ನೇಗಿಲಿಗೆ ಪೂಜೆ ಮಾಡಿ ಮೊದಲ ಆಯುಧಪೂಜೆ ಆರಂಭಿಸಿದ್ದು ಜನಕಮಹಾರಾಜ
ದಸರಾ ಬಗ್ಗೆ ಸಾಯಿಚನ್ನಪ್ಪ ರಾಜುರವರ ವಿಷೇಶ ಲೇಖನ (A special article on Dasara by Saichannappa Raju)
(Mandya) ಮಂಡ್ಯ: ಮನುಷ್ಯನ ಜೀವನವು ಯಾವುದೇ ಯುಗದಲ್ಲಾಗಲ್ಲಿ ಯಾವುದೇ ಕಾಲದಲ್ಲಾಗಲಿ ಯಾವ ದೇಶ-ಕೋಶಗಳಾಗಲಿ ಆಯುಧಗಳಿಲ್ಲದೇ ಅವನು ಜೀವನ ನಿರ್ವಹಣೆ ಕಷ್ಟ, ಅಸಾಧ್ಯ ಎಂದರೂ ತಪ್ಪಲ್ಲ.
ಆಯುಧಗಳಿಲ್ಲದೆ ಮಾನವ ಜೀವನವನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ? ಎಂಬುದು ಕೇವಲ ಯುದ್ಧದ ಪ್ರಶ್ನೆಯ̧ಲ್ಲ ಅದು ಮಾನವನ ಇತಿಹಾಸ, ಬದುಕುಳಿಯುವಿಕೆ, ಕೃಷಿ, ರಕ್ಷಣೆ, ವೃತ್ತಿ ಮತ್ತು ನಾಗರಿಕತೆಯ ಬೆಳವಣಿಗೆಗೆ ಸಂಬಂಧಿಸಿದ ಪ್ರಶ್ನೆಯಾಗಿದೆ.
ಹೀಗೆ ನಮ್ಮ ಕರ್ತವ್ಯವನ್ನು ನಿರ್ವಹಿಸಲು ಸಹಾಯ ಮಾಡುವ ಸಾಧನಗಳನ್ನು ಗೌರವಿಸುವುದೇ ಆಯುಧ ಪೂಜೆಯ ವಿಶಾಲವಾದ ಆಶಯ.
ಮೊದಲನೆಯದು
— ಬದುಕುಳಿಯುವ ದೃಷ್ಟಿಕೋನ: ಪ್ರಾಚೀನ ಕಾಲದಲ್ಲಿ ಕೆಲವು ಆಯುಧಗಳು ಮಾನವನಿಗೆ ಆಹಾರ ಪಡೆಯಲು ಮತ್ತು ಅಪಾಯಗಳಿಂದ ರಕ್ಷಿಸಿಕೊಳ್ಳಲು ನೆರವಾದವು. ಆದ್ದರಿಂದ ಅವು ಮಾನವನ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸಿವೆ.
ಎರಡನೆಯದು — ಶಾಂತಿಯ ದೃಷ್ಟಿಕೋನ: ಮಾನವ ಸಮಾಜದ ಉಳಿವು ಆಯುಧಗಳ ಮೇಲೆ ಮಾತ್ರ ಅವಲಂಬಿತವಾಗಿಲ್ಲ. ಕುಟುಂಬ, ಸಹಕಾರ, ಕೃಷಿ, ವೈದ್ಯಕೀಯ, ಶಿಕ್ಷಣ, ಕಾನೂನು ಮತ್ತು ಪರಸ್ಪರ ನಂಬಿಕೆಗಳೂ ನಾಗರಿಕತೆಯ ಆಧಾರಗಳಾಗಿವೆ.
1)ಆಯುಧ ಪೂಜೆಯ ನಿಜವಾದ ಅರ್ಥವೇನು?
ಭಾರತೀಯ ಸಂಪ್ರದಾಯದಲ್ಲಿ ಆಯುಧ ಪೂಜೆ ಅಥವಾ ಆಯುಧಾರಾಧನೆ ಎಂದರೆ ಕೇವಲ ಕತ್ತಿ, ಖಡ್ಗ, ಬಿಲ್ಲು, ಬಾಣಗಳನ್ನು ಪೂಜಿಸುವುದಲ್ಲ. ನಾವು ನಮ್ಮ ಕರ್ತವ್ಯವನ್ನು ನಿರ್ವಹಿಸಲು ಬಳಸುವ ಸಾಧನಗಳಿಗೆ ಗೌರವ ಸಲ್ಲಿಸುವ ಆಚರಣೆಯೂ ಹೌದು.
ರೈತನು ನೇಗಿಲು ಮತ್ತು ಕೃಷಿ ಉಪಕರಣಗಳನ್ನು ಪೂಜಿಸುತ್ತಾನೆ. ಬಡಗಿ ತನ್ನ ಕೆಲಸದ ಸಾಧನಗಳನ್ನು ಪೂಜಿಸುತ್ತಾನೆ. ವೈದ್ಯರು ತಮ್ಮ ವೃತ್ತಿಗೆ ಅಗತ್ಯವಾದ ಉಪಕರಣಗಳನ್ನು ಗೌರವಿಸುತ್ತಾರೆ. ಸೈನಿಕರು ತಮ್ಮ ಕರ್ತವ್ಯಕ್ಕೆ ಸಂಬಂಧಿಸಿದ ಆಯುಧಗಳನ್ನು ಗೌರವಿಸುತ್ತಾರೆ.
