ಪಡುಬಿದ್ರಿಯಲ್ಲಿ”ಗೃಹಜ್ಯೋತಿ” ಹೆಸರಲ್ಲಿ ಬಡ ಜನರಿಂದ ಹೆಚ್ಚು ಹಣ ವಸೂಲಿ ಮಾಡುತ್ತಿರುವ ಸೈಬರ್ ಕೇಂದ್ರಗಳು
ಸೂಕ್ತ ಕಾನೂನು ಕ್ರಮ ಕೈಗೊಳ್ಳುವೆ: ತಹಶಿಲ್ದಾರ್
ಇಪ್ಪತ್ತು ರೂಪಾಯಿ ಪಡೆಯ ಬೇಕಾಗಿದ್ದ ಗೃಹಜ್ಯೋತಿ ಯೋಜನೆಯ ನೋಂದಾವಣಿಗೆ ಪಡುಬಿದ್ರಿ ಸೈಬರ್ ವೊಂದರಲ್ಲಿ 100 ರೂಪಾಯಿ ಪಡೆಯುತ್ತಿರುವುದನ್ನು ವಿರೋಧಿಸಿದ ಗ್ರಾ.ಪಂ. ಸದಸ್ಯರ ದೂರಿನನ್ವಯ ಕಾಪು ತಹಶಿಲ್ದಾರ್ ಅಂಥಹ ಸೈಬರ್ ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಪಡುಬಿದ್ರಿ ಗ್ರಾ.ಪಂ. ಸದಸ್ಯೆ ಜ್ಯೋತಿ ಮೆನನ್, ಸರ್ಕಾರ ಬಡವರಿಗಾಗಿ ನೀಡುವ “ಗೃಹಜ್ಯೋತಿ” ಯೋಜನೆಯನ್ನು ದುರುಪಯೋಗ ಮಾಡಿಕೊಂಡ ಪಡುಬಿದ್ರಿಯ ಗ್ರಾ.ಪಂ. ಮುಂಭಾಗದ ಸ್ಟಾರ್ ಸೈನ್ ಹೆಸರಿನ ಸೈಬರ್ ಸೆಂಟರ್ ನಲ್ಲಿ ಇಪ್ಪತ್ತು ರೂಪಾಯಿ ಪಡೆಯ ಬೇಕಾಗಿದ್ದರೂ, ಯಾವುದೇ ಮುಲಾಜಿಲ್ಲದೆ ಬಡಪಾಯಿ ಗ್ರಾಹಕರಲ್ಲಿ ನೂರು ರೂಪಾಯಿಗಳಂತೆ ವಸೂಲಿ ಮಾಡುತ್ತಿದ್ದು, ಇದು ಸ್ವತ: ನಮ್ಮ ಗ್ರಾ.ಪಂ. ಸದಸ್ಯ ಶಫಿಯವರ ಗಮನಕ್ಕೆ ಬಂದಿದೆ ಎಂದರು.
ಘಟನಾ ಸ್ಥಳಕ್ಕೆ ಪಡುಬಿದ್ರಿ ಪೊಲೀಸರು ಬಂದು ವಿಚಾರಿಸಿದ್ದಾರೆ. ಈ ವಿಚಾರ ಕಾಪು ತಹಶಿಲ್ದಾರ್ ಗಮನಕ್ಕೆ ತಂದಿದ್ದು, ಅವರು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ವ್ಯಕ್ತ ಪಡಿಸಿದ್ದಾರೆ.
ಸೈಬರ್ ಮಾಲಿಕ ಇಮ್ತಿಯಾಜ್ ಮೊದಲಿಗೆ ತಾನು ಮಾಡಿದ ಅಪರಾಧವನ್ನು ಸಮರ್ಥಿಸಿ ಬಜೆಪೆಯಲ್ಲಿ ನೂರು ಇದೆ. ಆದ್ದರಿಂದ ನಾನು ನೂರು ರೂಪಾಯಿ ತೆಗೆದುಕೊಳ್ಳುತ್ತೇನೆ ಎಂದು ಉದ್ಧಟತನ ತೋರಿದ್ದು, ಪೊಲೀಸ್ ಎಂಟ್ರಿ ಹಾಗೂ ತಹಶಿಲ್ದಾರ್ ಕಾನೂನು ಕ್ರಮದ ಬಗ್ಗೆ ತಿಳಿಯುತ್ತಿದ್ದಂತೆ ದರ ಕಡಿತ ಗೊಳಿಸುವುದಾಗಿ ತಿಳಿಸಿದ್ದಾನೆ.
ಆದರೆ ಈ ಹಿಂದೆ ಬಡಪಾಯಿಗಳಿಂದ ಹೆಚ್ಚುವರಿಯಾಗಿ ಪಡೆದ ಮೊತ್ತಕ್ಕೆ ಏನು ಪರಿಹಾರ ಎಂಬುದು ತಹಶಿಲ್ದಾರ್ ತನಿಖೆ ಬಳಿಕವಷ್ಟೇ ಇತ್ಯಾರ್ಥವಾಗಲಿದೆ.
