ಜನಪದ ಪರಂಪರೆಯನ್ನು ಕಡೆಗಣಿಸಬಾರದು: ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಡಾ. ಗಣೇಶ್ ಅಮೀನ್ ಸಂಕಮಾರ್ ಮನವಿ
ಮೂಲ್ಕಿ; ನಮ್ಮಲ್ಲಿ ಸಮೃದ್ಧವಾದ ಮೌಖಿಕ ಸಾಹಿತ್ಯವಿದೆ. ಇಲ್ಲಿನ ಮಾತೃ ಭಾಷೆಯಲ್ಲಿ ಇರುವ ಪ್ರಕಾರಗಳ ಬಗ್ಗೆ ಅಧ್ಯಯನಗಳು ನಡಯಬೇಕು. ಪಾಡ್ದನಕಾರರು, ದೈವ ಕಲಾವಿದರು, ವಿವಿಧ ಕುಲ ಕಸುಬುಗಳು ಅಳಿವಿನ ಅಂಚಿನಲ್ಲಿವೆ. ಅವುಗಳಿಗೆ ಪ್ರೋತ್ಸಾಹ ನೀಡಬೇಕು. ಕಾಂತಾಬಾರೆ ಬೂದಾಬಾರೆಯರಂತಹ ವೀರ ಪರಂಪರೆಯ ಪ್ರತಿಭೆಗಳಿಗೆ ಇತಿಹಾಸದಲ್ಲಿ ಮಾನ್ಯತೆ ದೊರೆಯದಿರುವುದು ದುರಂತ. ಈ ಬಗ್ಗೆ ಕೆಲಸಗಳು ನಡೆಯಬೇಕಿದೆ ಎಂದು ಜನಪದ ವಿದ್ವಾಂಸ ಡಾ. ಗಣೇಶ್ ಅಮೀನ್ ಸಂಕಮಾರ್ (DR Ganesh Amin Sankamar)ಹೇಳಿದರು.
ಮೂಲ್ಕಿ-ಕಾರ್ನಾಡು ಸರಕಾರಿ ಪದವಿ ಪೂರ್ವ ಕಾಲೇಜು ಒಳಾಂಗಣ ಸಭಾಂಗಣದಲ್ಲಿ ಬುಧವಾರ ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ನಡೆದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮೂಲ್ಕಿ ತಾಲೂಕಿನಲ್ಲಿ ಉತ್ತಮ ಕನ್ನಡ ಶಾಲೆಗಳು ಅಳಿವಿನಂಚಿನಲ್ಲಿವೆ. ಅವುಗಳನ್ನು ಉಳಿಸುವ ಪ್ರಯತ್ನಗಳಾಗಬೇಕು ಎಂದ ಅವರು, ಧರ್ಮ ಮತ್ತು ಶಿಕ್ಷಣದಲ್ಲಿ ರಾಜಕೀಯ ಸೇರಿಕೊಂಡಾಗ ಅಧಪತನಕ್ಕೆ ಕಾರಣವಾಗುತ್ತದೆ. ಅವಿಭಜಿತ ದಕ ಜಿಲ್ಲೆಯಲ್ಲಿರುವ ಅತಿ ಮೋಹದ ಜಾತಿ ಸಂಘಟನೆಗಳು ಬಹುಸಂಸ್ಕೃತಿಯ ಸಮಾಜದ ವಿಕೃತಿಗೆ ಕಾರಣವಾಗುತ್ತಿವೆ. ಶಿಕ್ಷಣ ಮತ್ತು ಮಾಧ್ಯಮ ಜಗತ್ತು ಉದ್ಯಮವಾಗದೆ ಸಾಮಾಜಿಕ ಸಂದರ್ಭದಲ್ಲಿ ಸರಕಾರ ಮತ್ತು ಜನರಲ್ಲಿ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ ಶಿಸ್ತಿನ ಪ್ರಜ್ಞೆಯನ್ನು ಮೂಡಿಸುವ ಕೆಲಸ ಮಾಡಬೇಕಿದೆ ಎಂದವರು ಹೇಳಿದರು.
ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ ವಿಚಾರವನ್ನು ಹುಟ್ಟಿಸುವ ಇಂತಹ ಸಮ್ಮೇಳನಗಳ ಅವಶ್ಯವಿದೆ. ಮನುಷ್ಯ ಸಂಬಂಧಗಳನ್ನು ಬೆಸೆಯಲು ವಿದ್ಯೆ, ಭಾಷೆಯಿಂದ ಮಾತ್ರ ಸಾಧ್ಯ ಎನ್ನವುದು ಸಾರ್ವಕಾಲಿಕ ಸತ್ಯ. ಬಹು ಸಂಸ್ಕೃತಿಯ ತಾಣ ಮೂಲ್ಕಿ ತಾಲೂಕಿನಲ್ಲಿ ನಡೆಯುತ್ತಿರುವ ಪ್ರಥಮ ಸಮ್ಮೇಳನ ಸಮಾಜವನ್ನು ಪ್ರತ್ಯೇಕತೆಯಿಂದ ಏಕತೆಯ ಕಡೆಗೆ ಸೆಳೆಯಲು ನಾಂದಿಯನ್ನು ಹಾಡಬೇಕಿದೆ. ಕನ್ನಡ ಜಾತ್ರೆ ಎಂಬುದು ಸಂಸ್ಕೃತಿಯ ಯಾತ್ರೆಯಾಗಬೇಕು. ಸಂಸ್ಕಾರದ ಅವಿಷ್ಕಾರವಾಗಬೇಕು ಎಂದವರು ಹೇಳಿದರು.
ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದ ಕ.ಸಾ.ಪ. ಪೂರ್ವಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು(DR Harikrishna Punarooru) ಮಾತನಾಡಿ, ಕನ್ನಡ ಶಾಲೆಗಳ ಉಳಿವಿಗೆ ಪರಿಣಾಮಕಾರಿ ಕೆಲಸದ ಅಗತ್ಯವಿದೆ. ಸರಕಾರ ಈ ಕೆಲಸ ಮಾಡುತ್ತಿಲ್ಲ. ಕನ್ನಡ ಶಾಲೆಗಳಿಗೆ ಶಿಕ್ಷಕರನ್ನು ನೇಮಿಸುತ್ತಿಲ್ಲ. ನಾವು ಎಚ್ಚೆತ್ತುಕೊ೦ಡು ಕನ್ನಡದ ಉಳಿವಿಗೆ ಕಾರ್ಯಸೂಚಿ ಹಮ್ಮಿಕೊಳ್ಳಬೇಕು. ಪಕ್ಕದ ತಮಿಳುನಾಡು-ಕೇರಳಗಳಲ್ಲಿ ಮಾತೃಭಾಷೆಯಲ್ಲೇ ಬೋಧನೆ ಮಾಡಲಾಗುತ್ತಿದೆ. ಇಲ್ಲಿ ತದ್ವಿರುದ್ಧವಾಗಿದೆ. ಅಲ್ಲಲ್ಲಿ ಇಂತಹ ಸಮ್ಮೇಳನಗಳು ನಡೆಯಬೇಕು ಎಂದವರು ಹೇಳಿದರು.
ಪರಿಷತ್ ಧ್ವಜಾರೋಹಣಗೈದು ಆಶಯನುಡಿ ನುಡಿದ ಕಸಾಪ ದ.ಕ. ಜಿಲ್ಲಾಧ್ಯಕ್ಷ ಡಾ. ಎಮ್.ಪಿ. ಶ್ರೀನಾಥ (DR MP Shreenath) ಮಾತನಾಡಿ, ಸಾಹಿತ್ಯಿಕ, ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ದ.ಕ. ಜಿಲ್ಲೆಯ 9 ತಾಲೂಕುಗಳ ಪೈಕಿ ಮೂಲ್ಕಿ ತಾಲೂಕು ಮುಂಚೂಣಿಯಲ್ಲಿದೆ ಎಂದರು.
ಕನ್ನಡ ಭುವನೇಶ್ವರೀ ಮೆರವಣೆಗೆ: ಕಾರ್ನಾಡು ಗಾಂಧಿ ಮೈದಾನದಿಂದ ಸಮ್ಮೇಳನಾ ವೇದಿಕೆಗೆ ಆಗಮಿಸಿದ ಕನ್ನಡ ಭುವನೇಶ್ವರೀ ಮೆರವಣಿಗೆಯಲ್ಲಿ ಸಮ್ಮೇಳನಾಧ್ಯಕ್ಷ ಡಾ. ಗಣೇಶ್ ಅಮೀನ್ ಸಂಕಮಾರ್ರವರನ್ನು ತೆರದ ವಾಹನದ ಮೂಲಕ ತಾಲೂಕಿನ ೩೦ಕ್ಕೂ ಅಧಿಕ ಶಾಲಾ ಮಕ್ಕಳ ಕನ್ನಡ ಘೋಷದೊಂದಿಗೆ, ವೇಷಭೂಷಣಗಳೊಂದಿಗೆ ಕರೆತರಲಾಯಿತು.
ಧ್ವಜಾರೋಹಣ: ಮೂಲ್ಕಿ ತಾಲೂಕು ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ರಾಷ್ಟ್ರಧ್ವಜಾರೋಹಣಗೈದರು.
ಕ.ಸಾ.ಪ. ಮೂಲ್ಕಿ ತಾಲೂಕು ಅಧ್ಯಕ್ಷ ಮಿಥುನ (Moolki Thaluk President Mithun Kodetturu) ಕೊಡೆತ್ತೂರು ಕನ್ನಡ ಧ್ವಜಾರೋಹಣಗೈದರು.
