ಚಿಕ್ಕೋಡಿ : ನಿರಂತರ ಲೋಡ್‌ಶೆಡ್ಡಿಂಗ್ ವಿರುದ್ಧ ಹೆಸ್ಕಾಂ ಕಚೇರಿ ಎದುರು ಪ್ರತಿಭಟನೆ
ಪ್ರತಿಭಟನೆಯ ನೇತೃತ್ವ ವಹಿಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು
(Chikkodi) ಚಿಕ್ಕೋಡಿ : ಚಿಕ್ಕೋಡಿ ಪಟ್ಟಣದ ಹೆಸ್ಕಾಂ ಕಚೇರಿ ಎದುರು ಲೋಡ್‌ಶೆಡ್ಡಿಂಗ್ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ರೈತರ ಪಂಪ್‌ಸೆಟ್‌ಗಳಿಗೆ ಸತತ ಏಳು ಗಂಟೆಗಳ ಕಾಲ ತ್ರಿ-ಫೇಸ್ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿ ಹೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಗಿದೆ.
ಕರವೇ ಚಿಕ್ಕೋಡಿ ತಾಲೂಕಾ ಅಧ್ಯಕ್ಷ ಸಂಜು ಬಡಿಗೇರ ಮಾತನಾಡಿ, ಕಳೆದ ಕೆಲವು ದಿನಗಳಿಂದ ಅಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿದೆ. ಇದರಿಂದ ಬೆಳೆಗಳಿಗೆ ನೀರು ಇಲ್ಲದೇ ಒಣಗುತ್ತಲಿವೆ. ಶಾಸಕರು ರೈತರ ಬಗ್ಗೆ ಕಿಂಚಿತ್ತೂ ವಿಚಾರ ಮಾಡುತ್ತಿಲ್ಲ. ರೈತರ ತೊಂದರೆಗಳನ್ನು ಆಲಿಸದ ಶಾಸಕರು ಯಾವಾಗಲೂ ರಸ್ತೆ-ಗಟಾರ-ಸಮುದಾಯ ಭವನಗಳ ನಿರ್ಮಾಣದಲ್ಲಿ ವ್ಯಸ್ತರಾಗಿರುತ್ತಾರೆ. ಕೂಡಲೇ ಸತತ ಏಳು ಘಂಟೆ ರೈತರಿಗೆ ವಿದ್ಯುತ್ ನೀಡಲು ಸೂಚಿಸಬೇಕೆಂದು ಹೇಳಿದರು.
ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮಾತನಾಡಿ, ವಿದ್ಯುತ್ ಇಲ್ಲದೇ ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರೈತರ ಪಂಪ್‌ಸೆಟ್‌ಗಳಿಗೆ ಸತತ ಏಳು ಗಂಟೆಗಳ ಕಾಲ ತ್ರಿ-ಫೇಸ್ ವಿದ್ಯುತ್ ಪೂರೈಕೆ ಮಾಡಬೇಕು. ಕೃಷಿಗೆ ಅಗತ್ಯವಿರುವ ಸಮಯದಲ್ಲಿ ವಿದ್ಯುತ್ ಕಡಿತ ಮಾಡಿದರೆ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಇಂಧನ ಸಚಿವರು ಏಳು ಗಂಟೆ ರೈತರಿಗೆ ತ್ರೀಫೇಸ್ ವಿದ್ಯುತ್ ನೀಡುತ್ತೇವೆ ಅಂತಾ ಹೇಳ್ತಾರೆ. ಆದರೆ ವಾಸ್ತವದಲ್ಲಿ ಸರಿಯಾದ ಪೂರೈಕೆ ಇರುವುದಿಲ್ಲ. “ನೀರು ಇದ್ದಾಗ ವಿದ್ಯುತ್ ಕಡಿತ ಮಾಡಿದರೆ ರೈತರು ಬದುಕುವುದು ಹೇಗೆ?” ಎಂದು ಪ್ರಶ್ನಿಸಿದರು.
ಪ್ರತಿಭಟನಾಕಾರರು, ಲೋಡ್‌ಶೆಡ್ಡಿಂಗ್‌ನಿಂದ ರೈತರ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.
ಈ ಸಂಧರ್ಭದಲ್ಲಿ ಶಂಕರ ಅವಡಖಾನ, ಮೋಹನ ಪಾಟೀಲ, ಅಪ್ಪಾಸಾಹೇಬ ಹಿರೇಕುಡಿ, ಪ್ರತಾಪ ಪಾಟೀಲ, ಸಂತೋಷ ಪೂಜೇರಿ, ಗುರುನಾಥ ಹೆಗಡೆ, ಶಂಕರ ಹೆಗಡೆ, ರಾಜೇಂದ್ರ ಕಾಂಬಳೆ, ದುಂಡಪ್ಪಾ ಚೌಗಲಾ, ಬಸಗೌಡ ಸೋಮನ್ನವರ, ಅಮೂಲ ನಾವಿ, ರಮೇಶ ಡಂಗೇರ, ಗಗನ ರೆಂದಾಳೆ, ಬಾಲಕೃಷ್ಣ ಬೇಕ್ಕೆರ, ವಿಜಯ ಪಾಟೀಲ, ಸೌರಭ ಹಿರೇಮಠ, ಸಂತೋಷ ಪಾಟೀಲ, ಆನಂದ ಪಾಟೀಲ, ವಿಠ್ಠಲ ಮಾನೆ, ಮಾರುತಿ ಕಟ್ಟಿಕರ, ಶಿವಾಜಿ ಖಾಡೆ, ಬಾಸ್ಕರ ಗೌಂಡಿ, ಶುಭಂ ಕದಂ, ರುದ್ರಯ್ಯ ಹಿರೇಮಠ ಹಾಗೂ ನೂರಾರು ರೈತರು ಮತ್ತು ಕನ್ನಡಪರ ಹೋರಾಟಗಾರರು ಉಪಸ್ಥಿತರಿದ್ದರು.
ವರದಿ : ಮಹೇಶ್ ಶರ್ಮಾ

