
ಪಡುಬಿದ್ರಿ ಬಂಟರ ಸಂಘದ ಕಾರ್ಯಕ್ರಮಗಳು ಕಲಶಪ್ರಾಯವಾದವು: ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ
ಪಡುಬಿದ್ರಿ : ಬಂಟ ಬಾಂಧವರೊಂದಿಗೆ ಸಂವಹನವನ್ನು ನಡೆಸುವುದೇ ಬಲು ದೊಡ್ಡ ಹೆಮ್ಮೆಯಾಗಿದೆ. ನಿಮ್ಮ ಸಾಮಾಜಿಕ ಕಾರ್ಯಕ್ರಮಗಳು ಸಮಾಜಕ್ಕೂ ಒಳಿತನ್ನು ಮಾಡುವುದಂತು ನಿಶ್ಚಿತ. ಪಡುಬಿದ್ರಿ ಬಂಟರ ಸಂಘಕ್ಕೇ ಇದು ಉತ್ತಮ ಕಲಶಪ್ರಾಯ ಕೊಡುಗೆಯಾಗಿದೆ ಎಂದು ಮುಂಬಯಿ ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ಹೇಳಿದರು.
ಅವರು ಪಡುಬಿದ್ರಿ ಬಂಟರ ಸಂಘದ ಸಭಾ ಭವನದಲ್ಲಿ ಸಿರಿಮುಡಿ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿಗೆ ಚಾಲನೆ ಹಾಗೂ ಬಂಟಾಶ್ರಯ ಕುಟುಂಬ ಸೇವಾಶ್ರಮ ಸಾಮಾಜಿಕ ಕಲ್ಯಾಣ ಕಾರ್ಯಕ್ರಮ ಮತ್ತು ಸಿರಿಮುಡಿ ದತ್ತಿನಿಧಿಯ ಮೂಲಕ ೨೦ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿದ್ದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಅಶಕ್ತರಿಗೆ ನೆರವು ವಿತರಿಸಿ ಮಾತನಾಡಿ, ಡಾ| ದೇವಿಪ್ರಸಾದ್ ಶೆಟ್ಟಿ ಅವರು ಬಲುದೊಡ್ಡ ಶಕ್ತಿಯಾಗಿದ್ದಾರೆ. ನಾವು ನಮ್ಮ ಒಳಗಿನ ಭಿನ್ನಾಭಿಪ್ರಾಯಗಳನ್ನು ಮರೆತು ಅಶಕ್ತರಿಗೆ ಸಹಾಯವಾಗೋಣ. ಮುಂದಿನ ಜಾಗತಿಕ ಬಂಟರ ಸಂಘದ ಕಾರ್ಯಕ್ರಮಗಳಿಗೆ ಸಹಕರಿಸಿ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಅದಾನಿ ಸಂಸ್ಥೆಯ ದ. ಭಾರತ ಅಧ್ಯಕ್ಷ ಕಿಶೋರ್ ಆಳ್ವ ಮಾತನಾಡಿ, ೧೭ಲಕ್ಷ ಜನಸಂಖ್ಯೆಯಿರುವ ಮುಂಬಯಿನಲ್ಲಿ ಬಂಟರು ಶ್ರಮಜೀವಿಗಳಾಗಿ ಸಮಾಜಕ್ಕೆ ನೆರವಾಗುತ್ತಿದ್ದಾರೆ. ಧಾನಧರ್ಮ ಗೈಯ್ಯುತ್ತಿದ್ದಾರೆ. ಅದಾನಿ ಸಂಸ್ಥೆಯೂ ಸಾಮಾಜಿಕ ಜವಾಬ್ದಾರಿಯ ಕಾರ್ಯಕ್ರಮಗಳೊಂದಿಗೆ ಸಮಾಜಕ್ಕೆ ನೆರವಾಗುತ್ತಿದೆ. ಬಂಟರಿಗೂ ಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದರು.
ಮುಂಬಯಿ ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ಅವರು ಸಿರಿಮುಡಿ ಕೋ ಆಪರೇಟಿವ್ ಸೊಸೈಟಿಗೆ ಚಾಲನೆ ನೀಡಿ, ಎಂಬ್ಲಮ್ ಬಿಡುಗಡೆಗೊಳಿಸಿದರು.
ಎಲ್ಲೂರಿನ ತನ್ನದೇ ೬ಎಕ್ರೆ ಜಾಗದಲ್ಲಿ ನಿರ್ಮಾಣಗೊಳ್ಳಲಿರುವ ಬಂಟಾಶ್ರಯ ಯೋಜನೆಗೆ ಮುಂಬಯಿ ಉದ್ಯಮಿ ಪ್ರವೀಣ್ ಭೋಜ ಶೆಟ್ಟಿ ಅವರು ಚಾಲನೆಯನ್ನಿತ್ತರು.
ಉದ್ಯಮಿ ಕೆ. ಎಂ. ಶೆಟ್ಟಿ, ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಅವರನ್ನು ಸಮ್ಮಾನಿಸಲಾಯಿತು. ಶಾಸಕ ಸುರೇಶ್ ಶೆಟ್ಟಿ ಅವರು ಸಮ್ಮಾನಕ್ಕುತ್ತರಿಸಿದರು.
ವೇದಿಕೆಯಲ್ಲಿ ಉದ್ಯಮಿಗಳಾದ ಕೆ. ಎಂ. ಶೆಟ್ಟಿ, ರಾಜೇಂದ್ರ ಶೆಟ್ಟಿ ಹುಬ್ಳಳ್ಳಿ, ಮುಂಬೈ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಸಿರಿಮುಡಿ ದತ್ತಿ ನಿಧಿಯ ಸ್ಥಾಪಕ ಸಾಂತೂರು ಭಾಸ್ಕರ ಶೆಟ್ಟಿ, ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಶಶಿಧರ ಶೆಟ್ಟಿ ಎರ್ಮಾಳು, ಸಂಘದ ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿ, ಮಹಿಳಾ ವಿಭಾಗದ ಅಧ್ಯಕ್ಷೆ ಜ್ಯೋತಿ ಶೆಟ್ಟಿ ಎರ್ಮಾಳು, ಯುವ ಬಂಟರ ಸಂಘದ ಅಧ್ಯಕ್ಷ ನವೀನ್ ಎನ್. ಶೆಟ್ಟಿ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಡಾ| ದೇವಿಪ್ರಸಾದ ಶೆಟ್ಟಿ ಬೆಳಪು ಅವರು ಸಭಾಧ್ಯಕ್ಷತೆಯನ್ನು ವಹಿಸಿದ್ದು, ಪ್ರಸ್ತಾವಿಸಿ ಸ್ವಾಗತಿಸಿದರು.
ಜಯ ಶೆಟ್ಟಿ ಪದ್ರ ಹಾಗೂ ಡಾ| ಮನೋಜ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು ವಂದಿಸಿದರು.