ಇದರ ಹಿಂದಿರುವ ಭಾವನೆ ಏನೆಂದರೆ, ನಮ್ಮ ಬದುಕಿಗೆ ನೆರವಾಗುವ ಸಾಧನಗಳನ್ನು ನಿರ್ಲಕ್ಷಿಸದೆ, ಅವುಗಳನ್ನು ಜವಾಬ್ದಾರಿಯಿಂದ ಬಳಸಬೇಕು ಹಾಗೂ ಗೌರವಿಸಬೇಕು ಎನ್ನುವ ಆಶಯ. ಈ ಭಾವನೆಯು ಮನುಷ್ಯನಿಗೆ ಮಾನಸಿಕವಾಗಿ ಲಾಭಗಳನ್ನ ತಂದುಕೊಡುವುದಲ್ಲದೇ ಆಯುಧ ಎಂಬ ಸಾಧನಗಳ ನಿರ್ವಹಣೆ ಅವುಗಳೊಂದಿಗಿನ ಬಾಂಧವ್ಯವನ್ನ ಹೆಚ್ಚಿಸಿ ಸ್ವಚ್ಚವಾಗಿ ಇಟ್ಟುಕೊಂಡು ದೀರ್ಘ ಬಾಳಿಕೆ ಬರುವಂತೆ ನೋಡಿಕೊಳ್ಳುವ ಹೊಣೆಗಾರಿಕೆಯು ಇರುತ್ತದೆ.ಎಷ್ಟೋ ಆಯುಧಗಳು ಅನೇಕರ ಜೀವನದ ಗತಿಯನ್ನ ಬದಲಿಸಿದೆ. ಉದಾಹರಣೆಗೆ ಬಾಡಿಗೆ ಕಾರು ಡ್ರೈವರ್ ಜೀವನ ಬದಲಿಸಿ ಮಾಲೀಕನನ್ನಾಗಿ ಮಾಡಿ ಜೀವನವನ್ನ ಉದ್ದಾರ ಮಾಡಿರುತ್ತವೆ.
ಕೃಷಿ ಮಾಡುವಲ್ಲಿ ನೇಗಿಲು ಪ್ರಮುಖ ಪಾತ್ರವಹಿಸಿದ್ದು, ಈಗಲೂ ಅನೇಕ ಕಡೆ ನೇಗಿಲಿಗೆ ನಮಸ್ಕಾರ ಮಾಡಿ ಕೃಷಿ ಆರಂಭಿಸುವ ಪದ್ದತಿ ಇದೆ.
ಹಾಗಾದರೆ ಆಯುಧವನ್ನು ಪೂಜಿಸುವುದು ಹಿಂಸೆಯನ್ನು ಪೂಜಿಸಿದಂತೆಯೇ?
ಆಯುಧಕ್ಕೆ ಗೌರವ ಸಲ್ಲಿಸುವುದು ಅದರ ಸಾಮರ್ಥ್ಯ ಮತ್ತು ಅಪಾಯವನ್ನು ಅರಿಯುವುದು. ಆಯುಧವನ್ನು ಪೂಜಿಸುವುದು ಸಂಪ್ರದಾಯದ ಪ್ರಕಾರ ಅದನ್ನು ಕರ್ತವ್ಯ, ರಕ್ಷಣೆ ಅಥವಾ ಶಕ್ತಿಯ ಸಂಕೇತವಾಗಿ ಗೌರವಿಸುವುದು. ಆಯುಧವನ್ನು ದುರುಪಯೋಗಪಡಿಸಿಕೊಳ್ಳುವುದು ಅನ್ಯಾಯವಾಗಿ ಮತ್ತೊಬ್ಬರಿಗೆ ಹಾನಿ ಮಾಡುವುದು ಇದು ಅಪರಾಧವಾಗಿದೆ.
