ಪಡುಬಿದ್ರಿ – ಕಾರ್ಕಳ ರಸ್ತೆಗೆ ಟೋಲ್ ಗೇಟ್ ಗೆ ಗುದ್ದಲಿ ಪೂಜೆ, ಸ್ಥಳೀಯರ ವಿರೋಧ
(Padubidri) ಪಡುಬಿದ್ರಿ: ಜನ ವಿರೋಧಕ್ಕೆ ಸೊಪ್ಪು ಹಾಕದೆ ಪಡುಬಿದ್ರಿ – ಕಾರ್ಕಳ ರಸ್ತೆ ಗುದ್ದಲಿ ಪೂಜೆ ನಡೆಸಲು ಬಂದ ತಂಡವನ್ನು ಸಾರ್ವಜನಿಕರು ಸೇರಿ ಹಿಂದೆ ಕಳುಹಿಸಿದ ಘಟನೆ ಪಡುಬಿದ್ರಿಯ ಸುಜ್ಲಾನ್ ಕಂಪನಿಯ ಸಮೀಪ ನಡೆದಿದೆ.
ಈ ಬಗ್ಗೆ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ರೇಷ್ಮಾ ಉದಯ ಶೆಟ್ಟಿ, ಭಾರತಿ ಕನ್ಸ್‌ಟ್ರಕ್ಷನ್ ಹೆಸರಿನ ಸಂಸ್ಥೆಯೊಂದು ಟೋಲ್ ಗೇಟ್ ನಿರ್ಮಾಣದ ಗುತ್ತಿಗೆ ಪಡೆದಿದೆ. ಮುಂದಿನ ಸೋಮವಾರದಿಂದಲೇ ಕಾಮಗಾರಿ ಆರಂಭಿಸಲಿದ್ದೇವೆ ಎಂದು ಟೋಲ್‌ನವರ ತಂಡದ ಸದಸ್ಯನೊರ್ವ ಹೇಳಿದ್ದಾನೆ. ನಾವು ಆತನಲ್ಲಿ ಪೂರಕ ದಾಖಲೆ ಪತ್ರಗಳನ್ನು ಕೇಳಿದಾಗ ಅದನ್ನು ನೀಡಲು ವಿಫಲನಾಗಿದ್ದಾನೆ. ಸುಜ್ಲಾನ್ ಕಂಪನಿಯ ಸಮೀಪ ರಾಜ್ಯ ಹೆದ್ದಾರಿ ಇಕ್ಕೆಲದಲ್ಲಿ ಕಲ್ಲುಗಳನ್ನಿಟ್ಟು ಅದಕ್ಕೆ ಅರಸಿನ ಹುಡಿ, ಕುಂಕುಮ ಹರಡಿ ಜನರನ್ನು ವಂಚಿಸುವ ನಾಟಕವಾಡಿದ್ದಾರೆ. ಜನ ಸೇರುತ್ತಿದಂತೆ ನಮ್ಮನ್ನು ಮನವೊಲಿಸುವ ಕೆಲಸ ಮಾಡಿದ್ದು, ಜನರು ಅವರ ಮೇಲೆ ಆಕ್ರೋಶಿತರಾಗಿದ್ದಾರೆ ಎಂದರು.
ಈ ಹಿಂದೆ ಬೆಳ್ಮಣ್ ಪ್ರದೇಶದಲ್ಲಿ ಬೇರೊಂದು ಗುತ್ತಿಗೆ ಕಂಪನಿ ಯತ್ನಿಸಿ ಕೈ ಸುಟ್ಟುಕೊಂಡಿತ್ತು. ಇದೀಗ ಈ ಭಾಗದಲ್ಲಿ ಪ್ರಯತ್ನ ನಡೆಸಲಾಗಿದೆ. ಟೋಲ್ ಗೇಟ್ ನಿರ್ಮಾಣ ನಡೆಸ ಬೇಕಿದ್ದರೆ ಪೂರಕ ಹೆದ್ದಾರಿ, ಮೂಲಭೂತ ಸೌಕರ್ಯಗಳ ನಿರ್ಮಾಣ ಮುಂತಾದವುಗಳು ಆಗ ಬೇಕಾಗಿದೆ. ಅದ್ಯಾವುದರ ಬಗ್ಗೆ ಮುಂದಾಲೋಚನೆಯನ್ನೇ ಮಾಡದೆ ನೇರವಾಗಿ ಟೋಲ್ ಗೇಟ್ ನಿರ್ಮಾಣಕ್ಕೆ ಮುಂದಾಗಿರುವುದು ಹಾಸ್ಯಾಸ್ಪದ ವಾಗಿದೆ.
ಹತ್ತು ವರ್ಷಗಳ ಹಿಂದೆ ನಿರ್ಮಾಣವಾದ ರಸ್ತೆಗೆ ಈಗ ಟೋಲ್ ನಾಟಕವಾಗಿ ಜನರನ್ನು ಸುಲಿಯಲು ಮುಂದಾದರೆ ಪಡುಬಿದ್ರಿ- ಕಾರ್ಕಳದುದ್ದಕ್ಕೂ ಜನ ಇದನ್ನು ಹಿಮ್ಮೆಟ್ಟಿಸಿಲು ಸಮರ್ಥರಾಗಿದ್ದಾರೆ. ಬೆಳ್ಮಣ್ ಟೋಲ್ ಹೋರಾಟ ಸಮಿತಿಯೂ ಈ ಹೋರಾಟದಲ್ಲಿ ಸಕ್ರಿಯವಾಗಲಿದೆ ಎಂದರು.
ಜನ ಸೇರುತ್ತಿದಂತೆ ಸ್ಥಳಕ್ಕೆ ಬಂದ ಪಡುಬಿದ್ರಿ ಪೊಲೀಸರು ಪರಿಸ್ಥಿತಿ ಕೈ ಮೀರದಂತೆ ನಿಯಂತ್ರಿಸಿದ್ದಾರೆ.
ಸುಮಾರು ಐವತ್ತಕ್ಕೂ ಅಧಿಕ ಮಂದಿ ಸಾರ್ವಜನಿಕರು ಕೆಲವೇ ಕ್ಷಣಗಳಲ್ಲಿ ಘಟನಾ ಸ್ಥಳದಲ್ಲಿ ಜಮಾಯಿಸಿದ್ದು, ಹೋರಾಟದ ಕಿಚ್ಚನ್ನು ಗುತ್ತಿಗೆ ಕಂಪನಿ ಗಮನಿಸಿದೆ.

