ನಂದಿಕೂರು ಮುದರಂಗಡಿ ಕ್ರಾಸ್ ಬಳಿ ನಡೆದ ಬೈಕ್-ಬಸ್ ಮುಖಾಮುಖಿ ಡಿಕ್ಕಿಯಲ್ಲಿ ಯೂಟ್ಯೂಬ್ ಬ್ಲಾಗರ್ ದುರ್ಮರಣ
ಉಡುಪಿ: ನಂದಿಕೂರು ಮುದರಂಗಡಿ ಕ್ರಾಸ್ ಬಳಿ ಬುಧವಾರ ಬೆಳಿಗ್ಗೆ ಬೈಕ್ ಹಾಗೂ ಬಸ್ಸಿನ ಮಧ್ಯೆ ನಡೆದ ಅಪಘಾತದಲ್ಲಿ ಬೈಕ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಮೃತ ಯುವಕ ಕಾರ್ಕಳ ಅಜೆಕಾರು ಬೊಂಡು ಕುಮೇರಿ ನಿವಾಸಿ ಅಶ್ವಿತ್ ಶೆಟ್ಟಿ (34) ಎಂದು ತಿಳಿದುಬಂದಿದೆ.
ಯೂಟ್ಯೂಬ್ ಬ್ಲಾಗರ್ ಆಗಿರುವ ಅಶ್ವಿತ್ ಶೆಟ್ಟಿ ಗೂಡ್ಸ್ ಟೆಂಪೋ ಬಾಡಿಗೆ ಮಾಡೆಸುತ್ತಿದ್ದರು. ಇತ್ತೀಚಿಗೆ ಇವರು ಹೊಸ ಬೈಕ್‍ವೊಂದನ್ನು ಖರೀದಿಸಿದ್ದು, ಅದರ ಸರ್ವಿಸ್‍ಗಾಗಿ ಮಂಗಳೂರಿಗೆ ಹೋಗುವಾಗ ಅಪಘಾತ ಸಂಭವಿಸಿದೆ.
ತೀವ್ರ ಗಾಯಗೊಂಡ ಅಶ್ವಿತ್ ಶೆಟ್ಟಿ ಅವರನ್ನು ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಪಡುಬಿದ್ರಿ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