ಜನಕ ಮಹಾರಾಜ ಮತ್ತು ನೇಗಿಲು
ತ್ರೇತಾಯುಗದಲ್ಲಿ ಸೀತಾಮಾತೆಯ ಸಾಕು ತಂದೆ ಮಿಥಿಲಾ ನಗರದ ರಾಜ ಜನಕ ಮಹಾರಾಜನು ಯಜ್ಞಕ್ಕೆ ಭೂಮಿ ಸಿದ್ದಗೊಳಿಸಲು ನೇಗಿಲ ಮೂಲಕ ಉಳುಮೆ ಮಾಡಿಸಿ ಹದಗೊಳಿಸುವ ಪ್ರಕ್ರಿಯೆಯಲ್ಲಿದ್ದಾಗ, ನೇಗಿಲ ತುದಿಗೆ ಚಿನ್ನದ ಪೆಟ್ಟಿಗೆ ಸಿಲುಕಿ ತೆರೆದು ನೋಡುತ್ತಿದ್ದಂತೆ, ಅಶರೀರವಾಣಿಯೊಂದು “ಈ ದೈವಿ ಹೆಣ್ಣು ಮಗುವು ಎಲ್ಲಾ ಪವಿತ್ರತೆ ಹಾಗೂ ಸದ್ಗುಣಗಳ ಹೊತ್ತು ಬಂದಿರುವ ಗಣಿಯಾಗಿದೆ, ಮಗುವನ್ನ ಸಾಕುವ ಹೊಣೆ ನಿಮ್ಮದಾಗಿರುತ್ತದೆ” ಎಂದು ಹೇಳುತ್ತದೆ. ಇದರಿಂದ ಸಂತೋಷದಿಂದ ಜನಕನು ಅರಮನೆಗೆ ತಂದು ಆನಂದ ತುಂದಿಲದಿಂದ ತೇಲಿ ಸಂಭ್ರಮವನ್ನು ಆಚರಿಸುತ್ತಾರೆ.
ನೇಗಿಲ ತುದಿಯನ್ನ ಸಂಸ್ಕೃತದಲ್ಲಿ “ಸೀರಾಜಾತಾ ” ಅಂತ ಕರೆಯುತ್ತಾರೆ, ಆ ಹೆಸರನ್ನ ಸಂಕ್ಷಿಪ್ತಗೊಳಿಸಿ ” ಸೀತಾ ” ಅಂತ ನಾಮಕರಣ ಮಾಡುತ್ತಾರೆ.
ಮಕ್ಕಳಿಲ್ಲದ ಜನಕ ಮಹಾರಾಜನಿಗೆ ಹೆಣ್ಣು ಮಗುವೂ ಭೂಮಿಯಲ್ಲಿ ಸಿಕ್ಕಿದ್ದು ಎಲ್ಲಿಲ್ಲದ ಆನಂದ ಖುಷಿ ಸಂಭ್ರಮವಾಗುತ್ತದೆ. ಈ ಆನಂದದಲ್ಲಿಯೇ ಅನೇಕ ಜನ ಕೃಷಿಕರಿಗೆ ನೇಗಿಲುಗಳನ್ನು ಹಂಚಿ ಪ್ರಥಮವಾಗಿ ನೇಗಿಲಿಗೆ ಜನಕ ಮಹಾರಾಜನು ಪೂಜೆ ಮಾಡುತ್ತಾನೆ. ಆ ನೇಗಿಲನ್ನು ಗೌರವಿಸುವುದು ಪೂಜಿಸುವುದು ಸೇರಿದಂತೆ ಅದರ ತುದಿಯು ಹೆಸರು ಶಾಶ್ವತವಾಗಿ ಜನರ ಬಾಯಲ್ಲಿ ಬಳಕೆಯಲ್ಲಿರುವಂತೆ ಸೀರಾಜಾತಾ ಪದವನ್ನ ಸೀತಾ ಎಂದು ಸಾಕು ತಂದೆ ಜನಕ ಮಹಾರಾಜನು ಹೆಸರಿಟ್ಟನು.
ದ್ವಾಪರಯುಗದಲ್ಲಿ ಪಾಂಡವರು ಆಯುಧಗಳನ್ನ ಪೂಜಿಸಿ ಯಶಸ್ಸು ಪಡೆದರು
ಪಾಂಡವರು ದ್ಯುತ (ಜೂಜು)ದಲ್ಲಿ ಸೋತು ಹನ್ನೆರಡು ವರ್ಷ ವನವಾಸ ಮುಗಿಸಿದ ಬಳಿಕ ಒಂದು ವರ್ಷ ಅಜ್ಞಾತವಾಸ (ಯಾರ ಕಣ್ಣಿಗೂ ಕಾಣಿಸದೇ ಜೀವಿಸುವುದು) ಹೋಗುವ ಮುನ್ನ ಬನ್ನಿಮರ (ಶಮೀವೃಕ್ಷ) ದಲ್ಲಿ ತಮ್ಮ ಆಯುಧಗಳನ್ನ ಮಡಿ ಬಟ್ಟೆಗಳಲ್ಲಿ ಸುತ್ತಿ ಇಟ್ಟು, ವೇಷ ಮರೆಸಿಕೊಂಡು ಹೆಸರು ಬದಲಿಸಿಕೊಂಡು ಜೀವನ ಮಾಡಿದರು.
ಈ ಅಜ್ಞಾತವಾಸವೂ ಮುಗಿದು ನಾಡಿಗೆ ಬರುವ ಮುನ್ನ ಬನ್ನಿಮರದಲ್ಲಿ ಕಟ್ಟಿ ಇಟ್ಟಿದ್ದ ಆಯುಧಗಳನ್ನ ಇಳಿಸಿ ಪೂಜಿಸಿದ ದಿನವೇ ಈ ಆಯುಧ ಪೂಜೆಯ ದಿವಸವಾಗಿದೆ ಅನ್ನುವ ಉಲ್ಲೇಖವಿದೆ.
