
ಪಡುಬಿದ್ರಿ : ನಡಿಪಟ್ಣ ಕಡಲ್ಕೊರೆತ ಪ್ರದೇಶಕ್ಕೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ, ಜಿಲ್ಲಾಧಿಕಾರಿ ಭೇಟಿ
(Padubidri) ಪಡುಬಿದ್ರಿ : ಇಲ್ಲಿನ ನಡಿಪಟ್ಣ ಕಡಲ್ಕೊರೆತ ಪ್ರದೇಶಕ್ಕೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷೀ ಹೆಬ್ಬಾಳ್ಕರ್ ಮತ್ತು ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿಯವರು ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಈಗಾಗಲೇ 478 ಕೋಟಿಯ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ. ರಾಜ್ಯದ 3,100 ಕಿ.ಮೀ. ಕರಾವಳಿ ತೀರದಲ್ಲಿ ಉಡುಪಿ ಜಲ್ಲೆಯಲ್ಲಿಯೇ ಹೆಚ್ಚು ಭಾಗವಿದೆ. ಕಡಲ್ಕೊರೆತಕ್ಕೆ ತೀರದಲ್ಲಿ ಪ್ರಸ್ತುತ ಹಾಕಲಾಗುತ್ತಿರುವ ಕಲ್ಲುಗಳು ತಾತ್ಕಾಲಿಕ ಪರಿಹಾರವಾಗಿದ್ದು, ತಡೆಗೋಡೆ ನಿರ್ಮಾಣವೊಂದೇ ಶಾಶ್ವತ ಪರಿಹಾರ. ಮುಂಬಯಿ, ಗುಜರಾತ್ ಮಾದರಿಯ ತಡೆಗೋಡೆ ನಿರ್ಮಾಣವಾಗಬೇಕಿದೆ. ಇದು ಕೇಂದ್ರ ಮತ್ತು ರಾಜ್ಯ ಸರಕಾರ ಎರಡು ಸೇರಿ ಮಾಡಬೇಕಾಗಿದೆ. ಅನುದಾನದ ವಿಷಯದಲ್ಲಿ ಬೇರೊಬ್ಬರ ಮೇಲೆ ಆರೋಪ ಮಾಡಲ್ಲ. ನನ್ನ ಅವಧಿಯಲ್ಲಿಯೇ ಈ ಕಾರ್ಯ ಆಗಲು ಪ್ರಯತ್ನಿಸುತ್ತೇನೆ ಎಂದರು.
ಈ ಸಂದರ್ಭ ಸ್ಥಳೀಯರು ಸಚಿವೆಯೊಂದಿಗೆ ಮಾತನಾಡಿ, ನಮಗೆ ಈ ಜಾಗ ಬಿಟ್ಟು ಬೇರೆಡೆ ಹೋಗಲು ಸಾಧ್ಯವಿಲ್ಲ. ತಕ್ಷಣ ಸೂಕ್ತ ಕ್ರಮ ತೆಗೆದುಕೊಳ್ಳಿ. ಕಡಲನ್ನು ನಂಬಿ ಬದುಕಿದ ನಮಗೆ ಬೇರೆ ಉದ್ಯೋಗವಿಲ್ಲ. ಮರವಂತೆ, ಪಡುಕರೆಯಂತೆ ಇಲ್ಲಿ ಮಾಡಬೇಕಾಗಿದೆ. ಕಲ್ಲು ತಂದು ಹಾಕಿದರೂ ಏನೂ ಪ್ರಯೋಜನವಿಲ್ಲ ಎಂದು ಸಚಿವರಿಗೆ ಮನವರಿಕೆ ಮಾಡಿದರು.
ಈ ಸಂದರ್ಭ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ., ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಅಸಿಸ್ಟೆಂಟ್ ಕಮಿಷನರ್ ರಶ್ಮಿ, ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್., ಕಾಪು ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿ’ ಸಿಲ್ವ, ಆಧಿಕಾರಿ ವರ್ಗದವರು, ಮೀನುಗಾರ ಮುಖಂಡರಾದ ವಿಶ್ವಾಸ್ ಅಮೀನ್, ಅಶೋಕ್ ಪಡುಬಿದ್ರಿ ಸಹಿತ ಸ್ಥಳೀಯರು ಉಪಸ್ಥಿತರಿದ್ದರು.
