ತಾಯಿ ಹೊಸ ಮೊಬೈಲ್ ಕೊಡಿಸಿಲ್ಲವೆಂದು ಆತ್ಮಹತ್ಯೆಗೆ ಶರಣಾದ 16ರ ಬಾಲಕ
ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲು
(Karkala) ಕಾರ್ಕಳ : 16 ವರ್ಷದ ಬಾಲಕನೊಬ್ಬ ಹೊಸ ಮೊಬೈಲ್ ಕೊಡಿಸಲೆಂದು ಅಮ್ಮನ ಹಿಂದೆ ಬಿದ್ದಿದ್ದ. ಆದರೆ, ಅಮ್ಮ ಹೊಸ ಮೊಬೈಲ್ ಕೊಡಿಸುವುದಕ್ಕೆ ಹಿಂದೇಟು ಹಾಕಿದ್ದಾರೆ. ಇದೇ ಕಾರಣಕ್ಕೆ ಬಾಲಕ ಆತ್ಮಹತ್ಯೆಗೆ ಶರಣಾದ ಘಟನೆ ಕಾರ್ಕಳದಲ್ಲಿ ಘಟಿಸಿದೆ.
ನಿಟ್ಟೆಯ ಪ್ರಥಮ ಪಿಯುಸಿ ವಿದ್ಯಾರ್ಥಿ ಸುಮಂತ್ ನಂದಳಿಕೆ (16) ಮೃತ ಬಾಲಕನೆಂದು ಗುರುತಿಸಲಾಗಿದೆ.
ಸುಮಂತ್ ನೀರು ನಿಂತಿದ್ದ ಕಲ್ಲು ಕೋರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನ. 13ರಂದು ನಡೆದಿದೆ.
ಸುಮಂತ್ನ ಮೊಬೈಲ್ ಅನ್ನು ದುರಸ್ತಿಗೆ ನೀಡಲಾಗಿದ್ದು, ಹೊಸ ಮೊಬೈಲ್ ಕೊಡಿಸುವಂತೆ ಗುರುವಾರ ತಾಯಿಯಲ್ಲಿ ಸುಮಂತ್ ಕೇಳಿಕೊಂಡಿದ್ದ. ಕೆಲ ತಿಂಗಳು ಕಳೆದ ಬಳಿಕ ಹೊಸ ಮೊಬೈಲ್ ಕೊಡಿಸುವುದಾಗಿ ಅಮ್ಮ ಸುರೇಖಾ ಭರವಸೆ ನೀಡಿದ್ದರು. ಆದರೆ, ಇದರಿಂದ ಕೋಪಗೊಂಡ ಬಾಲಕ ಮನೆ ಬಿಟ್ಟು ತೆರಳಿ, ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ತಿಳಿದು ಬಂದಿದೆ.
ಸುಮಂತ್ ತಂದೆ ಮಂಜುನಾಥ್ ಕೆಲ ವರ್ಷಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದು, ತಾಯಿ ಅವರಿಗೆ ಸುಮಂತ್ ಏಕೈಕ ಮಗನಾಗಿದ್ದ. ಇದ್ದ ಒಬ್ಬ ಮಗನನ್ನು ಕೂಡಾ ತಾಯಿ ಕಳೆದುಕೊಂಡಿದ್ದಾರೆ.
ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