ದಧೀಚಿ ಮಹರ್ಷಿಯ ದೇಹದ ಮೂಳೆಯಿಂದ ತಯಾರಿಸಿದ ವಜ್ರಾಯುಧದಿಂದ ವೃತ್ರಾಸುರನ ಸಂಹಾರ ಪುರಾಣಗಳ ಪ್ರಕಾರ, ಒಂದು ಕಾಲದಲ್ಲಿ ವೃತ್ರಾಸುರ ಎಂಬ ಪ್ರಬಲ ಅಸುರನು ದೇವತೆಗಳಿಗೆ ತೀವ್ರ ತೊಂದರೆ ನೀಡುತ್ತಿದ್ದನು. ಅವನನ್ನು ಸೋಲಿಸುವುದು ದೇವೇಂದ್ರನಿಗೂ ಕಷ್ಟವಾಗಿತ್ತು. ಆಗ ದೇವತೆಗಳು ಬ್ರಹ್ಮದೇವರ ಮೊರೆ ಹೋದರು. ವೃತ್ರಾಸುರನನ್ನು ಸಂಹರಿಸಲು ದಧೀಚಿ ಮಹರ್ಷಿಗಳ ದೇಹದ ಎಲುಬು (ಮೂಳೆ)ಗಳಿಂದ ತಯಾರಿಸಿದ ವಜ್ರಾಯುಧವೇ ಅಗತ್ಯ ಎಂದು ತಿಳಿಸಲಾಯಿತು. ದೇವತೆಗಳು ದಧೀಚಿ ಮಹರ್ಷಿಗಳ ಬಳಿ ಬಂದು ಲೋಕದ ರಕ್ಷಣೆಗಾಗಿ ತಮ್ಮ ದೇಹವನ್ನು ತ್ಯಾಗ ಮಾಡುವಂತೆ ಕೋರಿದರು.
ದಧೀಚಿ ಮಹರ್ಷಿಗಳು ತಮ್ಮ ವೈಯಕ್ತಿಕ ಜೀವನಕ್ಕಿಂತ ಲೋಕ ಕಲ್ಯಾಣವೇ ದೊಡ್ಡದು ಎಂದು ಭಾವಿಸಿ, ತಮ್ಮ ದೇಹವನ್ನು ತ್ಯಜಿಸಲು ಒಪ್ಪಿಕೊಂಡರು. ಅವರ ಎಲುಬುಗಳಿಂದ ವಿಶ್ವಕರ್ಮನು ವಜ್ರಾಯುಧವನ್ನು ನಿರ್ಮಿಸಿದನೆಂದು ಪ್ರಸಿದ್ಧ ಪುರಾಣಕಥೆ ಹೇಳುತ್ತದೆ. ಆ ವಜ್ರಾಯುಧದಿಂದ ಇಂದ್ರನು ವೃತ್ರಾಸುರನನ್ನು ಸಂಹರಿಸಿದನು. ಅಂದರೆ ದಧೀಚಿ ಮಹರ್ಷಿಗಳ ತ್ಯಾಗ ಬಲಿದಾನದಿಂದ ಮಾತ್ರ ಆ ದುಷ್ಟಶಕ್ತಿಯ ಸಂಹಾರ ಮಾಡಲು ಸಾಧ್ಯವಾಯಿತು. ಈ ಆಯುಧದಿಂದ ಲೋಕ ಕಲ್ಯಾಣ ಹೇಗೆ ಆಯಿತು ಅನ್ನುವ ಸಂದೇಶವನ್ನ ದಧೀಚಿ ಮಹರ್ಷಿಗಳ ವೃತ್ತಾಂತ ಸಾರುತ್ತದೆ.
ದೇವತೆಗಳ ಆಯುಧಗಳು ಬಳಕೆಯಾಗಿದ್ದು ಜಗತ್ತಿನ ಕಲ್ಯಾಣಕ್ಕಾಗಿ ಮಾತ್ರ
ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ನಾನು ಆಯುಧದಲ್ಲಿ ವಜ್ರಾಯುಧ ಅಂತ ಹೇಳಿದ್ದಾರೆ.
ವಜ್ರಾಯುಧ
ಆಯುಧ ಪೂಜೆಯಲ್ಲಿ ವಜ್ರಾಯುಧವನ್ನು ಸ್ಮರಿಸುವುದರ ಹಿಂದೆ ದೈವಿಕ ಶಕ್ತಿ, ಧರ್ಮರಕ್ಷಣೆ, ತ್ಯಾಗ ಮತ್ತು ನಮ್ಮ ಜೀವನಕ್ಕೆ ನೆರವಾಗುವ ಸಾಧನಗಳ ಮಹತ್ವವನ್ನು ಗೌರವಿಸುವ ಭಾವನೆ ಇದೆ. ವಜ್ರಾಯುಧ ಎಂಬ ಶಿಷ್ಟ ಶಕ್ತಿಯು ದುಷ್ಟಶಕ್ತಿಯ ವಿರುದ್ಧದ ಹೇಗೆ ಹೋರಾಡಿ ಜಗತ್ತಿನ ರಕ್ಷಣೆ ಸಾಧ್ಯವಾಯಿತು ಎಂಬಂಶ ವೇದ್ಯವಾಗುತ್ತದೆ. ಆದ್ದರಿಂದ ವಜ್ರಾಯುಧವು ಕೇವಲ ಆಯುಧವಲ್ಲ; ಅದು ತ್ಯಾಗದಿಂದ ಹುಟ್ಟಿದ ಶಕ್ತಿಯ ಸಂಕೇತವೂ ಹೌದು.
