• Home  
  • ಪಡುಬಿದ್ರಿ ಕಾಡಿಪಟ್ಣ ಪ್ರದೇಶದಲ್ಲಿ ಕಡಲ್ಕೊರೆತ: ತೆಂಗಿನ ಮರಗಳು  ಸಮುದ್ರ ಪಾಲು
- ಕರಾವಳಿ

ಪಡುಬಿದ್ರಿ ಕಾಡಿಪಟ್ಣ ಪ್ರದೇಶದಲ್ಲಿ ಕಡಲ್ಕೊರೆತ: ತೆಂಗಿನ ಮರಗಳು  ಸಮುದ್ರ ಪಾಲು

Share:   ಭಾರೀ ಮಳೆ, ಗಾಳಿಗೆ ಕಡಲ ತಡಿಯ ಉಸುಕಿನಲ್ಲಿ ಉಂಟಾಗಿರುವ ಭಾರೀ ಗುಳಿಯ ಪರಿಣಾಮವಾಗಿ ಸೋಮವಾರ ಪಡುಬಿದ್ರಿ ಬೀಚ್ ಪಕ್ಕದ ಕಾಡಿಪಟ್ಣ ಶಂಕರ ಎಮ್.ಅಮೀನ್ ಮನೆ ಬಳಿ ಸುಮಾರು ೫೦ ಮೀ. ಭಾಗದಲ್ಲಿ ಕಡಲ್ಕೊರೆತವುಂಟಾಗಿದೆ.  ಕಡಲಿನ ಅಬ್ಬರದ ತೆರೆಗಳಿಗೆ ಈಗಾಗಲೇ ಸುಮಾರು ೪ ತೆಂಗಿನ ಮರಗಳು, ಪಡುಬಿದ್ರಿ ಬೀಚ್ ಅಭಿವೃದ್ಧಿ ಕಾಮಗಾರಿಯ ಭಾಗವಾಗಿರುವ ಒಂದು ವಿದ್ಯುತ್ ಕಂಬವು ನೆಲಕಚ್ಚಿದೆ. ಇಲ್ಲಿನ ಅಭಿವೃದ್ಧಿ ಕಾಮಗಾರಿಯ ವೇಳೆ ಹಾಸಲಾಗಿದ್ದ ಹಾಲೋ ಬ್ಲಾಕ್ಸ್ ಅಂಗಳದ ಭಾಗ, ಹಲವು ತೆಂಗಿನ ಮರಗಳು ಹಾಗೂ […]

  ಭಾರೀ ಮಳೆ, ಗಾಳಿಗೆ ಕಡಲ ತಡಿಯ ಉಸುಕಿನಲ್ಲಿ ಉಂಟಾಗಿರುವ ಭಾರೀ ಗುಳಿಯ ಪರಿಣಾಮವಾಗಿ ಸೋಮವಾರ ಪಡುಬಿದ್ರಿ ಬೀಚ್ ಪಕ್ಕದ ಕಾಡಿಪಟ್ಣ ಶಂಕರ ಎಮ್.ಅಮೀನ್ ಮನೆ ಬಳಿ ಸುಮಾರು ೫೦ ಮೀ. ಭಾಗದಲ್ಲಿ ಕಡಲ್ಕೊರೆತವುಂಟಾಗಿದೆ.

 ಕಡಲಿನ ಅಬ್ಬರದ ತೆರೆಗಳಿಗೆ ಈಗಾಗಲೇ ಸುಮಾರು ೪ ತೆಂಗಿನ ಮರಗಳು, ಪಡುಬಿದ್ರಿ ಬೀಚ್ ಅಭಿವೃದ್ಧಿ ಕಾಮಗಾರಿಯ ಭಾಗವಾಗಿರುವ ಒಂದು ವಿದ್ಯುತ್ ಕಂಬವು ನೆಲಕಚ್ಚಿದೆ.

