
ಪಾದೂರು ಐಎಸ್ ಪಿಆರ್‌ಎಲ್ ಕಚ್ಛ ತೈಲಾ ಸಂಗ್ರಹಾಗಾರದ ಮೇಲೆ ಡ್ರೋನ್ ದಾಳಿ! ರಿಯಲ್ ಅಲ್ಲ….ಇದು ಅಣಕು ಕಾರ್ಯಾಚರಣೆ…..
(Kaup) ಕಾಪು: ಕಾಪು ಬಳಿಯ ಪಾದೂರು ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಲಿಮಿಟೆಡ್ (ಐ.ಎಸ್.ಪಿ.ಆರ್.ಎಲ್) ಮೇಲೆ ಡ್ರೋನ್ ಮೂಲಕ ಬಾಂಬ್ ದಾಳಿಯಾದ ಹಿನ್ನೆಲೆಯಲ್ಲಿ, ಕಂಪನಿ ಮುಂಭಾಗದ ಹೊರಭಾಗದಲ್ಲಿ ಹಾಗೂ ಒಳಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತು.
ತಕ್ಷಣ ಸೈರನ್ ಮೊಳಗಿ ಎಚ್ಚರಿಕೆ ಗಂಟೆ ಬಾರಿಸಲಾಗಿ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ಗೆ ಮಾಹಿತಿ ನೀಡಲಾಯಿತು.
ಐ.ಎಸ್.ಪಿ.ಆರ್.ಎಲ್ ನ ಬೆಂಕಿ ನಂದಕ ವಾಹನವು ಕಂಪನಿಯ ಒಳಭಾಗದಲ್ಲಿ ಕಾಣಿಸಿಕೊಂಡು ಬೆಂಕಿ ನಂದಿಸುವ ಕಾರ್ಯ ನಡೆಸಿತು. ಕೆಲವೇ ಕ್ಷಣಗಳಲ್ಲಿ ಅದಾನಿ ಕಂಪನಿಯ ಫೈರಿಂಜಿನ್ ಹೊರಭಾಗದ ಬೆಂಕಿ ನಂದಿಸುವ ಕಾರ್ಯವನ್ನು ಕೈಗೊಂಡಿತು. ಕಾಪು ಪೊಲೀಸ್ ಠಾಣೆಯ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಆಗಮಿಸಿ, ತುರ್ತು ಕಾರ್ಯಾಚರಣೆ ಕೈಗೊಂಡರು…..
ಇದೆಲ್ಲ ನಡೆದಿದ್ದು ಅಣಕು ಕಾರ್ಯಾಚರಣೆಯ ಭಾಗವಾಗಿ. ಆದರೆ ಸ್ಥಳೀಯರು ಇದನ್ನೇ ನಿಜವೆಂದು ನಂಬಿದ್ದರು.
ಒಂಡೆದೆ ಡ್ರೋನ್ ಮೂಲಕ ಸ್ಪೋಟಕಗಳ ಮೂಲಕ ಸ್ಪೋಟ, ಇನ್ನೊಂದೆಡೆ ಬೆಂಕಿ ಅನಾಹುತದ ಸಂದರ್ಭವನ್ನು ಸೃಷ್ಠಿಸಿ ಆಪರೇಷನ್ ಅಭ್ಯಾಸದ ಮೂಲಕ ಕಾಲ್ಪನಿಕ ತುರ್ತು ಪರಿಸ್ಥಿತಿ ಸೃಷ್ಠಿಸಿ, 270 ಕ್ಕೂ ಹೆಚ್ಚು ಸಿಬ್ಬಂದಿಗಳು ಸೇರಿ ತಾಲೀಮು ನಡೆಸಿದರು.
ಆಪರೇಷನ್ ಅಭ್ಯಾಸ್ ರಕ್ಷಣಾ ಕಾರ್ಯಚರಣೆಯಲ್ಲಿ ರೆವಿನ್ಯೂ ಇಲಾಖೆ, ಪೊಲೀಸ್ ಇಲಾಖೆ, ಅಗ್ನಿ ಶಾಮಕ ದಳ, ಕೈಗಾರಿಕಾ ಭದ್ರತಾ ಪಡೆ, ಕೋಸ್ಟಲ್ ಸೆಕ್ಯೂರಿಟಿ ಫೋರ್ಸ್, ಆರ್.ಟಿ.ಓ, ಆರೋಗ್ಯ ಇಲಾಖೆ, ಮೆಸ್ಕಾಂ, ಎಸ್.ಡಿ.ಆರ್.ಎಫ್ ತಂಡ, ಗೃಹ ರಕ್ಷಕದಳ, ಐ.ಎಸ್.ಪಿ.ಆರ್.ಎಲ್ ನ ರಕ್ಷಣಾ ಸಿಬ್ಬಂದಿಗಳು ಭಾಗವಹಿಸಿದ್ದರು.
ಅಣುಕು ಪ್ರದರ್ಶನದ ಮುಕ್ತಾಯಗೊಂಡ ನಂತರ ಜಿಲ್ಲಾಧಿಕಾರಿ ಮಾತನಾಡಿ, ಪ್ರಕೃತಿ ವಿಕೋಪ ಹಾಗೂ ಮಾನವ ನಿರ್ಮಿತ ವಿಪತ್ತುಗಳ ಸಂದರ್ಭದಲ್ಲಿ ರಕ್ಷಣಾ ಕಾರ್ಯಗಳನ್ನು ಕೈಗೊಳ್ಳುವ ಕುರಿತು ಆಪರೇಷನ್ ಅಭ್ಯಾಸ್ ಅಣುಕು ಪ್ರದರ್ಶನವನ್ನು ಐ.ಎಸ್.ಪಿ.ಆರ್.ಎಲ್ ಸಹಯೋಗದೊಂದಿಗೆ ಕೈಗೊಳ್ಳಲಾಗಿದೆ.
ಉಡುಪಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಮಾತನಾಡಿ, ಅಣುಕು ಪ್ರದರ್ಶನದಲ್ಲಿ ಡ್ರೋನ್ ದಾಳಿಯ ಸಂದರ್ಭದಲ್ಲಿ ಮಾನವನ ರಕ್ಷಣೆ ಹಾಗೂ ಸ್ಥಾವರಗಳ ರಕ್ಷಣೆ ಕೈಗೊಳ್ಳುವ ಕುರಿತು ನಡೆಸಲಾಗಿತ್ತು. ರಕ್ಷಣಾ ಕಾರ್ಯದಲ್ಲಿ ಪ್ರತಿಯೊಂದು ಇಲಾಖೆಗಳು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನೆರವೇರಿಸುವುದರೊಂದಿಗೆ ಪರಿಸ್ಥಿತಿಯನ್ನು ಅಲ್ಪಕಾಲದಲ್ಲಿಯೇ ಹತೋಟಿಗೆ ತಂದು ರಕ್ಷಣೆ ಒದಗಿಸಿದರು ಎಂದು ಹೇಳಿದರು.

