ಅಮೃತಾ ವಿದ್ಯಾಲಯಂ ನಲ್ಲಿ ಜಾಗತಿಕ ಸೀಡ್ ಬಾಲ್ ಅಭಿಯಾನ
ಮಂಗಳೂರು: ಪ್ರಸಕ್ತ ಕಾಲಘಟ್ಟದಲ್ಲಿ ಭೌಗೋಳಿಕ ಪರಿಸರವನ್ನು ನಾಶ ಮಾಡಿ ನಮ್ಮ ಮೂಲಭೂತ ಸೌಕರ್ಯಗಳನ್ನು ಪೂರೈಕೆ ಮಾಡಲಾಗುತ್ತಿದ್ದು, ಇದರಿಂದಾಗಿ ಭೂಮಿಯಲ್ಲಿ ವ್ಯತ್ಯಾಸ ವಾದಾಗ ಎಲ್ಲಾ ಜೀವರಾಶಿಗಳು ನಾಶ ಆಗುತ್ತದೆ. ಪ್ರಪಂಚದಲ್ಲಿ ಪ್ರಕೃತಿ ದೇವೋ ಭವ ಸಮಾಜ ನಿರ್ಮಾಣವಾಗಬೇಕು ಎಂದು ಮಂಗಳೂರು ಉಪ ವಿಭಾಗದ ಅರಣ್ಯಗಳ ಸಹಾಯಕ ಸಂರಕ್ಷಣಾಧಿಕಾರಿ ಪಿ.ಶ್ರೀಧರ್ ಹೇಳಿದರು.
ಮಂಗಳೂರಿನ ಅಮೃತಾ ವಿದ್ಯಾಲಯಂ ನಲ್ಲಿ ಕರ್ನಾಟಕ ಅರಣ್ಯ ಇಲಾಖೆ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ಸಿ೨೦ ಯ ಜಾಗತಿಕ ಸೀಡ್ ಬಾಲ್ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು
ಪ್ರಕೃತಿಯ ಬದಲಾವಣೆಗಳನ್ನು ಗಮನಿಸಿ, ಮಣ್ಣಿನೊಂದಿಗೆ ಸಂಬಂಧ ಬೆಳೆಸಿ, ಬೀಜ ಹಾಕಿ, ಗಿಡ ನೆಟ್ಟು ನೋಡಿ, ಅದರ ಬೆಳವಣಿಗೆಗಳನ್ನು ಗಮನಿಸಿ. ಮಣ್ಣು ಇಲ್ಲದಿದ್ದರೆ ಈ ಪ್ರಪಂಚದಲ್ಲಿ ಎಲ್ಲವೂ ಶೂನ್ಯ. ಭೌಗೋಳಿಕ ಮತ್ತು ಜೈವಿಕ ಪರಿಸರ ದೇವರು ನೀಡಿದ್ದು. ಅದರ ಪೋಷಣೆ ನಮ್ಮ ಜವಾಬ್ದಾರಿ. ನಿಮ್ಮ ಹುಟ್ಟುಹಬ್ಬಕ್ಕೆ ಗಿಡ ಸಸಿಗಳನ್ನು ಉಡುಗೊರೆಯಾಗಿ ಕೇಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸೀಡ್ ಬಾಲ್ ತರಬೇತಿ:
ಇದೇ ಸಂದರ್ಭ ವಿದ್ಯಾರ್ಥಿಗಳಿಗೆ ಮಣ್ಣು, ಗೊಬ್ಬರ ಮತ್ತು ಬೀಜಗಳನ್ನು ಮಿಶ್ರಣ ಮಾಡಿ ಸೀಡ್ ಬಾಲ್ ಮಾಡಿಕೊಳ್ಳುವ ಸರಳ ವಿಧಾನದ ಬಗ್ಗೆ ತರಬೇತಿ ನೀಡಲಾಯಿತು. ಸೀಡ್ ಬಾಲ್ ನ ಮಹತ್ವ, ಬಳಿಕ ಉಪಯೋಗಿಸುವ ವಿಧಾನ ಮತ್ತು ಪ್ರಯೋಜನಗಳ ಬಗ್ಗೆ ವಿವರಣೆ ನೀಡಲಾಯಿತು.
ಜಾಗತಿಕ ಅಭಿಯಾನ:
ಸಿವಿಲ್ 20 2023 ರ ಅಧ್ಯಕ್ಷೆ ಶ್ರೀ ಮಾತಾ ಅಮೃತಾನಂದಮಯಿ ದೇವಿ ಅವರ ಮಾರ್ಗದರ್ಶನದಲ್ಲಿ ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿ ರೀತಿಯಲ್ಲಿ ಬೀಜಗಳನ್ನು ಬಿತ್ತಲು ಉತ್ತೇಜಿಸುವ ಉದ್ದೇಶದಿಂದ ಭಾರತದಾದ್ಯಂತ ಜಾಗತಿಕ ಸೀಡ್ ಬಾಲ್ ಅಭಿಯಾನವು ನಡೆಯುತ್ತಿದೆ.
ಸೀಡ್ ಬಾಲ್ ವಿತರಣೆ:
ಅರಣ್ಯ ಇಲಾಖೆಯ ವತಿಯಿಂದ ಮತ್ತು ವಿದ್ಯಾರ್ಥಿಗಳು ತಯಾರಿಸಿದ್ದ ಸೀಡ್ ಬಾಲ್ ಗಳನ್ನು ಕಾರ್ಯಕ್ರಮದಲ್ಲಿ ವಿತರಿಸಲಾಯಿತು. ಈ ಸಂದರ್ಭ ಶಾಲೆಯ ಕ್ಯಾಂಪಸ್ ನಿರ್ದೇಶಕ ಯತೀಶ್ ಬೈಕಂಪಾಡಿ, ಪ್ರಾಂಶುಪಾಲೆ ಅಕ್ಷತಾ ಶೆಣೈ, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.