ಸುದರ್ಶನ ಚಕ್ರ
ಸುದರ್ಶನ ಚಕ್ರವು ಶ್ರೀ ಮಹಾವಿಷ್ಣುವಿನ ಪ್ರಮುಖ ದಿವ್ಯಾಯುಧ. ಹಿಂದೂ ಧರ್ಮದ ಪುರಾಣಗಳಲ್ಲಿ ಇದು ಧರ್ಮದ ರಕ್ಷಣೆ, ಅಧರ್ಮದ ನಾಶ, ದೈವಿಕ ಶಕ್ತಿ ಮತ್ತು ಕಾಲದ ಸಂಕೇತವಾಗಿ ಅರ್ಥಾತ್ ಚಲನಶೀಲತೆಯ ದ್ಯೋತಕವಾಗಿದೆ. ಶ್ರೀಮನ್ ನಾರಾಯಣ ಚಕ್ರಕ್ಕೆ ಆದೇಶ ನೀಡಿದರೆ ಅದು ಬರುವ ರಭಸಕ್ಕೆ ಸಪ್ತ ಸಾಗರವು ಒಣಗಿ ಹೋಗುತ್ತವೆ ಎಂದು ವಿವರಿಸಲಾಗಿದೆ.ಅಷ್ಟು ರಭಸ, ಅಷ್ಟು ವೇಗ, ಅಷ್ಟು ತೀವ್ರತೆಯಿದೆ ಚಕ್ರಕ್ಕಿದೆ ಈ ಸುದರ್ಶನ ಚಕ್ರದ ಉಗಮದ ಬಗ್ಗೆ ಪುರಾಣದ ಪ್ರಕಾರ, ಲೋಕಕಲ್ಯಾಣಕ್ಕಾಗಿ ಶ್ರೀ ವಿಷ್ಣುವು ಶಿವನನ್ನು ಆರಾಧಿಸಿದಾಗ, ಶಿವನು ಅವರಿಗೆ ಸುದರ್ಶನ ಚಕ್ರವನ್ನು ಅನುಗ್ರಹಿಸಿದನು ಎಂದು ಹೇಳಲಾಗುತ್ತದೆ. ಮತ್ತೊಂದು ಪುರಾಣಕಥೆಯಲ್ಲಿ, ದೇವಶಿಲ್ಪಿ ವಿಶ್ವಕರ್ಮನು ಸೂರ್ಯನ ತೇಜಸ್ಸಿನ ಒಂದು ಭಾಗದಿಂದ ಸುದರ್ಶನ ಚಕ್ರವನ್ನು ರೂಪಿಸಿದನೆಂದು ವರ್ಣಿಸಲಾಗಿದೆ. ಮಹಾಭಾರತದ ಸಭಾಪರ್ವದಲ್ಲಿ, ರಾಜಸೂಯ ಯಾಗದ ಸಂದರ್ಭದಲ್ಲಿ ಶ್ರೀಕೃಷ್ಣನು ಶಿಶುಪಾಲನನ್ನು ಸುದರ್ಶನ ಚಕ್ರದಿಂದ ಸಂಹರಿಸಿದ ಪ್ರಸಂಗ ಪ್ರಸಿದ್ಧವಾಗಿದೆ. ಚಕ್ರದ ತೀಕ್ಷ್ಣತೆಯು ವಿವೇಕದಿಂದ ಅಜ್ಞಾನವನ್ನು ನಿವಾರಿಸುವುದನ್ನು ಸಂಕೇತಿಸುತ್ತದೆ. ಶಕ್ತಿಯು ಧರ್ಮ ಮತ್ತು ಲೋಕಕಲ್ಯಾಣಕ್ಕೆ ಅಧೀನವಾಗಿರಬೇಕು ಎಂಬ ಭಾವನೆಯನ್ನು ಸೂಚಿಸುತ್ತದೆ.
ಕೌಮೋದಕೀ ಗದೆ
ಭಾರವಾದ ದಂಡ ಮತ್ತು ತಲೆಯ ಭಾಗವನ್ನು ಹೊಂದಿರುವ ಗದೆಯಾಗಿದ್ದು ಶಕ್ತಿ, ಧೈರ್ಯ, ದೃಢತೆ ಮತ್ತು ಅಧರ್ಮವನ್ನು ಎದುರಿಸುವ ಸಾಮರ್ಥ್ಯವೊಂದಿದೆ. ಕೌಮೋದಕೀ ಗದೆಯನ್ನು ಕೇವಲ ಯುದ್ಧದ ಆಯುಧವೆಂದು ಮಾತ್ರವಲ್ಲದೆ, ತಾತ್ವಿಕವಾಗಿ ಹೀಗೆ ಅರ್ಥೈಸಲಾಗುತ್ತದೆ.
