ಕೋಟ ದೇಗುಲದಲ್ಲಿ ಇತ್ತೀಚೆಗೆ ಅಗಲಿದ ಯಕ್ಷಲೋಕದ ಶ್ರೇಷ್ಠ ಭಾಗವತ ಸುಬ್ರಹ್ಮಣ್ಯ ಧಾರೇಶ್ವರರಿಗೆ ನುಡಿ ನಮನ
ಭಾಗವತ ಸುಬ್ರಹ್ಮಣ್ಯ ಧಾರೇಶ್ವರರ ಜೀವನ ಯಶೋಗಾಧೆ ವಿಶೇಷವಾದದ್ದು– ರಾಘವೇಂದ್ರ ಮಯ್ಯ
(Kota) ಕೋಟ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರರ ಜೀವನ ಯಶೋಗಾಧೆ ವಿಶೇಷವಾದದ್ದು. ಅವರ ಅಗಲುವಿಕೆ ಯಕ್ಷಲೋಕ ಶೋಕ ಸಾಗರದಲ್ಲಿ ಮುಳುಗುವಂತಾಗಿದೆ ಎಂದು ಕೋಟ ಅಮೃತೇಶ್ವರಿ ಮೇಳದ ಪ್ರಧಾನ ಭಾಗವತ ಹಾಲಾಡಿ ರಾಘವೇಂದ್ರ ಮಯ್ಯ ಹೇಳಿದರು.
ಶನಿವಾರ ಕೋಟ ಅಮೃತೇಶ್ವರಿ ದೇಗುಲದ ಸಭಾಂಗಣದಲ್ಲಿ ಇಂಡಿಕಾ ಕಲಾ ಬಳಗ ಪಡುಕರೆ, ಕೋಟ ಪಂಚವರ್ಣ ಯುವಕ ಮಂಡಲ, ಮಹಿಳಾ ಮಂಡಲದ ಆಶ್ರಯದಲ್ಲಿ ಇತ್ತೀಚೆಗೆ ಅಗಲಿದ ಯಕ್ಷಲೋಕದ ಶ್ರೇಷ್ಠ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಡಗುತಿಟ್ಟಿನ ಹೆಚ್ಚಿನ ಯಕ್ಷ ಕಲಾವಿದರಿಗೆ ಈ ಕೋಟ ತವರು ಮನೆಯ ರೀತಿಯಲ್ಲಿ ಸೃಷ್ಠಿಸಿಕೊಂಡಿದ್ದಾರೆ. ಅದರಲ್ಲಿ ಚಿಟ್ಟಾಣಿ, ಧಾರೇಶ್ವರರು ಮೊದಲಿಗರಾಗಿದ್ದಾರೆ. ಯಕ್ಷಲೋಕದಲ್ಲಿ ಸಣ್ಣ ರೀತಿಯ ಕಾರ್ಯನಿರ್ವಹಿಸಿ ಬಹು ಎತ್ತರಕ್ಕೆ ಬೆಳೆದ ಕಲಾವಿದರಿದ್ದರೆ ಅದು ಧಾರೇಶ್ವರರು. ರಾಘವೇಂದ್ರ ಮಯ್ಯರವರು ಧಾರೇಶ್ವರ ನಡುವಿನ ಸಂಬಂಧಗಳನ್ನು ನುಡಿನಮನದಲ್ಲಿ ತೆರೆದಿಟ್ಟರು.
ಸುಬ್ರಹ್ಮಣ್ಯ ಧಾರೇಶ್ವರ ಭಾವಚಿತ್ರಕ್ಕೆ ಕೋಟ ಅಮೃತೇಶ್ವರಿ ದೇಗುಲದ ಪೂರ್ವಾಧ್ಯಕ್ಷ ಆನಂದ್ ಸಿ ಕುಂದರ್ ಪುಷ್ಪಾರ್ಚನೆಗೈದು, ನಮ್ಮೀ ಪರಿಸರದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿ ಅಮೃತೇಶ್ವರಿ ಮೇಳದಿಂದ ಕಲಾಕ್ಷೇತ್ರ ಆರಂಭಿಸಿಕೊಂಡವರಲ್ಲಿ ಧಾರೇಶ್ವರರು ಒಬ್ಬರು. ಅಂತಹ ಮಹಾನ್ ಕಲಾವಿದನನ್ನು ಕಳೆದುಕೊಂಡ ಕಲಾಕ್ಷೇತ್ರ ಬಡವಾಗಿದೆ. ಯಕ್ಷ ಕಲಾಕ್ಷೇತ್ರಕ್ಕೆ ಧಾರೇಶ್ವರರ ಕೊಡುಗೆ ಅನನ್ಯವಾದದ್ದು ಎಂದರು.
ಸಭೆಯಲ್ಲಿ ಇಂಡಿಕಾ ಕಲಾ ಬಳಗದ ಅಧ್ಯಕ್ಷ ಎಂ. ಜಯರಾಮ್ ಶೆಟ್ಟಿ, ಸಂಯೋಜಕ ಸಂತೋಷ್ ಕುಮಾರ್ ಕೋಟ, ಕೋಟ ಅಮೃತೇಶ್ವರಿಮೇಳದ ವ್ಯವಸ್ಥಾಪಕ ಸುರೇಶ್ ಬಂಗೇರ, ನ್ಯಾಯವಾದಿ ಟಿ ಮಂಜುನಾಥ ಗಿಳಿಯಾರು, ಪಂಚವರ್ಣದ ಸಂಘಟನಾ ಕಾರ್ಯದರ್ಶಿ ಗಿರೀಶ್ ಆಚಾರ್, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಮತ್ತಿತರರು ಇದ್ದರು.
ಕೋಟ ಚಂದ್ರ ಆಚಾರ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