ಕೃತಿ ಬಿಡುಗಡೆ: ಕವಿ ಉದಯಕುಮಾರ್ ಹಬ್ಬು ರಚಿಸಿದ “ಫಾಯಿಯಾನನ ಬೌದ್ಧ ರಾಜ್ಯಗಳ ಯಾತ್ರೆ” ಕೃತಿಯನ್ನು ಕಸಾಪ ಕೇಂದ್ರೀಯ ಮಾರ್ಗದರ್ಶಕ ಸಮಿತಿಯ ಸದಸ್ಯ ಡಾ. ಮುರಳಿ ಮೋಹನ ಚೂಂತಾರು ಬಿಡುಗಡೆಗೊಳಿಸಿದರು.
ವಸ್ತುಪ್ರದರ್ಶನ ಉದ್ಘಾಟನೆ: ಪುಸ್ತಕಗಳು, ಅಂಚೆ ಚೀಟಿ, ಪರಿಸರಪೂರಕ ವಸ್ತುಪ್ರದರ್ಶನವನ್ನು ಡಾ. ಗಣೇಶ್ ಅಮೀನ್ ಸಂಕಮಾರ್ ಉದ್ಘಾಟಿಸಿದರು.
ಬಪ್ಪನಾಡು ದೇವಳದ ಅಡಳಿತ ಮೊಕ್ತೇಸರ ಎನ್.ಎಸ್. ಮನೋಹರ ಶೆಟ್ಟಿ, ಕಸಾಪ ಕೇಂದ್ರೀಯ ಮಾರ್ಗದರ್ಶಕ ಸಮಿತಿಯ ಸದಸ್ಯ ಡಾ. ಮಾಧವ ಎಮ್.ಕೆ., ಮೂಲ್ಕಿ ನ.ಪಂ. ಮುಖ್ಯಾಧಿಕಾರಿ ಇಂದು ಎಮ್., ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಗುರುಶಾಂತಪ್ಪ, ದ.ಕ.ಜಿಲ್ಲಾ ಕಸಾಪ ಸದಸ್ಯ ಮೋಹನದಾಸ ಸುರತ್ಕಲ್, ಮಂಗಳೂರು ತಾಲೂಕು ಕಸಾಪ ಮಾಜಿ ಅಧ್ಯಕ್ಷ ಸರ್ವೋತ್ತಮ ಅಂಚನ್, ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ (ashok kumar Shetty), ಮೂಲ್ಕಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನಿಶಾಂತ್ ಶೆಟ್ಟಿ ಕಿಲೆಂಜೂರು (Nishanth Shetty Kilenjuru), ಮುಂಬಯಿ ಮೊಗವೀರ ಮಾಸಪತ್ರಿಕೆಯ ಸಂಪಾದಕ ಅಶೋಕ್ ಸುವರ್ಣ ಮೂಲ್ಕಿ (Ashok Suvarna Moolki), ದಕ ಕಸಾಪ ಪದಾಧಿಕಾರಿಗಳಾದ ವಿನಯ ಆಚಾರ್ಯ ಮತ್ತು ಚಂದ್ರಹಾಸ ಶೆಟ್ಟಿ, ತಾಲೂಕು ಅಧ್ಯಕ್ಷರಾದ ಡಾ. ಧನಂಜಯ ಕುಂಬ್ಳೆ ಉಳ್ಳಾಲ, ವೇಣುಗೋಪಾಲ ಶೆಟ್ಟಿ ಮೂಡುಬಿದಿರೆ, ಮಂಜುನಾಥ ಎಸ್. ರೇವಣ್ಕರ್ ಮಂಗಳೂರು, ಮೂಲ್ಕಿ ತಾಲೂಕು ಕಾರ್ಯದರ್ಶಿ ಜೊಸ್ಸಿ ಪಿಂಟೋ, ಕಾರ್ನಾಡು ಸರಕಾರಿ ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್ ಡಾ. ವಾಸುದೇವ ಬೆಳ್ಳೆ ಮುಖ್ಯ ಅತಿಥಿಗಳಾಗಿದ್ದರು.
ಸಮ್ಮೇಳನ ಸಮಿತಿಯ ಅಧ್ಯಕ್ಷ ಸುನಿಲ್ ಆಳ್ವ ಸ್ವಾಗತಿಸಿದರು. ಕಸಾಪ ಮೂಲ್ಕಿ ತಾಲೂಕು ಘಟಕದ ಅಧ್ಯಕ್ಷ ಮಿಥುನ ಕೊಡೆತ್ತೂರು ಪ್ರಸ್ತಾವಿಸಿದರು. ಕಾರ್ಯದರ್ಶಿ ದೇವಪ್ರಸಾದ್ ಪುನರೂರು ವಂದಿಸಿದರು. ಅರ್ಪಿತಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