ಇಲ್ಲಿನ ಅಭಿವೃದ್ಧಿ ಕಾಮಗಾರಿಯ ವೇಳೆ ಹಾಸಲಾಗಿದ್ದ ಹಾಲೋ ಬ್ಲಾಕ್ಸ್ ಅಂಗಳದ ಭಾಗ, ಹಲವು ತೆಂಗಿನ ಮರಗಳು ಹಾಗೂ ಕಾಡಿಪಟ್ಣ ಕೈರಂಪಣಿ ಫಂಡ್‌ಗೆ ಸೇರಿರುವ ಗೋದಾಮು ಕಡಲೊಡಲು ಸೇರಲು ಕ್ಷಣಗಣನೆಯೂ ಆರಂಭವಾಗಿದೆ.

ಗೋದಾಮು ಒಳಗಡೆ ಇದ್ದ ಬೆಲೆಬಾಳುವ ದೋಣಿಗಳ ಸಹಿತ ಸಾಮಾನು ಸರಂಜಾಮುಗಳನ್ನು ಫಂಡಿನ ಸದಸ್ಯರು ತೆರವುಗೊಳಿಸಿದ್ದಾರೆ.

ಕಳೆದ ಬಾರಿ ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್ ಮುತುವರ್ಜಿಯಲ್ಲಿ ಪಡುಬಿದ್ರಿ ಮುಖ್ಯ ಬೀಚ್ ಹಾಗೂ ಕಾಡಿಪಟ್ಣಗಳಲ್ಲಿ ನಿರ್ಮಿಸಲಾದ ತಡೆಗೋಡೆಯ ಕಾಮಗಾರಿಯ ನಡುವೆ ಖಾಸಗಿ ವ್ಯಕ್ತಿಯೋರ್ವರ ಮನವಿಯಂತೆ ಸಮುದ್ರ ತೀರ ಪ್ರವೇಶಕ್ಕಾಗಿ ಕೈಬಿಡಲಾಗಿದ್ದ ಸುಮಾರು ೫೦ ಮೀಟರ್ ವ್ಯಾಪ್ತಿಯ ಪ್ರದೇಶದಲ್ಲೇ ಈ ಕೊರೆತವೀಗ ಕಾಣಿಸಿಕೊಂಡಿದೆ.

ಈಗಾಗಲೇ ಕಳೆದ ೨-೩ವರ್ಷಗಳಿಂದೀಚೆಗೆ ನಡೆಸಲಾಗಿರುವ ತಡೆಗೋಡೆ ಕಾಮಗಾರಿಗಳ ಕುರಿತಾಗಿ ಗುತ್ತಿಗೆದಾರರಿಗೆ ಸರಕಾರದ ವತಿಯಿಂದ ಆಗಬೇಕಾಗಿರುವ ಹಣದ ಪಾವತಿಯಾಗದಿರುವುದು ನಿರಾಶಾದಾಯಕವಾಗಿದೆ.

ಪಡುಬಿದ್ರಿ ಗ್ರಾಮ ಲೆಕ್ಕಾಧಿಕಾರಿ ಮಥಾಯಿ ಪಿ. ಎಂ. ಹಾಗೂ ಗ್ರಾಮ ಸಹಾಯಕ ಜಯರಾಮ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸರಕಾರಕ್ಕೆ ವರದಿ ನೀಡಿದ್ದಾರೆ. ಕಾಪು ತಹಶೀಲ್ದಾರ್ ಶ್ರೀನಿವಾಸಮೂರ್ತಿ ಅವರು ತಾವೇ ಸ್ವತಹಾ ಪರಿಶೀಲಿಸಿ, ಗ್ರಾಮ ಲೆಕ್ಕಾಧಿಕಾರಿಗಳ ವರದಿಯ ಮೇರೆಗೆ ಬಂದರು ಹಾಗೂ ಮೀನುಗಾರಿಕಾ ಇಲಾಖಾ ಅಧಿಕಾರಿಗಳನ್ನು ಸಂಪರ್ಕಿಸಿ ಈ ಪ್ರದೇಶದಲ್ಲಿ ತುರ್ತು ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಂತೆ ಸೂಚಿಸಲಾಗಿದೆ ಎಂದಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.