ನೇತ್ರ ಜ್ಯೋತಿ ಕಾಲೇಜಿನಲ್ಲಿ ಫಿಸಿಯೋಥೆರಪಿ ಕ್ಲಿನಿಕ್ ಉದ್ಘಾಟನೆ
ಕ್ಲಿನಿಕ್ ಉದ್ಘಾಟಿಸಿದ ಮಣಿಪಾಲ ಕಾಲೇಜು ಆಫ್ ಹೆಲ್ತ್ ಸೈನ್ಸ್ ನ ಡೀನ್ ಡಾ. ಅರುಣ್ ಮಯ್ಯ
(Udupi) ಉಡುಪಿ: ಉಡುಪಿಯ ನೇತ್ರ ಜ್ಯೋತಿ ಕಾಲೇಜಿನಲ್ಲಿ ಫಿಸಿಯೋಥೆರಪಿ ಕ್ಲಿನಿಕ್ ಅನ್ನು ಮಣಿಪಾಲ ಕಾಲೇಜು ಆಫ್ ಹೆಲ್ತ್ ಸೈನ್ಸ್ ನ ಡೀನ್ ಡಾ. ಅರುಣ್ ಮಯ್ಯರವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭ ಅವರು ಮಾತನಾಡಿ, ಮಾನವನಿಗೆ ಮೊದಲ ಉಸಿರಿನಿಂದ ಕೊನೆಯ ಉಸಿರು ಇರುವವರೆಗೆ ಫಿಸಿಯೋಥೆರಪಿ ಚಿಕಿತ್ಸೆಯ ಅವಶ್ಯಕತೆ ಇದೆ. ಮನುಷ್ಯ ಎಷ್ಟು ವರ್ಷ ಬದುಕಿದ್ದೇನೆ ಎನ್ನುವುದುಕಿಂತ ಎಷ್ಟು ವರ್ಷ ಆರೋಗ್ಯವಂತನಾಗಿ ಬದುಕಿದ್ದೇನೆ ಎನ್ನುವುದು ಬಹಳ ಪ್ರಮುಖವಾಗಿರುತ್ತದೆ. ನೇತ್ರ ಜ್ಯೋತಿ ಕಾಲೇಜಿನಲ್ಲಿ ಪ್ರಾರಂಭವಾದ ಸುಸಜ್ಜಿತ ಫಿಸಿಯೋಥೆರಪಿ ಕ್ಲಿನಿಕ್ ನ ಪ್ರಯೋಜನವನ್ನು ಎಲ್ಲರೂ ಪಡೆಯುವಂತಾಗಬೇಕು ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿ ಉಜ್ವಲ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಪುರುಷೋತ್ತಮ ಶೆಟ್ಟಿರವರು, ಭವಿಷ್ಯದಲ್ಲಿ ನೇತ್ರ ಜ್ಯೋತಿ ಕಾಲೇಜು ಒಂದು ಶ್ರೇಷ್ಠ ಸಂಸ್ಥೆಯಾಗಿ ಮೂಡಿ ಬರಲಿ ಎಂದು ಶುಭ ಹಾರೈಸಿದರು.
ಬಡಗು ಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿಯವರು ಮಾತನಾಡಿ, ಬದಲಾದ ವೈದ್ಯಕೀಯ ಕ್ಷೇತ್ರದಲ್ಲಿ ಶಸ್ತ್ರ ಚಿಕಿತ್ಸೆಗಿಂತ ಫಿಸಿಯೋಥೆರಪಿಯಂತಹ ಚಿಕಿತ್ಸೆಗಳು ಹೆಚ್ಚು ಪರಿಣಾಮಕಾರಿ ಎಂದ ಅವರು, ಡಾ.ಕೃಷ್ಣಪ್ರಸಾದ್ ರವರ ಸಮಾಜಮುಖಿ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತ ಪಡಿಸಿ, ಸಂಸ್ಥೆಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷೆಯನ್ನು ವಹಿಸಿ ಮಾತನಾಡಿದ ನೇತ್ರ ಜ್ಯೋತಿ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷರಾದ ನಾಡೋಜ ಡಾ. ಕೃಷ್ಣಪ್ರಸಾದ್ ಕೂಡ್ಲು, ವೈದ್ಯಕೀಯ ಕ್ಷೇತ್ರ ಪರಿಪೂರ್ಣತೆಯನ್ನು ಪಡೆಯಬೇಕಾದರೆ ಅರೆ ವೈದ್ಯಕೀಯ ಸಿಬ್ಬಂದಿಗಳ ಪಾತ್ರ ಬಹಳ ಮುಖ್ಯ ಎಂದ ಅವರು, ವಿದ್ಯಾರ್ಥಿಗಳಿಗೆ ಮತ್ತು ಊರಿನ ಜನರಿಗಾಗಿ ಇಂತಹ ಸುಸಜ್ಜಿತ ಫಿಸಿಯೋಥೆರಪಿ ಕ್ಲಿನಿಕ್ ಅನ್ನು ಪ್ರಾರಂಭಿಸಿದ್ದೇವೆ. ಸಮಾಜದ ಕಟ್ಟಕಡೆಯ ವ್ಯಕ್ತಿ ಕೂಡ ಅದರ ಉಪಯೋಗವನ್ನು ಪಡೆಯಬೇಕು ಎಂದರು.
ನೇತ್ರ ಜ್ಯೋತಿ ಕಾಲೇಜಿನ ಅಧ್ಯಕ್ಷೆ ಶ್ರೀಮತಿ ರಶ್ಮಿ ಕೃಷ್ಣಪ್ರಸಾದ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಈಗಿನ ಯಾತ್ರೀಕೃತ ಜೀವನದಲ್ಲಿ ಒಂದಲ್ಲ ಒಂದು ರೀತಿಯ ಆರೋಗ್ಯ ಸಮಸ್ಯೆ ಜನರನ್ನು ಕಾಡುತ್ತಿದೆ. ನಮ್ಮ ನೇತ್ರ ಜ್ಯೋತಿ ಕಾಲೇಜಿನಲ್ಲಿ ಅನೇಕ ವೈದ್ಯಕೀಯ ಕೋರ್ಸುಗಳ ಜೊತೆಗೆ ಫಿಸಿಯೋಥೆರಪಿ ಕಾಲೇಜನ್ನು ಸ್ಥಾಪಿಸಿದ್ದು, ಅದಕ್ಕೆ ಪೂರಕವಾಗುವಂತೆ ಫಿಸಿಯೋಥೆರಪಿ ಕ್ಲಿನಿಕ್ ಅನ್ನು ಪ್ರಾರಂಭಿಸಿದ್ದೇವೆ. ಎಲ್ಲರೂ ಇದರ ಪ್ರಯೋಜನ ಪಡೆಯಬೇಕೆಂದರು.
ಕಾಲೇಜಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಗೌರಿ ಪ್ರಭು ನೇತ್ರಜ್ಯೋತಿ ಫಿಸಿಯೋಥೆರಪಿ ಕ್ಲಿನಿಕ್ ನಲ್ಲಿ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಕಾಲೇಜು ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕಾರ್ಡಿನೇಟರ್ ಮಾಧವ ಪೂಜಾರಿ ಸ್ವಾಗತಿಸಿದರು. ಉಪನ್ಯಾಸಕಿ ಶ್ರುತಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಶ್ರಾವ್ಯ ವಂದಿಸಿದರು.

