ಮುದರಂಗಡಿ ಅಂಗನವಾಡಿ ಕೇಂದ್ರದ ಬಳಿ ಮರಗಳ ಸಾಲು: ತೆರವಿಗೆ ಪಾಲಕರ ಆಗ್ರಹ.
ಉಡುಪಿ: ಮದರಂಗಡಿ ಗ್ರಾಮ ಪಂಚಾಯಿತಿಯ ಸಾಂತೂರು ಗ್ರಾಮದ ಚರ್ಚ್ ಎದುರಿರುವ ಅಂಗನವಾಡಿ ಕೇಂದ್ರದ ಎದುರು ನಾಲ್ಕು ಬೃಹತ್ ಮರಗಳಿದ್ದು, ಮರ ತೆರವುಗೊಳಿಸಲು ಹಿಂದೇಟು ಹಾಕುತ್ತಿರುವ ಅರಣ್ಯ ಇಲಾಖೆಯ ಬೇಜವಾಬ್ದಾರಿಯಿಂದಾಗಿ ಅಂಗನವಾಡಿಗೆ ಮಕ್ಕಳನ್ನು ಕಳುಹಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ.
ಇಪ್ಪತ್ತಕ್ಕೂ ಅಧಿಕ ಮಕ್ಕಳಿದ್ದ ಅಂಗನವಾಡಿ ಕೇಂದ್ರದಲ್ಲಿ ಈಗ ಕೇವಲ 10 ಮಕ್ಕಳು ಮಾತ್ರ ಇದ್ದಾರೆ.
ಮುದರಂಗಡಿ ಗ್ರಾಮ ಪಂಚಾಯತ್ ಹಲವಾರು ಬಾರಿ ಈ ಬಗ್ಗೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರೂ, ಅರಣ್ಯ ಇಲಾಖಾಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಕೆಲಸ ಬಾಕಿ ಉಳಿದಿದೆ. ಗಾಳಿ, ಮಳೆಗೆ ಯಾವ ಹೊತ್ತಿನಲ್ಲೂ ಮರ ಅಂಗನವಾಡಿ ಕೇಂದ್ರದ ಮೇಲೆ ಉರುಳಿ ಬೀಳುವ ಸಾಧ್ಯತೆ ಇದೆ.
ಈ ಬಗ್ಗೆ ಗ್ರಾಮ ಪಂಚಾಯತ್ ಸದಸ್ಯ ಶರತ್ ಶೆಟ್ಟಿ ಹಾಗೂ ಶಿವರಾಮ್ ಬಂಡಾರಿ ಅವರು ಆಕ್ರೋಶಿತರಾಗಿ ಮಾತನಾಡಿದ್ದಾರೆ.
ಮುದರಂಗಡಿ ಗ್ರಾಮ ಪಂಚಾಯತ್ ಪಿಡಿಓ ಮುತ್ತುರವರು ಪ್ರತಿಕ್ರಿಯಿಸಿ, ಈಗಾಗಲೇ ಅರಣ್ಯ ಇಲಾಖೆಗೆ ತಿಳಿಸಲಾಗಿದೆ. ಅವರು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದರು.
ಅಂಗನವಾಡಿಯಲ್ಲಿರುವ ಮಕ್ಕಳ ಪಾಲಕರು ಶೀಘ್ರ ಮರ ತೆರವಿಗೆ ಆಗ್ರಹಿಸಿದ್ದಾರೆ.
