ತೆಂಕ ಎರ್ಮಾಳು ಪೂಂದಾಡು ಶಾಂತಿಬೆಟ್ಟು ಮೈದಾನದ ಪರಭಾರೆ ಆದೇಶದ ವಿರುದ್ಧ ಪ್ರತಿಭಟನೆ
ಪಡುಬಿದ್ರಿ, ಜ. 19: ತೆಂಕ ಗ್ರಾ. ಪಂ. ವ್ಯಾಪ್ತಿಯ ಪೂಂದಾಡು ಶಾಂತಿಬೆಟ್ಟು ಮೈದಾನವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶುಕ್ರವಾರದಂದು ತೆಂಕ ಗ್ರಾ. ಪಂ. ಎದುರು ಗ್ರಾಮಸ್ಥರು ಪ್ರತಿಭಟನಾ ಸಭೆಯನ್ನು ನಡೆಸಿದರು.
ಈ ವೇಳೆ ಸ್ಥಳಕ್ಕಾಗಮಿಸಿ ಈ ಕುರಿತು ರಾಜ್ಯಕಂದಾಯ ಕಾರ್ಯದರ್ಶಿಗಳಿಗೆ ಸಲ್ಲಿಸಲಾದ ಮನವಿಯೊಂದನ್ನು ಸ್ವೀಕರಿಸಿ ಮಾತನಾಡಿದ ಕಾಪು ತಹಶೀಲ್ದಾರ್ ಡಾ. ಪ್ರತಿಭಾ ಆರ್. (Kaup Tahashildar DR Prathibha R) ಅವರು, ಗ್ರಾಮಸ್ಥರ ಈ ಸಮಸ್ಯೆಯ ಕುರಿತಾಗಿ ತಮ್ಮ ಮಟ್ಟದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿ ನ್ಯಾಯ ಒದಗಿಸಲು ಪ್ರಯತ್ನಿಸುವುದಾಗಿ ಹೇಳಿದರು.
ತಹಶೀಲ್ದಾರ್ ಅವರೊಂದಿಗೆ ಕಂದಾಯ ಅಧಿಕಾರಿ ಇಸಾಕ್ ಸಾಬ್, ಗ್ರಾಮಾಢಳಿತ ಅಧಿಕಾರಿ ವಿಜಯ್ ಉಪಸ್ಥಿತರಿದ್ದರು.
ಹಿಂದಿನ ಗೋಮಾಳ ಪ್ರದೇಶವನ್ನು ಈಗ ಅನಾಧೀನ ಎಂದು ಪರಿವರ್ತಿಸಿ ಉಡುಪಿ ಜಿಲ್ಲಾಧಿಕಾರಿ ಅವರು ಆದೇಶವೊಂದನ್ನು ಹೊರಡಿಸಿ ಪಂಬದ ಸಮುದಾಯ ಭವನವನ್ನು ನಿರ್ಮಿಸಲು ೦.೩೦ ಸೆಂಟ್ಸ್ ಜಾಗವನ್ನು ಮೀಸಲಿರಿಸಿರುವುದು ಖಂಡನೀಯವೆಂದು ನಿವೃತ್ತ ಬ್ಯಾಂಕ್ ಅಧಿಕಾರಿ ಜಯರಾಜ್ ಅರೋಪಿಸಿದರು.
ಇದು ಜಿಲ್ಲಾಧಿಕಾರಿ ಮೂಲಕ ಪರಿಶಿಷ್ಟ ವರ್ಗಕ್ಕೆ ಮೀಸಲಿರಿಸಿತ್ತು. ಈಗ ಶಾಂತಿಬೆಟ್ಟು ಆಟದ ಮೈದಾನವಾಗಿರುವ ಈ ಭೂಮಿಯನ್ನು ವಿಭಾಗಿಸಿ ಜಾತಿ, ಜಾತಿಗಳ ನಡುವೆ ಸಂಘರ್ಷಕ್ಕೆ ಅವರು ಎಡೆಮಾಡಿಕೊಡುತ್ತಿರುವುದು ಸರಿಯಲ್ಲವೆಂದೂ ಜಯರಾಜ್ ತಿಳಿಸಿದರು.
ಜಿಲ್ಲಾಧಿಕಾರಿ ಅವರು ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ. ತೆಂಕ ಗ್ರಾ. ಪಂ. ಕೂಡಾ ಈ ಮೈದಾನವನ್ನು ವಿಭಜಿಸಬಾರದು ಎಂದು ಸರ್ವಾನುಮತದ ನಿರ್ಣಯವನ್ನು ಮಾಡಿದ್ದು, ಅದನ್ನೂ ಜಿಲ್ಲಾಧಿಕಾರಿ ಅವರು ನಿರ್ಲಕ್ಷಿಸಿದ್ದಾರೆ ಮಾಜಿ ತಾ. ಪಂ. ಸದಸ್ಯೆ ಶಾರದಾ ಪೂಜಾರಿ ಹೇಳಿದರು.
ಪ್ರತಿಭಟನಾ ಸಭೆಯಲ್ಲಿ ಗ್ರಾ. ಪಂ. ಸದಸ್ಯೆ ಜಯಶ್ರೀ ಹರೀಶ್ ಕೋಟ್ಯಾನ್ ಮಾತನಾಡಿದರು.
ಮಾಜಿ ತಾ. ಪಂ. ಸದಸ್ಯ ಕೇಶವ ಮೊಯಿಲಿ, ಗ್ರಾ. ಪಂ. ಸದಸ್ಯರಾದ ಶಿವಪ್ರಸಾದ್ ಶೆಟ್ಟಿ ಎಲ್ಲದಡಿ, ಅಮ್ಮಣಿ, ಮನೋಜ್ ಶೆಟ್ಟಿ, ಸಂತೋಷ್ ಕುಮಾರ್, ಸುಂದರಿ, ಮಾಜಿ ಸದಸ್ಯ ವಿನಯ್ ಶೆಟ್ಟಿ, ಗುಣಪಾಲ್ ಶೆಟ್ಟಿ, ರಿಕ್ಷಾ ಚಾಲಕ ಮಾಲಕರ ಸಂಘದ ಮಾಜಿ ಅಧ್ಯಕ್ಷ ಹರೀಶ್ ಕೆ. ಸುವರ್ಣ, ಗುಣಾನಂದ ಸೆಟ್ಟಿ ಅಳ್ವೆಕೋಡಿ, ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸಂಘದ ನಿರ್ದೇಶಕ ಮಾಧವ ಆಚಾರ್ಯ ಮತ್ತಿತರರಿದ್ದರು.
