ಪಂಚ ಗ್ಯಾರಂಟಿಗಳಿಂದ ಮಹಿಳಾ ಸಬಲೀಕರಣಕ್ಕೆ ಹೊಸ ಆಯಾಮ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಉಡುಪಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ರಿಂದ ಧ್ವಜಾರೋಹಣ
(Udupi) ಉಡುಪಿ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಗ್ರಾಮೀಣ ಮಟ್ಟದಲ್ಲಿ ಮಹಿಳಾ ಸಬಲೀಕರಣಕ್ಕೆ ಹೊಸ ಆಯಾಮ ನೀಡಿವೆ. ಇದರಿಂದ ರಾಜ್ಯಾದ್ಯಂತ ಶೇ. 70 ರಿಂದ 95 ರಷ್ಟು ಬಡ ಹಿಂದುಳಿದ ಮಹಿಳೆಯರ ಜೀವನ ಮಟ್ಟ ಸುಧಾರಣೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಉಡುಪಿಯಲ್ಲಿ ಶನಿವಾರ 70ನೇ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ನಮ್ಮ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಗ್ರಾಮೀಣ ಮಟ್ಟದಲ್ಲಿ ಮಹಿಳಾ ಸಬಲೀಕರಣಕ್ಕೆ ಹೊಸ ಆಯಾಮ ನೀಡಿವೆ. ಇದರಿಂದ ರಾಜ್ಯಾದ್ಯಂತ ಶೇ. 70 ರಿಂದ 95 ರಷ್ಟು ಬಡ ಹಿಂದುಳಿದ ಮಹಿಳೆಯರ ಜೀವನ ಮಟ್ಟ ಸುಧಾರಣೆಯಾಗಿದೆ. ಶಕ್ತಿ, ಗೃಹಜ್ಯೋತಿ ಉಳಿತಾಯದ ಹಣ ಮತ್ತು ಗೃಹಲಕ್ಷ್ಮೀ ಹಣವನ್ನು ಪ್ರಮುಖವಾಗಿ ಆಹಾರ ಪದಾರ್ಥಗಳ ಖರೀದಿಗೆ ಬಳಸುತ್ತಿದ್ದು, ಇದರಿಂದ ಶೇ.88ರಷ್ಟು ಕುಟುಂಬಗಳು ಉತ್ತಮ ಮತ್ತು ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸುತ್ತಿದ್ದಾರೆ. ಶೇ. 83 ರಷ್ಟು ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಗ್ಯಾರಂಟಿಗಳು ಸಹಕಾರಿಯಾಗಿರುವ ಅಂಶ ಅಧ್ಯಯನದಿಂದ ಬಹಿರಂಗವಾಗಿದೆ ಎಂದು ಹೇಳಿದರು.
ಇದಕ್ಕೂ ಮೊದಲು ಸಚಿವರು ಗೌರವ ರಕ್ಷೆ ಸ್ವೀಕರಿಸಿ ಪಥ ಸಂಚಲನ ವೀಕ್ಷಿಸಿದರು.
ಜಿಲ್ಲಾಮಟ್ಟದಲ್ಲಿ 77 ಸಾಧಕರು ಮತ್ತು ಸಂಘ ಸಂಸ್ಥೆಗಳಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿಕೆ, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, ಶಾಸಕರುಗಳಾದ ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಸುನೀಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

