ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ಜಗತ್ಪ್ರಸಿದ್ಧ ಕಟ್ಟದಪ್ಪ
Photo credit : Ravi Digitals Padubiri,
(Padubidri) ಪಡುಬಿದ್ರಿ : ಪುರಾಣ ಪ್ರಸಿದ್ಧ ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ಶನಿವಾರ ವಿಶೇಷ ಕಟ್ಟದಪ್ಪ (ಕಟಾಹಾಪೂಪ) ಸಾವಿರಾರು ಭಕ್ತಾಧಿಗಳ ಸಮಕ್ಷಮ ವಿಜ್ರಂಭಣೆಯಿಂದ ಜರಗಿತು.
ಇಲ್ಲಿ ಮಹಾಲಿಂಗೇಶ್ವರನು ಪ್ರಧಾನ ದೇವರಾದರೂ ಅತೀ ವಿಶಿಷ್ಟ ಸೇವೆಗಳು ನಡೆಯುವುದು ಶ್ರೀ ಮಹಾಗಣಪತಿ ದೇವರಿಗೆ ಅಪ್ಪಸೇವೆ.
ಅವಿಭಜಿತ ಜಿಲ್ಲೆಯಲ್ಲದೆ ದೇಶ ವಿದೇಶಗಳ ಭಕ್ತರು ಇಲ್ಲಿ ನಡೆಯುವ ವಿಶೇಷ ಕಟ್ಟದಪ್ಪ (ಕಟಾಹಾಪೂಪ) ಸೇವೆಯಲ್ಲಿ ಪಾಲ್ಗೊಳ್ಳುವುದು ಇಲ್ಲಿನ ವಿಶೇಷತೆ. ಶ್ರೀ ಮಹಾಗಣಪತಿ ದೇವರ ಇಷ್ಟಾರ್ಥ ಇಲ್ಲಿ ನಡೆಯುವ ಕಟ್ಟದಪ್ಪ ಮತ್ತು ಪೊಟ್ಟಪ್ಪ ಸೇವೆಗಳು ಜಗತ್ಪಸಿದ್ಧ.
ಪಡುಬಿದ್ರಿ ಗ್ರಾಮದ ಕಲ್ಲಟ್ಟೆ ಎಂಬಲ್ಲಿ ಕಟ್ಟಪುಣಿ (ಅಣೆಕಟ್ಟು) ನಿಲ್ಲುತ್ತಿರಲಿಲ್ಲ ಎಂದು ಹಿಂದಿನ ಕಾಲದಲ್ಲಿ ಗ್ರಾಮದ ಹಿರಿಯರು ಪಡುಬಿದ್ರಿ ಮಹಾಗಣಪತಿಗೆ ಕಟ್ಟದಪ್ಪ ಹರಕೆ ಹೇಳಿದ್ದರಂತೆ. ಹರಕೆ ಸಲ್ಲಿಸಿದ ಬಳಿಕ ಕಟ್ಟಪುಣಿ ಸುದೃಢವಾಗಿ ನಿಂತಿತು ಎಂದು ಇಲ್ಲಿನ ಭಕ್ತರ ನಂಬಿಕೆ. ಅಂದು 5-6 ಸೇರು ಅಕ್ಕಿ ಹಿಟ್ಟು ಮೂಲಕ ಮಧ್ಯಾಹ್ನ ನಡೆಯುತ್ತಿದ್ದ ಸೇವೆ ಇಂದು ಜಗದಗಲ ಹರಡಿ 100 ಮುಡಿ ವರೆಗೆ ಬಂದು ತಲುಪಿದೆ.
ಬ್ರಿಟೀಷ್ ಕಾಲದಲ್ಲಿ ಬ್ರಿಟೀಷ್ ಮೇಲಾಧಿಕಾರಿಯೊಬ್ಬ ದೇವಳದ ಮುಂಭಾಗ ಕುದುರೆ ಏರಿ ಬಂದಾಗ ದೇವರಿಗೆ ನಮಸ್ಕರಿಸಲಿಲ್ಲ. ಸ್ಥಳೀಯರು ನಮಸ್ಕರಿಸಿ ತೆರಳುವಂತೆ ವಿನಂತಿಸಿದರೂ ಆತ ಕೇಳಲಿಲ್ಲ. ತಕ್ಷಣ ಕುದುರೆ ಕಾಲು ಮುರಿದು ಆತನ ಸಂಚಾರ ವ್ಯತ್ಯಯವಾಯಿತು. ಭಕ್ತರ ಸಲಹೆಯಂತೆ ಶ್ರೀ ಮಹಾಗಣಪತಿಗೆ ಪೊಟ್ಟಪ್ಪ ಸೇವೆ ಹರಕೆ ಹೇಳಿದ ಬಳಿಕ ಆತನ ಪ್ರಯಾಣ ಮುಂದುವರೆಯಿತು ಎಂದು ಭಕ್ತರು ನಂಬಿರುವ ಪ್ರತೀತಿ. ಆ ಬಳಿಕ ಇಲ್ಲಿ ಪೊಟ್ಟಪ್ಪ ಸೇವೆಯು ಬಲು ಪ್ರಸಿದ್ಧಿ ಪಡೆಯಿತು. ಪೊಟ್ಟಪ್ಪ ಸೇವೆ ಸಾರ್ವಜನಿಕ ನೆಲೆಯಲ್ಲಿ ನಡೆಯುವುದಿಲ್ಲ.