ಶಕ್ತಿ: ಅನ್ಯಾಯವನ್ನು ಎದುರಿಸುವ ಸಾಮರ್ಥ್ಯ. ದೃಢತೆ: ಧರ್ಮದ ಮಾರ್ಗದಲ್ಲಿ ಸ್ಥಿರವಾಗಿರುವುದು. ವಿವೇಕದೊಂದಿಗೆ ಬಲಪ್ರಯೋಗ: ಶಕ್ತಿಯನ್ನು ನ್ಯಾಯಯುತ ಉದ್ದೇಶಕ್ಕೆ ಬಳಸುವುದು.
ಪಾಂಚಜನ್ಯ ಶಂಖ
ಪಾಂಚಜನ್ಯವು ಶ್ರೀ ಮಹಾವಿಷ್ಣುವಿನ ಹಾಗೂ ಅವರ ಅವತಾರವಾದ ಶ್ರೀಕೃಷ್ಣನೊಂದಿಗೆ ಸಂಬಂಧಿಸಿದ ಪ್ರಸಿದ್ಧ ದಿವ್ಯ ಶಂಖ. ಮಹಾಭಾರತದ ಕುರುಕ್ಷೇತ್ರ ಯುದ್ಧದಲ್ಲಿ ಶ್ರೀಕೃಷ್ಣನು ಪಾಂಚಜನ್ಯ ಶಂಖವನ್ನು ಮೊಳಗಿಸಿದನೆಂದು ಭಗವದ್ಗೀತೆ ತಿಳಿಸುತ್ತದೆ. ಶಂಖನಾದವು ಧರ್ಮಯುದ್ಧದ ಆರಂಭ, ಧೈರ್ಯ ಮತ್ತು ಸಂಕಲ್ಪವನ್ನು ಸೂಚಿಸುತ್ತದೆ.ಆಧ್ಯಾತ್ಮಿಕ ಅರ್ಥದಲ್ಲಿ ಧರ್ಮದ ಕರೆ, ಸತ್ಯದ ಘೋಷಣೆ ಮತ್ತು ಅಧರ್ಮದ ವಿರುದ್ಧ ನಿಲ್ಲುವ ಸಂಕಲ್ಪವಾಗಿದೆ. ಶಂಖನಾದವು ಜಾಗೃತಿಯನ್ನು ಹಾಗೇ ಅಜ್ಞಾನದಿಂದ ಜ್ಞಾನದ ಕಡೆಗೆ ಸಾಗುವುದನ್ನ ಸೂಚಿಸುತ್ತದೆ. ಹಿಂದೂ ಸಂಪ್ರದಾಯದಲ್ಲಿ ಪೂಜೆ, ಆರತಿ ಮತ್ತು ಮಂಗಳಕಾರ್ಯಗಳಲ್ಲಿ ಶಂಖವನ್ನ ಬಳಸಲಾಗುತ್ತದೆ.
ಶಿವ ಆಯುಧ ತ್ರಿಶೂಲ
ತ್ರಿಶೂಲವು ಶಿವನ ಪ್ರಮುಖ ಆಯುಧವಾಗಿದ್ದು. ಮೂರು ಮೊನೆಗಳನ್ನು ಹೊಂದಿದೆ. ಇದನ್ನು ಸೃಷ್ಟಿ, ಸ್ಥಿತಿ, ಲಯ ಅಥವಾ ಭೂತ, ವರ್ತಮಾನ, ಭವಿಷ್ಯದ ಸಂಕೇತವಾಗಿ ಅರ್ಥೈಸಲಾಗುತ್ತದೆ.
ಕೋದಂಡ ಬಿಲ್ಲು
ಕೋದಂಡ ಬಿಲ್ಲಿಲ್ಲದೇ ಶ್ರೀರಾಮನನ್ನ ನೆನೆಯಲು ಸಾಧ್ಯವಿಲ್ಲ. ಶ್ರೀರಾಮರೊಂದಿಗೆ ಬಿಲ್ಲು ಯಾವಾಗಲೂ ಜೊತೆಯಲ್ಲಿರುವುದನೇ ನೋಡುತ್ತೇವೆ. ಇದು ಧರ್ಮರಕ್ಷಣೆ ಮತ್ತು ದುಷ್ಟಶಕ್ತಿಗಳ ವಿರುದ್ಧದ ಹೋರಾಟದ ಸಂಕೇತವಾಗಿದೆ.
