ನಂದಿಕೂರಿನಲ್ಲಿ ಹೊಸ ಏರ್‌ಪೋರ್ಟ್ ಪ್ರಸ್ತಾವನೆಯಿಲ್ಲ: ಸಚಿವ ಎಂ.ಬಿ. ಪಾಟೀಲ್
ಕರಾವಳಿಗರ ಆಸೆ ಸದ್ಯಕ್ಕೆ ನುಚ್ಚುನೂರು
(Belgaum) ಬೆಳಗಾವಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸುವ ಯಾವುದೇ ಪ್ರಸ್ತಾವನೆ ಸರಕಾರದ ಪರಿಶೀಲನೆಯಲ್ಲಿಲ್ಲ ಎಂದು ಸಚಿವ ಎಂ.ಬಿ. ಪಾಟೀಲ್ ಉತ್ತರಿಸಿದ್ದಾರೆ.
ಉಡುಪಿ ಜಿಲ್ಲೆಯ ಗಡಿಭಾಗ ನಂದಿಕೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾರಂಭಿಸುವ ವರದಿ ಬಗ್ಗೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಸಚಿವ ಪಾಟೀಲ್ ಉತ್ತರಿಸಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣ ವಿಸ್ತರಣೆಗೆ ಭೂಸ್ವಾಧೀನ ಬಗ್ಗೆ ಪ್ರತಿಕ್ರಿಯಿಸಿ, ರನ್‌ವೇ ಬೇಶಿಕ್ ಸ್ಕ್ರಿಪ್ಟ್ ಮತ್ತು ರನ್‌ವೇ ಆ್ಯಂಡ್ ಸೇಫ್ಟಿ ಏರಿಯಾ ವಿಸ್ತರಣೆಗಾಗಿ 36 ಎಕರೆ ಜಮೀನನ್ನು ಜಮೀನುಗಳ ಭೂ ಸ್ವಾಧೀನಪಡಿಸಿಕೊಳ್ಳಲು ಜಿಲ್ಲಾಡಳಿತ ಅಂದಾಜುಪಟ್ಟಿ ಸಿದ್ಧಪಡಿಸಿದೆ. ಅವಶ್ಯ ಜಮೀನುಗಳ ಭೂಸ್ವಾಧೀನ ವೆಚ್ಚ ಭರಿಸಿ ಕಾಮಗಾರಿ ಕೈಗೊಳ್ಳಲು ಕ್ರಮ ವಹಿಸುವಂತೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವನ್ನು ಕೋರಲಾಗಿದೆ ಎಂದರು.
ಮಂಗಳೂರು ವಿಮಾನ ನಿಲ್ದಾಣದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಎಎಐ ಸಂಸ್ಥೆ ಮೂಲಕ ಪಿಪಿಪಿ ಮಾದರಿಯಲ್ಲಿ ಖಾಸಗಿ ಸಂಸ್ಥೆಗೆ ವಹಿಸಲಾಗಿದೆ. ಈ ವಿಮಾನ ನಿಲ್ದಾಣವು ಎಎಐ ವ್ಯಾಪ್ತಿಗೆ ಒಳಪಡುವುದರಿಂದ ರನ್‌ವೇ ವಿಸ್ತರಣೆಗೆ ಕ್ರಮ ಕೈಗೊಳ್ಳಲು ಕೋರಲಾಗಿದೆ ಎಂದು ಸಚಿವರು ಉತ್ತರಿಸಿದ್ದಾರೆ.

