ಪುಳಿಮಜಲಿನಲ್ಲಿ ನೀರವ ಮೌನ : ಶಿವಮೊಗ್ಗ ಶಾಸಕರ ಭೇಟಿ, ಸಾಂತ್ವನ
(Bantwala) ಬಂಟ್ವಾಳ: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯಿಂದಾಗಿ ಬಂಟ್ವಾಳ ತಾಲೂಕಿನ ಕಾರಿಂಜ ಸಮೀಪದ ಪುಳಿಮಜಲಿನಲ್ಲಿರುವ ಅವರ ನಿವಾಸ ಹಾಗೂ ಪರಿಸರ ನೀರವ ಮೌನ ಅವರಿಸಿದೆ.
ಶುಕ್ರವಾರ ಸಂಜೆ ಸುಹಾಸ್ ಶೆಟ್ಟಿ ಪಾರ್ಥಿವ ಶರೀರದ ವಿಧಿವಿಧಾನ ನಡೆದು ಮನೆಪಕ್ಕದ ಅವರ ಗದ್ದೆಯಲ್ಲಿ ಅಂತ್ಯಕ್ರಿಯೆಯ ಬಳಿಕ ಮೂಲ ಮನೆಯಿಂದ ಹೆತ್ತವರ ಸಹಿತ ಎಲ್ಲರೂ ಎಂದಿನಂತೆ ಸಮೀಪದಲ್ಲಿರುವ ಇನ್ನೊಂದು ಮನೆಯಲ್ಲಿ ವಾಸ್ತವ್ಯವಿದ್ದಾರೆ.
ಪುಳಿಮಜಲುನಲ್ಲಿ ಸುಲೋಚನಾ ಶೆಟ್ಟಿ ಅವರ ತಾಯಿಯ ಕುಟುಂಬದ ಮನೆಯಿದ್ದು, ವರ್ಷಕ್ಕೊಂದು ಬಾರಿ ಇಲ್ಲಿ ಎಲ್ಲರೂ ಒಟ್ಟಾಗಿ ದೈವದ ಸೇವೆ ಮಾಡುತ್ತಾರೆ.
ಇದೇ ಮನೆಯಲ್ಲಿ ಸುಹಾಸ್ ಶೆಟ್ಟಿ ಅವರ ಅಂತಿಮ ವಿಧಿ ವಿಧಾನ ನೆರವೇರಿದ್ದು, ಬಳಿಕ ಸಮೀಪದ ಗದ್ದೆಯಲ್ಲಿ ಅಂತ್ಯ ಕ್ರಿಯೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಂಘ ಪರಿವಾರ ಸಂಘಟನೆಯ ಕಾರ್ಯಕರ್ತರು, ನಾಯಕರು, ಬಿಜೆಪಿ ಮುಖಂಡರು, ಶಾಸಕರುಗಳು ಸೇರಿದ್ದರು.
ಶನಿವಾರವೂ ಸುಹಾಸ್ ಮನೆಗೆ ಶಿವಮೊಗ್ಗ ನಗರ ಶಾಸಕ ಚೆನ್ನಬಸಪ್ಪ ಸಹಿತ ಹಲವಾರು ಮಂದಿ ಪ್ರಮುಖರು ಅಗಮಿಸಿ ಹೆತ್ತವರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದ್ದಾರೆ.
ಶಾಸಕರಾದ ಎಸ್.ಎನ್. ಚನ್ನಬಸಪ್ಪ ಅವರೊಂದಿಗೆ ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯರಾದ ಪ್ರಭಾಕರ್, ರಾಹುಲ್. ಪಿ. ಬಿದರೆ, ಶಿವಮೊಗ್ಗ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ನಗರ ಕಾರ್ಯದರ್ಶಿ ಪುರುಷೋತ್ತಮ್, ನಗರ ಉಪಾಧ್ಯಕ್ಷ ಕುಮಾರ್, ರಂಗೇಶ್, ಬಿಜೆಪಿ ಬಂಟ್ವಾಳ ಮಂಡಲದ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ , ಕಾವಳಮೂಡೂರು ಗ್ರಾಮ ಪಂಚಾಯತ್ ಅಧ್ಯಕ್ಷ ಅಜಿತ್ ಶೆಟ್ಟಿ ಮತ್ತಿತರ ಮುಖಂಡರು ಹಾಜರಿದ್ದರು.
ಶಾಸಕರ ಸಹಿತ ಪ್ರಮುಖರು ಸುಹಾಸ್ ಅಂತ್ಯಕ್ರಿಯೆ ನಡೆದ ಸ್ಥಳಕ್ಕೂ ಭೇಟಿ ನೀಡಿ ನಮನ ಸಲ್ಲಿಸಿದರು.
ಸುಹಾಸ್ ಹತ್ಯೆಗೆ ಸಂಬಂಧಿಸಿ ಮಂಗಳೂರು ಪೊಲೀಸರು 8 ಮಂದಿ ಹಂತಕರನ್ನು ಬಂಧಿಸಿದ್ದು,ಆರೋಪಿಗಳ ಬಗ್ಗೆಯೂ ಹೆತ್ತವರು ಒಂದಷ್ಟು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ.
ಸಹಜ ಸ್ಥಿತಿಗೆ:
ಶುಕ್ರವಾರ ಬಂದ್ ನ ಬಳಿಕ ಬಿ.ಸಿ. ರೋಡ್, ಬಂಟ್ವಾಳ ಶನಿವಾರ ಸಹಜ ಸ್ಥಿತಿಗೆ ಮರಳಿದೆ. ಎಂದಿನಂತೆ ಅಂಗಡಿ, ಮುಂಗಟ್ಟುಗಳು ತೆರೆದು ವ್ಯವಹಾರ ಆರಂಭಿಸಿದೆ. ಎಲ್ಲಾ ವಾಹನಗಳು ರಸ್ತೆಗಿಳಿದಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿ.ಸಿ. ರೋಡು ಸಹಿತ ಬಂಟ್ವಾಳದಾದ್ಯಂತ ಪೊಲೀಸ್ ಬಂದೋಬಸ್ತು ಏರ್ಪಡಿಸಿದ್ದಾರೆ.