ದೇವಿಯ ಆಯುಧಗಳು
ದುರ್ಗಾ ದೇವಿಯು ತ್ರಿಶೂಲ, ಖಡ್ಗ, ಚಕ್ರ, ಬಿಲ್ಲು, ಬಾಣ ಮುಂತಾದ ಆಯುಧಗಳನ್ನು ಧರಿಸಿರುವಂತೆ ಚಿತ್ರಿಸಲಾಗುತ್ತದೆ. ಇವು ಮಹಿಷಾಸುರನಂತಹ ದುಷ್ಟಶಕ್ತಿಗಳ ವಿರುದ್ಧದ ವಿಜಯವನ್ನು ಪ್ರತಿನಿಧಿಸುತ್ತವೆ. ಅಲ್ಲದೇ ಅರ್ಜುನನು ಬಳಸಿದ ಗಾಂಡೀವ ಬಿಲ್ಲು, ಪರಶುರಾಮರ ಪರಶು ಅಂದರೆ ಕೊಡಲಿ ಯಮನ ದಂಡ ಮತ್ತು ಪಾಶಗಳು ಈ ಎಲ್ಲಾ ದೈವಿ ಆಯುಧಗಳು ಲೋಕ ಕಲ್ಯಾಣಕ್ಕಾಗಿ ಬಳಸಲಾಗಿದೆ.
ಆ ಆಯುಧಗಳು ಜೊತೆಗೆ ಆಯುಧಪೂಜೆಯ ಶುಭ ಸಂದರ್ಭದಲ್ಲಿ ನಾವು ಬಳಸುವ ವಾಹನಗಳು ಕೃಷಿ ಉಪಕರಣಗಳು, ಅನೇಕ ವೃತ್ತಿಯ ಉಪಕರಣಗಳು ಸೇರಿದಂತೆ ಅನೇಕ ಆಯುಧಗಳನ್ನ ಸ್ವಚ್ಛಗೊಳಿಸಿ ಸಿಂಗಾರಗೊಳಿಸಿ ಪೂಜಿಸಿವ ಪದ್ದತಿಯು ವ್ಯಾಪಕವಾಗಿದೆ.
ವಿಜಯ ದಶಮಿ
ವಿಜಯದಶಮಿ ಎಂದರೆ ವಿಜಯವನ್ನು ಸೂಚಿಸುವ ದಶಮಿ. ನವರಾತ್ರಿಯ ಒಂಬತ್ತು ದಿನಗಳ ಆಚರಣೆಯ ನಂತರ ಬರುವ ಹತ್ತನೇ ದಿನವನ್ನು ವಿಜಯದಶಮಿ ಎಂದು ಕರೆಯಲಾಗುತ್ತದೆ. ಇದು ದುಷ್ಟಶಕ್ತಿಯ ಮೇಲೆ ಧರ್ಮದ, ಅಜ್ಞಾನದ ಮೇಲೆ ಜ್ಞಾನದ ಮತ್ತು ಅನ್ಯಾಯದ ಮೇಲೆ ನ್ಯಾಯದ ವಿಜಯವನ್ನು ಸಂಕೇತಿಸುತ್ತದೆ.
ಕರ್ನಾಟಕದಲ್ಲಿ, ವಿಶೇಷವಾಗಿ ಮೈಸೂರಿನಲ್ಲಿ, ವಿಜಯದಶಮಿಗೆ ಅತ್ಯಂತ ವಿಶಿಷ್ಟವಾದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವವಿದೆ. ವಿಜಯದಶಮಿ ಆಚರಣೆಯ ಹಿಂದೆ ಇರುವ ಎರಡು ಪ್ರಮುಖ ಪೌರಾಣಿಕ ಕಥೆಗಳು ಇವೆ.
ಮಹಿಷಾಸುರನು ದೇವತೆಗಳಿಗೆ ತೊಂದರೆ ನೀಡುತ್ತಿದ್ದನು. ಚಾಮುಂಡಿ ದೇವಿಯು ಒಂಬತ್ತು ದಿನಗಳ ಕಾಲ ಯುದ್ಧ ಮಾಡಿ ಹತ್ತನೇ ದಿನ ಅವನನ್ನು ಸಂಹರಿಸಿದಳು ಎಂದು ತಿಳಿಯಲಾಗಿದೆ.
ಶ್ರೀರಾಮನ ವಿಜಯ
ಶ್ರೀರಾಮನು ರಾವಣನನ್ನು ಸಂಹರಿಸಿ ಸೀತೆಯನ್ನು ಮರಳಿ ಪಡೆದ ವಿಜಯವನ್ನು ವಿಜಯದಶಮಿಯೊಂದಿಗೆ ಸಂಪರ್ಕಿಸಲಾಗುತ್ತದೆ. ಉತ್ತರ ಭಾರತದ ಅನೇಕ ಪ್ರದೇಶಗಳಲ್ಲಿ ರಾವಣನ ಪ್ರತಿಕೃತಿಯನ್ನು ದಹಿಸುವ ಮೂಲಕ ಈ ವಿಜಯವನ್ನು ಆಚರಿಸುತ್ತಾರೆ.
ವಿಜಯ ದಶಮಿಯಂದು ಆಯುಧ ಪೂಜೆ ಏಕೆ ಮಾಡುತ್ತಾರೆ?