ಕಳೆದ 30 ವರ್ಷಗಳಿಂದ ಶ್ರೀ ದೇವಳದಲ್ಲಿ ಯೋಗೀಶ್ ಭಟ್ ಕರ್ಕಟೆ ಹೌಸ್ ರವರ 80 ಜನರ ತಂಡ ಇಲ್ಲಿ ಕಟ್ಟದಪ್ಪ ತಯಾರಿಸುವ ಕಾಯಕ ಮಾಡುತ್ತಾ ಬಂದಿದೆ. ಹಿಂದೆ 20 ಮುಡಿ ಅಕ್ಕಿ ಹಿಟ್ಟಿನಿಂದ ಕಟ್ಟದಪ್ಪ ತಯಾರಿಸಲಾಗುತ್ತಿತ್ತು ಎನ್ನುವ ಯೋಗಿಶ್ ಭಟ್, ಈ ವರ್ಷ 100 ಮುಡಿ ಅಕ್ಕಿ ಹಿಟ್ಟು ಉಪಯೋಗಿಸಿ ಕಟ್ಟದಪ್ಪ ತಯಾರಿಸಲಾಗುತ್ತಿದೆ. ಇದರಿಂದ ಇದರ ಜನಪ್ರಿಯತೆ ಹಾಗೂ ಭಕ್ತರ ಭಕ್ತಿ ಭಾವದ ಬಗ್ಗೆ ಅರಿಯಬಹುದು ಎನ್ನುತ್ತಾರೆ.
ಈ ಬಾರಿ ಕಟ್ಟದಪ್ಪಕ್ಕೆ 8೦ ಮುಡಿ ಅಕ್ಕಿ ಹಿಟ್ಟು, 1400 ತೆಂಗಿನ ಕಾಯಿ, 7 ಕ್ವಿಂಟಲ್ ಬಾಳೆ ಹಣ್ಣು, 3 ಕ್ವಿಂಟಾಲ್ ಬೆಲ್ಲ, 30 ಗೋಣಿ ಚೀಲ ಅರಳು, 5 ಕೆಜಿ ಏಲಕ್ಕಿ ಮತ್ತು 50 ಡಬ್ಬಿ ಕೊಬ್ಬರಿ ಎಣ್ಣೆ ಬಳಸಿ ಈ ಕಟ್ಟದಪ್ಪ ತಯಾರಿಸಲಾಗುತ್ತದೆ.
ಯೋಗೀಶ್ ಭಟ್ ಹಾಗೂ ಲಕ್ಷ್ಮೀಕಾಂತ್ ಭಟ್ಟರ ನೇತೃತ್ವದ 80 ಜನರ ಅಡುಗೆಯಾಳುಗಳ ಎರಡುತಂಡ ಸೇರಿ 8 ಬಾಣಲೆ, 2 ಕೊಪ್ಪರಿಗೆ, 22 ಗಾರೆ (ಅಪ್ಪದ ಕಾವಲಿ) ಮೂಲಕ ಮುಂಜಾನೆ 2 ಗಂಟೆಯಿಂದ ಆರಂಭಿಸಿ ರಾತ್ರಿ 8 ಗಂಟೆ ತನಕ ಸುಮಾರು 3ಲಕ್ಷ ಅಪ್ಪಗಳನ್ನು ತಯಾರಿಸಿದ್ದಾರೆ.
ರಾತ್ರಿ ವೇಳೆ ಸಾವಿರಾರು ಭಕ್ತರ ಸಮ್ಮುಖ ಶ್ರೀ ಗಣಪತಿಗೆ ವಿಶೇಷ ಪೂಜೆಯೊಂದಿಗೆ ಕಟ್ಟದಪ್ಪಗಳನ್ನು ಸಮರ್ಪಿಸಿದ ಬಳಿಕ ಸೇವೆ ಭರಿಸಿದ ಭಕ್ತರಿಗೆ ಈ ಕಟ್ಟದಪ್ಪಗಳನ್ನು ವಿತರಿಸಲಾಗುತ್ತದೆ. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಅಧಿಕವಾಗುತ್ತಿದೆ. ಸಾವಿರಾರು ಭಕ್ತಾಧಿಗಳು ಸೇವೆ ಬರೆಸಿದ್ದು, ಈ ಸೇವೆಯ ಮಹತ್ವವನ್ನು ಸಾರುತ್ತದೆ.
