ಬೆಂಗಳೂರು: ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಮಾಧ್ಯಮಗಳ ನಡುವಿನ ಮುನಿಸು 2 ವರ್ಷಗಳ ಬಳಿಕ ಮರೆಯಾಗಿದೆ.   ವರಮಹಾಲಕ್ಷ್ಮೀ ಹಬ್ಬವಾದ ಇಂದು ಶುಭಾಶಯ ಕೋರಿದ ದರ್ಶನ್ ಕರ್ನಾಟಕ ಮಾಧ್ಯಮ ಮತ್ತು ಪತ್ರಕರ್ತರ ಕ್ಷಮೆ ಯಾಚಿಸಿ ಎಕ್ಸ್(ಟ್ವಿಟರ್)ನಲ್ಲಿ ಪೋಸ್ಟ್ ಹಾಕಿದ್ದಾರೆ.  ಸುಮಾರು ಎರಡು ವರ್ಷಗಳಿಂದ ಕರ್ನಾಟಕದ ಎಲ್ಲಾ ಮಾಧ್ಯಮಗಳು ದರ್ಶನ್ ಸುದ್ದಿಯನ್ನು ನಿಷೇಧಿಸಿದ್ದವು. ಯಾವುದೇ ರೀತಿಯ ಸುದ್ದಿ, ಸಿನಿಮಾ ಪ್ರಚಾರದ ಬಗ್ಗೆ ವಿವರಗಳು […]

ಕೊನೆಗೂ ಮಾಧ್ಯಮ ಶಕ್ತಿಗೆ ತಲೆಬಾಗಿ ಕ್ಷಮೆ ಕೋರಿದ ಚಿತ್ರ ನಟ ದರ್ಶನ್

 ಬೆಂಗಳೂರು: ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಮಾಧ್ಯಮಗಳ ನಡುವಿನ ಮುನಿಸು 2 ವರ್ಷಗಳ ಬಳಿಕ ಮರೆಯಾಗಿದೆ.

  ವರಮಹಾಲಕ್ಷ್ಮೀ ಹಬ್ಬವಾದ ಇಂದು ಶುಭಾಶಯ ಕೋರಿದ ದರ್ಶನ್ ಕರ್ನಾಟಕ ಮಾಧ್ಯಮ ಮತ್ತು ಪತ್ರಕರ್ತರ ಕ್ಷಮೆ ಯಾಚಿಸಿ ಎಕ್ಸ್(ಟ್ವಿಟರ್)ನಲ್ಲಿ ಪೋಸ್ಟ್ ಹಾಕಿದ್ದಾರೆ.

 ಸುಮಾರು ಎರಡು ವರ್ಷಗಳಿಂದ ಕರ್ನಾಟಕದ ಎಲ್ಲಾ ಮಾಧ್ಯಮಗಳು ದರ್ಶನ್ ಸುದ್ದಿಯನ್ನು ನಿಷೇಧಿಸಿದ್ದವು. ಯಾವುದೇ ರೀತಿಯ ಸುದ್ದಿ, ಸಿನಿಮಾ ಪ್ರಚಾರದ ಬಗ್ಗೆ ವಿವರಗಳು ಪ್ರಕಟವಾಗಿರಲಿಲ್ಲ. ಹೀಗಾಗಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮತ್ತು ಎಡಿಟರ್ಸ್ ಗಿಲ್ಡ್ ಆಫ್ ಬೆಂಗಳೂರು ನೇತೃತ್ವದಲ್ಲಿ ನಡೆಸಿ ಪ್ರಕರಣ ಇತ್ಯರ್ಥಪಡಿಸಲು ನಿರ್ಧರಿಸಲಾಯಿತು.

 ಪರಭಾಷೆಯ ಚಿತ್ರಗಳ ಎದುರು ಕನ್ನಡ ಸಿನೆಮಾಗಳು ಗೆಲ್ಲಬೇಕಿದ್ದರೆ ಮಾಧ್ಯಮಗಳ ನೆರವೂ ಬೇಕು ಎಂದು ರಾಕ್ ಲೈನ್ ವೆಂಕಟೇಶ್ ಹೇಳಿದ್ದರು. ಮಾಧ್ಯಮ ಯಾರನ್ನೂ ದ್ವೇಷಿಸುವುದಿಲ್ಲ. ಎಲ್ಲರೂ ಜೊತೆಯಾಗಿ ನಡೆಯೋಣ ಎಂದು ಸಂಪಾದಕರ ಸಭೆ ಅಭಿಪ್ರಾಯಪಟ್ಟಿತು.