ವಿಜಯ ದಶಮಿಯ ಹಿಂದಿನ ದಿನವಾದ ಮಹಾನವಮಿಯಂದು ಅನೇಕ ಕಡೆ ಆಯುಧ ಪೂಜೆ ಮಾಡಲಾಗುತ್ತದೆ. ಕೆಲವು ಸಂಪ್ರದಾಯಗಳಲ್ಲಿ ವಿಜಯ ದಶಮಿಯಂದೂ ಆಯುಧಗಳು ಮತ್ತು ಕೆಲಸದ ಸಾಧನಗಳನ್ನು ಪೂಜಿಸುತ್ತಾರೆ. ನಮ್ಮ ಜೀವನೋಪಾಯಕ್ಕೆ ನೆರವಾಗುವ ಸಾಧನಗಳನ್ನು ಗೌರವಿಸುವುದು. ಶಕ್ತಿ ಮತ್ತು ಸಾಮರ್ಥ್ಯವನ್ನು ನ್ಯಾಯಯುತ ಕಾರ್ಯಗಳಿಗೆ ಬಳಸುವ ಸಂಕಲ್ಪ ಮಾಡುವುದು. ಹೊಸ ಕೆಲಸ, ವಿದ್ಯಾಭ್ಯಾಸ ಅಥವಾ ಉದ್ಯಮಕ್ಕೆ ಶುಭಾರಂಭ ಮಾಡುವುದು. ದೈವಿಕ ಶಕ್ತಿಯನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸುವುದಾಗಿದೆ.
ಮೈಸೂರು ದಸರಾ ಮತ್ತು ವಿಜಯದಶಮಿ
ಮೈಸೂರು ದಸರಾ ಕರ್ನಾಟಕದ ಪ್ರಮುಖ ಸಾಂಸ್ಕೃತಿಕ ಉತ್ಸವಗಳಲ್ಲಿ ಒಂದಾಗಿದೆ. ವಿಜಯದಶಮಿಯಂದು ನಡೆಯುವ ಜಂಬೂ ಸವಾರಿ ಈ ಹಬ್ಬದ ಪ್ರಮುಖ ಆಕರ್ಷಣೆ. ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಚಿನ್ನದ ಅಂಬಾರಿಯಲ್ಲಿ ಕೊಂಡೊಯ್ಯುವ ಸಂಪ್ರದಾಯವಿದೆ. ಮೈಸೂರು ಅರಸರ ಕಾಲದಿಂದ ದಸರಾ ಉತ್ಸವಕ್ಕೆ ರಾಜಸಂಪ್ರದಾಯದ ಮಹತ್ವವಿದೆ. ಧಾರ್ಮಿಕ ಆಚರಣೆಗಳ ಜೊತೆಗೆ ಕಲೆ, ಸಂಗೀತ, ಜನಪದ ಮತ್ತು ಕರ್ನಾಟಕದ ಪರಂಪರೆಯೂ ಈ ಉತ್ಸವದಲ್ಲಿ ಪ್ರತಿಬಿಂಬಿಸುತ್ತವೆ.
ವಿಜಯದಶಮಿಯ ಆಳವಾದ ತಾತ್ವಿಕ ಅರ್ಥ
ವಿಜಯದಶಮಿಯನ್ನು ಹೊರಗಿನ ಶತ್ರುವಿನ ಮೇಲಿನ ವಿಜಯವೆಂದು ಮಾತ್ರ ನೋಡಬೇಕಾಗಿಲ್ಲ. ನಮ್ಮೊಳಗಿನ ದುರಗುಣಗಳ ವಿರುದ್ಧದ ಹೋರಾಟವೆಂದೂ ಅರ್ಥೈಸಬಹುದು.
ಆಯುಧ ಪೂಜೆಯ ಹಾಗೂ ವಿಜಯದಶಮಿಯ ಸಂದೇಶ
ನಮ್ಮಲ್ಲಿರುವ ಆಯುಧ, ಶಕ್ತಿ, ಜ್ಞಾನ ಮತ್ತು ಸಾಮರ್ಥ್ಯವನ್ನು ಲೋಕಕಲ್ಯಾಣಕ್ಕಾಗಿ ಬಳಸಿದಾಗಲೇ ವಿಜಯಕ್ಕೆ ನಿಜವಾದ ಅರ್ಥ ಬರುತ್ತದೆ. ಜನಕನಿಂದ ನೇಗಿಲಿಗೆ ಗೌರವ ದಧೀಚಿ ಮಹರ್ಷಿಗಳ ತ್ಯಾಗ, ದೇವಿಯ ಮಹಿಷಾಸುರ ಸಂಹಾರ ಮತ್ತು ಶ್ರೀರಾಮನ ವಿಜಯ — ಈ ಕಥೆಗಳೆಲ್ಲವೂ ಒಂದೇ ಮೌಲ್ಯವನ್ನು ಸಾರುತ್ತದೆ ಅದೇಂದರೆ ಶಕ್ತಿಯು ಧರ್ಮದ ಪರವಾಗಿರಬೇಕು ಎಂಬ ನೀತಿಯಾಗಿದೆ.
ಬರಹ: ಸಾಯಿಚನ್ನಪ್ಪ ರಾಜು

