ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಬೆಳ್ಳಿ ಹಬ್ಬದ ಸಮಾರಂಭಕ್ಕೆ ಸಿಎಂ ಡಿಕೆಶಿಗೆ ಆಹ್ವಾನ
ಆಗಸ್ಟ್ 2026ರಲ್ಲಿ ಮುಂಬಯಿಯಲ್ಲಿ ನಡೆಯಲಿರುವ ಸಮಿತಿಯ ಬೆಳ್ಳಿ ಹಬ್ಬ
(Mumbai) ಮುಂಬಯಿ : ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ಎನ್ಜಿಒ)ಯ ಬೆಳ್ಳಿ ಹಬ್ಬ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ನೀಡಿದ ಆಹ್ವಾನವನ್ನು ಕರ್ನಾಟಕದ ಗೌರವಾನ್ವಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಂತೋಷದಿಂದ ಸ್ವೀಕರಿಸಿದ್ದಾರೆ.
ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಹಾಗೂ ಸಮಿತಿಯ ರಾಜ್ಯ ಸಂಯೋಜಕರಾದ ಕೆ.ಪಿ. ಜಗದೀಶ್ ಅಧಿಕಾರಿ ಅವರು ಜೂನ್ 4, ರಂದು ಸಂಜೆ ಬೆಂಗಳೂರಿನ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ಆಗಸ್ಟ್ 2026ರಲ್ಲಿ ನಡೆಯಲಿರುವ ಸಮಿತಿಯ ಬೆಳ್ಳಿ ಹಬ್ಬದ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರು ಸಮಿತಿಯ ಕಳೆದ 25 ವರ್ಷಗಳ ಸಮಾಜಮುಖಿ ಹಾಗೂ ಪರಿಸರ ಪರ ಸೇವೆಗಳನ್ನು ಶ್ಲಾಘಿಸಿ, ಸಮಿತಿಯ ಕಾರ್ಯಚಟುವಟಿಕೆಗಳ ಬಗ್ಗೆ ತಮಗೆ ಸಂಪೂರ್ಣ ಅರಿವು ಇದೆ ಎಂದು ತಿಳಿಸಿದರು.
ಸಮಿತಿಯ ಆಹ್ವಾನವನ್ನು ತಕ್ಷಣವೇ ಸ್ವೀಕರಿಸಿದ ಅವರು, “ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಬೆಳ್ಳಿ ಹಬ್ಬದಲ್ಲಿ ಭಾಗವಹಿಸುವುದು ನನಗೆ ಸಂತೋಷದ ವಿಷಯ”ಎಂದು ಹೇಳಿದರು.
ಮುಖ್ಯಮಂತ್ರಿಗಳ ಪ್ರಶಂಸೆಯ ಮಾತುಗಳನ್ನು ಆಲಿಸಿದ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಅವರು ಕೃತಜ್ಞತೆಯ ಸೂಚಕವಾಗಿ ಕೈಮುಗಿದು ಧನ್ಯವಾದ ಅರ್ಪಿಸಿದರು.
ಮಾನ್ಯ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತೋನ್ಸೆ ಜಯಕೃಷ್ಣ ಎ ಶೆಟ್ಟಿಯವರ ಮನವಿಯನ್ನು ನಗುಮೊಗದಿಂದ ತಕ್ಷಣ ಒಪ್ಪಿಕೊಂಡು ಸಂಸ್ಥಾಪಕರ ಬೆನ್ನುತಟ್ಟಿ ಸಮಿತಿಯನ್ನು ಬಹಳ ಒಳ್ಳೆಯ ಮಾತುಗಳಿಂದ ಅಭಿನಂದಿಸಿದ್ದಾರೆ.
ಕಳೆದ 25 ವರ್ಷಗಳಿಂದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ (ಉಡುಪಿ ಹಾಗೂ ಮಂಗಳೂರು) ಅಭಿವೃದ್ಧಿಗಾಗಿ ನಿಸ್ವಾರ್ಥವಾಗಿ ಹಾಗೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದೆ. ಪರಿಸರ ಸಂರಕ್ಷಣೆ, ಕೈಗಾರಿಕಾ ಅಭಿವೃದ್ಧಿ, ಮೂಲಸೌಕರ್ಯ ವೃದ್ಧಿ ಹಾಗೂ ಸಾರ್ವಜನಿಕ ಹಿತಾಸಕ್ತಿ ವಿಚಾರಗಳಲ್ಲಿ ಸಮಿತಿಯು ಮಹತ್ವದ ಕೊಡುಗೆ ನೀಡಿದೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ರಾತ್ರಿ ಲ್ಯಾಂಡಿಂಗ್ ಸೌಲಭ್ಯ ಕಲ್ಪಿಸಲು ರನ್ವೇ ವಿಸ್ತರಣೆ, ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಅಭಿವೃದ್ಧಿ, ನಂದಿಕೂರಿನ ವಿದ್ಯುತ್ ಯೋಜನೆ ಅನುಷ್ಠಾನ, ಮಂಗಳೂರು–ಬೆಂಗಳೂರು ರೈಲು ಮಾರ್ಗದ ಬ್ರಾಡ್ ಗೇಜ್ ಪರಿವರ್ತನೆ ಹಾಗೂ ಪುನರಾರಂಭ, ಮಂಗಳೂರು–ಬೈಂದೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪಥೀಕರಣ ಸೇರಿದಂತೆ ಹಲವಾರು ಪ್ರಮುಖ ಅಭಿವೃದ್ಧಿ ಕಾರ್ಯಗಳಲ್ಲಿ ಸಮಿತಿಯು ಸಕ್ರಿಯ ಪಾತ್ರವಹಿಸಿದೆ.
ಇದಲ್ಲದೆ, ಮಾಜಿ ರಕ್ಷಣಾ ಸಚಿವ ಹಾಗೂ ಎನ್ಡಿಎ ಸಂಚಾಲಕರಾಗಿದ್ದ ಪದ್ಮವಿಭೂಷಣ ದಿವಂಗತ ಜಾರ್ಜ್ ಫರ್ನಾಂಡಿಸ್ ಹಾಗೂ ವಿವಿಧ ಜನಪ್ರತಿನಿಧಿಗಳ ಸಹಕಾರದೊಂದಿಗೆ ಮುಂಬಯಿ–ಮಂಗಳೂರು ಗರೀಬ್ ರಥ್ ರೈಲು ಸೇವೆ ಆರಂಭಿಸುವಲ್ಲಿಯೂ ಸಮಿತಿಯ ಪ್ರಯತ್ನಗಳು ಗಮನಾರ್ಹವಾಗಿವೆ.
ಮುಖ್ಯಮಂತ್ರಿಗಳು ಸುಮಾರು ಮೂರು ನಿಮಿಷಗಳ ಕಾಲ ಸಮಿತಿಯ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿ, ಸಮಿತಿಯ ನಿಸ್ವಾರ್ಥ ಸೇವೆಗಳನ್ನು ಮತ್ತೊಮ್ಮೆ ಶ್ಲಾಘಿಸಿದರು.

