ಗ್ರಾಮ ಪಂಚಾಯತ್ ಎದುರು ಬಿಜೆಪಿಗರ ಪ್ರತಿಭಟನೆ ಹಾಸ್ಯಾಸ್ಪದ : ಮಾಜಿ ಸಚಿವ ಸೊರಕೆ
(Kaup) ಕಾಪು: ಬಿಜೆಪಿಯ ಪಂಚಾಯತ್ ಸದಸ್ಯರುಗಳೇ ಪಂಚಾಯತಿ ಎದುರು ಪ್ರತಿಭಟನೆ ಮಾಡುತ್ತಿದ್ದಾರೆ. ಇದು ಹಾಸ್ಯಾಸ್ಪದ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.
ಅವರು ಮಂಗಳವಾರ ಬೆಳಿಗ್ಗೆ ಕಾಪು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಬಿಜೆಪಿಗರು ಇಂತಹ ಬೀದಿ ನಾಟಕ ಮಾಡುವುದನ್ನು ಬಿಟ್ಟುಬಿಡಿ. ನಾವು ಪಂಚಾಯತಿಯಲ್ಲಿ ವಿರೋಧ ಪಕ್ಷದಲ್ಲಿ ಇರುವವರು. ನಾವು ಕೂಡ ಮುಂದಿನ ದಿನಗಳಲ್ಲಿ ಮನೆ ನಿವೇಶನದ ಬಗ್ಗೆ ಮತ್ತು ಪಂಚಾಯಿತಿಯ ಧೋರಣೆ ಖಂಡಿಸಿ ಪ್ರತಿಭಟನೆ ಮಾಡುವವರಿದ್ದೇವೆ ಎಂದರು.
ಪ್ರತಿಭಟನೆಯಲ್ಲಿ ಪಂಚಾಯತ್ ಅಧ್ಯಕ್ಷರುಗಳೇ ಭಾಗಿಯಾಗಿ, ಅವರೇ ಮನವಿ ಸ್ವೀಕರಿಸುವುದು ಹಾಸ್ಯಾಸ್ಪದ ಎಂದೂ ಸೊರಕೆ ಲೇವಡಿಯಾಡಿದ್ದಾರೆ.
ಕಾಪು ಬ್ಲಾಕ್ ನ ಅಧ್ಯಕ್ಷ ವೈ. ಸುಕುಮಾರ್ ಮಾತನಾಡಿ, ಜನ ಸಾಮಾನ್ಯರ ಕಾಳಜಿ ಇಟ್ಟುಕೊಂಡು ಅಲ್ಲಿರುವ ಸಮಸ್ಯೆಯನ್ನು ಬಗೆಹರಿಸುವುದನ್ನು ಬಿಟ್ಟು ಕಂದಕ ತೋಡಿ ಅದರಲ್ಲಿ ದೂಡುವಂತಹ ಕೆಲಸವನ್ನು ಮಾಡಬಾರದು. ರಾಜ್ಯ ಸರಕಾರ ಜಾರಿಗೊಳಿಸಿದ ಗ್ಯಾರಂಟಿಯಿಂದಾಗಿ ಜನರು ನೆಮ್ಮದಿಯಿಂದ ಬದುಕುತ್ತಿದ್ದಾರೆ ಅಂತಹ ಜನರ ಭಾವನೆಗಳ ದಿಕ್ಕು ತಪ್ಪಿಸುವ ಸಲುವಾಗಿ ಪ್ರತಿಭಟನೆ ಎಂಬ ನಾಟಕ ಮಾಡುತ್ತಿದ್ದಾರೆ ಎಂದರು.
ಈ ಸಂದರ್ಭ ಕಾಪು ಕಾಂಗ್ರೆಸ್ ಮಾಜಿ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಿಯಾಝ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಲತಾ ಶೆಟ್ಟಿ, ಕಾಪು ದಿವಾಕರ ಶೆಟ್ಟಿ ಕಾಪು ಉಪಸ್ಥಿತರಿದ್ದರು.

