ಅಫಜಲಪುರ ಕೆರೆ ತುಂಬಿದ ಮೇಲಷ್ಟೇ ಅಮರ್ಜಾ ಡ್ಯಾಂಗೆ ನೀರು ಬಿಡಲು ಮನವಿ
ಅಫಜಲಪುರದಲ್ಲಿ ರೈತರಿಂದ ರಸ್ತೆ ತಡೆ ನಡೆಸಿ ಬೃಹತ್ ಪ್ರತಿಭಟನೆ
(Afjalpura) ಅಫಜಲಪುರ: ಸ್ಥಳೀಯ ಕೆರೆಗಳಿಗೆ ನೀರು ತುಂಬಿಸಿದ ನಂತರವೇ ಅಮರ್ಜಾ ಜಲಾಶಯಕ್ಕೆ ನೀರು ಹರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನೂರಾರು ರೈತರು ರಾಜ್ಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಮಹಾಂತೇಶ್ ಜಮಾದಾರ್, “ನಮ್ಮ ಭಾಗದ ಕೆರೆಗಳು ಭರ್ತಿಯಾಗುವ ಮುನ್ನ ಯಾವುದೇ ಕಾರಣಕ್ಕೂ ಅಮರ್ಜಾ ಡ್ಯಾಂಗೆ ನೀರು ಬಿಡಬಾರದು. ಮೊದಲು ನಮ್ಮ ಕೆರೆಗಳನ್ನು ತುಂಬಿಸಿ ಅಂತರ್ಜಲ ಮಟ್ಟ ಹೆಚ್ಚಿಸಬೇಕು. ರೈತರ ಈ ನ್ಯಾಯಯುತ ಬೇಡಿಕೆಯನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಅಫಜಲಪುರ ಶಾಸಕರ ಮನೆಗೆ ಮುತ್ತಿಗೆ ಹಾಕುವುದು ಖಚಿತ,” ಎಂದು ಖಾರವಾಗಿ ಎಚ್ಚರಿಕೆ ನೀಡಿದರು.
ರಸ್ತೆ ತಡೆದು ನಡೆಸಿದ ಧರಣಿಯಿಂದಾಗಿ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ವಿಷಯ ತಿಳಿದ ತಕ್ಷಣ ಭೀಮಾ ಏತ ನೀರಾವರಿ ಯೋಜನೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (AEE) ಹಾಗೂ ತಾಲೂಕು ತಹಸೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿದರು.
ರೈತರ ಅಹವಾಲುಗಳನ್ನು ಆಲಿಸಿದ ಅಧಿಕಾರಿಗಳು, ಕೆರೆ ತುಂಬಿಸುವ ಸಂಬಂಧ ಸೂಕ್ತ ಕ್ರಮ ಕೈಗೊಂಡು ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸುವುದಾಗಿ ಭರವಸೆ ನೀಡಿದರು. ಅಧಿಕಾರಿಗಳ ಸ್ಪಷ್ಟ ಭರವಸೆಯ ನಂತರ ರೈತರು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದರು.
ಈ ಸಂದರ್ಭದಲ್ಲಿ ಅಫಜಲಪುರ ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ನೂರಾರು ರೈತರು ಉಪಸ್ಥಿತರಿದ್ದರು.
ವರದಿ : ಮಹೇಶ್ ಶರ್ಮಾ