 ಸಮಸ್ತ ಕರ್ನಾಟಕದ ಜನತೆಗೆ ನನ್ನ ಸೆಲೆಬ್ರಿಟಿಗಳಿಗೆ ಹಾಗೂ ಹಿರಿಯ ಪತ್ರಕರ್ತರಿಗೆ, ಮಾಧ್ಯಮ ಮಿತ್ರರಿಗೆ ವರ ಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು. ಸುಮಾರು ಎರಡು ವರ್ಷಗಳಿಂದ ನನ್ನ ಮತ್ತು ಕನ್ನಡ ಮಾಧ್ಯಮ ಮಿತ್ರರ ನಡುವೆ ಒಂದು ಕಂದಕ ಉಂಟಾಗಿತ್ತು. ಈ ವರಮಹಾಲಕ್ಷ್ಮೀ ಹಬ್ಬದ ಮುನ್ನಾ ದಿನ ಮಿತ್ರ ರಾಕ್ ಲೈನ್ ವೆಂಕಟೇಶ್ ನೇತೃತ್ವದಲ್ಲಿ ನನ್ನ ಮತ್ತು ಕನ್ನಡದ ಪ್ರಮುಖ ಮಾಧ್ಯಮಗಳ ಸಂಪಾದಕರ ನಡುವೆ ಮಾತುಕತೆ ನಡೆದು ಪ್ರಕರಣ ಸುಖಾಂತ್ಯಗೊಂಡಿದೆ.

 ಕೆಲ ವರ್ಷಗಳ ಹಿಂದಿನ ನನ್ನ ಆಡಿಯೋವೊಂದು ದುರುದ್ದೇಶಪೂರ್ವಕವಾಗಿ ವೈರಲ್ ಆಗಿ ಇಡೀ ವಿವಾದಕ್ಕೆ ಕಾರಣವಾಗಿತ್ತು. ಅದು ಯಾವುದೋ ವಿಷ ಘಳಿಗೆಯಲ್ಲಿ ಒಬ್ಬ ವ್ಯಕ್ತಿಯ ಮಾತಿಗೆ ಪ್ರತಿಕ್ರಿಯೆಯಾಗಿತ್ತು. ಅದು ಮಾಧ್ಯಮದ ಇತರ ವ್ಯಕ್ತಿಗಳನ್ನು ಕುರಿತು ಆಡಿದ ಮಾತಾಗಿರಲಿಲ್ಲ. ಆ ವ್ಯಕ್ತಿ ಯಾವ ದುರುದ್ದೇಶದಿಂದ ಮಾಡಿದರೋ ಗೊತ್ತಿಲ್ಲ. ಆದರೂ ಆ ವ್ಯಕ್ತಿಗೆ ಒಳ್ಳೆಯದಾಗಲಿ. ಮುಂದೆ ಆ ವ್ಯಕ್ತಿಯ ದುರುದ್ದೇಶ ಮರುಕಳಿಸದಿರಲಿ. ಆದರೂ ಅಂತಹ ಮಾತಿನಿಂದ ನೋವುಂಟಾಗಿದ್ದರೆ ಮಾಧ್ಯಮದ ಹಿರಿಯರಿಗೆ ಕ್ಷಮೆ ಕೊರುವುದರಲ್ಲಿ ತಪ್ಪಿಲ್ಲ. ಈ ಅಯಾಚಿತ ಘಟನೆಗೆ ಪ್ರಜಾಪ್ರಭುತ್ವದ 4ನೇ ಅಂಗವಾದ ಮಾಧ್ಯಮ ರಂಗದ ಕ್ಷಮೆ ಇರಲಿ.

  ಒಂದು ಉತ್ತಮವಾದ ಸಮಾಜಕ್ಕೆ ಒಳ್ಳೆಯ ಮಾಧ್ಯಮಗಳ ಅಗತ್ಯವಿದೆ. ನನಗೂ ಮಾಧ್ಯಮಗಳ ಬಗ್ಗೆ ಗೌರವವಿದೆ. ಚಿತ್ರರಂಗದ ನನ್ನ ಬೆಳವಣಿಗೆಯಲ್ಲಿ ಮಾಧ್ಯಮಗಳು ಪ್ರೀತಿಯಿಂದ ನೀಡಿದ ಪ್ರಚಾರದ ಪಾಲೂ ಸಾಕಷ್ಟಿದೆ.

  ಈ ಹಿಂದೆ ಆಗಿರುವ ಕಹಿ ಘಟನೆಯನ್ನು ಮರೆತು ನಾವೆಲ್ಲ ಮುಂದೆ ಸಾಗೋಣ. ಕನ್ನಡ, ಕನ್ನಡಿಗರು, ಕನ್ನಡ ನೆಲ ಜಲ, ಕನ್ನಡ ಚಿತ್ರರಂಗದ ಪ್ರಗತಿಗೆ ಜೊತೆಯಾಗಿ ಕೆಲಸ ಮಾಡೋಣ. ಪ್ರೀತಿಯಿರಲಿ, ನನ್ನ ಪ್ರೀತಿಯ ಸೆಲೆಬ್ರಿಟಿಗಳು ನನ್ನ ಭಾವನೆಯನ್ನು ಗೌರವಿಸುತ್ತಾರೆ ಎಂದು ಭಾವಿಸುತ್ತೇನೆ-ಪ್ರೀತಿಯಿಂದ ದರ್ಶನ್ ತೂಗುದೀಪ.

Leave a comment

Your email address will not be published. Required fields are marked *

eMedia Kannada  @2025. All Rights Reserved.