ಜನವರಿ 20, 21 ನಂದಿಕೂರು – ಅಡ್ವೆ ಹೊನಲು ಬೆಳಕಿನ ಕೋಟಿ ಚೆನ್ನಯ ಜೋಡುಕರೆ ಕಂಬಳ
ನಂದಿಕೂರು: ಜನವರಿ 20, 21ರ ಶನಿವಾರ ಮತ್ತು ಭಾನುವಾರ ೩೧ ನೇವರ್ಷದ ನಂದಿಕೂರು – ಅಡ್ವೆಯಲ್ಲಿ ನಡೆಯುವ ಹೊನಲು ಬೆಳಕಿನ ಕೋಟಿ ಚೆನ್ನಯ ಜೋಡುಕರೆ ಕಂಬಳ ನೆರವೇರಲಿದೆ ಎಂದು ಕಂಬಳ ಸಮಿತಿಯ ಗೌರವಾಧ್ಯಕ್ಷ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ (Kaup MLA Gurme Suresh Shetty) ನಂದಿಕೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಪಕ್ಷ, ಜಾತಿ, ಧರ್ಮಾತೀತವಾಗಿ ನಡೆಯುವ ಕಂಬಳವು ಜನ ಮಾನಸದಲ್ಲಿ ಮುಟ್ಟುವಂತಾಗಬೇಕು. 31ವರ್ಷಗಳಿಂದ ನಡೆದು ಬಂದ ಅಡ್ವೆ ನಂದಿಕೂರು ಕಂಬಳ ಹೊಸ ಪ್ರಯತ್ನದ ಪ್ರಯೋಗಗಳಿಗೆ ಸಾಕ್ಷಿಯಾಗಿದೆ.
ಪೂಜ್ಯ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ (DR D Veerendra heggade) ಶುಭಾಶೀರ್ವಾದದೊಂದಿಗೆ ಕಂಬಳ ನಡೆಯಲಿದೆ.
ಜನವರಿ 20, ಶನಿವಾರ ಪೂರ್ವಾಹ್ನ ಗಂಟೆ 8ಕ್ಕೆ ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇಗುಲದ ಆಡಳಿತ ಮೊಕ್ತೇಸರ ಮಧ್ವರಾಯ ಭಟ್, ಎಲ್ಲೂರುಗುತ್ತು ಪ್ರಫುಲ್ಲ ಶೆಟ್ಟಿ, ಜನ್ನಿ ರಮೇಶ್ ಭಟ್, ಸುಂದರ ಯು ಸುವರ್ಣರವರು ಕಂಬಳಕ್ಕೆ ಚಾಲನೆ ನೀಡಲಿದ್ದಾರೆ.
ಕಂಬಳದಲ್ಲಿ ಉದ್ಯಮಿ ಬಂಜಾರಾ ಪ್ರಕಾಶ್ ಶೆಟ್ಟಿ (Banjara Prakash Shetty), ಬೆಂಗಳೂರು ಕಂಬಳದ ಉಸ್ತುವಾರಿ ಅಶೋಕ್ ಕುಮಾರ್ ರೈ (Ashok Kumar Rai), ಕೋಣಗಳ ಯಜಮಾನ ಮೊಗರು ಪಾಕಬೆಟ್ಟು ಭಾಸ್ಕರ್ ಲಕ್ಕಣ್ಣ ಶೆಟ್ಟಿ ಸಹಿತ ಅನೇಕ ಗಣ್ಯರ ಭಾಗವಹಿಸುವಿಕೆ, ಸನ್ಮಾನ ಇತ್ಯಾದಿ ಕಾರ್ಯಕ್ರಮಗಳು ಜರಗಲಿವೆ. ತುಳು ಭಾಷೆಯ ಬೆಳವಣಿಗೆಗೆ ಕಂಬಳವೂ ಸಹಕಾರಿಯಾಗಿದ್ದು, ಮುಂದೆಯೂ ನಡೆಯಬೇಕಾಗಿದೆ ಎಂದೂ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಕಂಬಳ ತಜ್ಞ ಶೇಖರ್ ಶೆಟ್ಟಿ ಮಾತನಾಡಿ, ಅಡ್ವೆ ನಂದಿಕೂರಿನಲ್ಲಿ ಮೊದಲ ಬಾರಿಗೆ ಮೂರು ಕರೆ, ಫ್ಲಡ್ ಲೈಟ್ ಇತ್ಯಾದಿ ಹೊಸ ಪ್ರಯೋಗಗಳನ್ನು ಕಂಬಳದಲ್ಲಿ ಮಾಡಿ ಯಶಸ್ವಿಯಾಗಿದ್ದೇವೆ. ಈ ಬಾರಿ ಕೋಣವನ್ನು 3 ನಿಮಿಷದಲ್ಲಿ ಗಂತು (ಕಂಬಳ ಓಟದ ಆರಂಭಿಕ ಸ್ಥಳ)ಗೆ ನಿಲ್ಲಿಸಬೇಕು. ಆ ಸಮಯಕ್ಕೆ ಬಾರದಿದ್ದಲ್ಲಿ ಅವಕಾಶವಿಲ್ಲ. ಆ ಮೂಲಕ ಸಮಯಕ್ಕೆ ಮಹತ್ವ ನೀಡಲಾಗುವುದು. ಇದು ಹೊಸ ಪ್ರಯತ್ನವಾಗಿದ್ದು, ಇದಕ್ಕೆ ಕೋಣದ ಮಾಲೀಕರು ಮತ್ತು ತಂಡದ ಸಹಕಾರ ಅಗತ್ಯ ಎಂದರು.
ಈ ಸಂದರ್ಭ ಕೋಟಿ ಚೆನ್ನಯ ಜೋಡುಕೆರೆ ಕಂಬಳ ಸಮಿತಿಯ ಅಧ್ಯಕ್ಷ ಸುರೇಶ್ ಶೆಟ್ಟಿ ಅಡ್ವೆ ಮೂಡ್ರಗುತ್ತು, ಪ್ರಧಾನ ಕಾರ್ಯದರ್ಶಿ ನವೀನ್ ಚಂದ್ರ ಸುವರ್ಣ ಅಡ್ವೆ ಹಾಗೂ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

