ಬಡಾ ಎರ್ಮಾಳು : ರಸ್ತೆ ದಾಟುತ್ತಿದ್ದಾಗ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ವ್ಯಕ್ತಿ ಮೃತ್ಯು
(Padubidri) ಪಡುಬಿದ್ರಿ : ರಸ್ತೆ ದಾಟುತ್ತಿದ್ದಾಗ ದ್ವಿಚಕ್ರ ವಾಹನವೊಂದು ಡಿಕ್ಕಿಯಾದ ರಭಸಕ್ಕೆ ವ್ಯಕ್ತಿಯೋರ್ವ ಮೃತಪಟ್ಟು, ದ್ವಿಚಕ್ರ ವಾಹನದ ಸವಾರ ಮತ್ತು ಸಹ ಸವಾರ ಗಾಯಗೊಂಡ ಘಟನೆ ಪಡುಬಿದ್ರಿ ಠಾಣಾ ವ್ಯಾಪ್ತಿಯ ಬಡಾ ಎರ್ಮಾಳು ರಾಹೆ ೬೬ರ ಅಪೂರ್ವ ಬಾರ್ ಎದುರು ಘಟಿಸಿದೆ.
ಮೃತ ವ್ಯಕ್ತಿಯನ್ನು ನಾಗೇಂದ್ರ ಸಿಂಗ್ (25) ಎಂದು ಗುರುತಿಸಲಾಗಿದೆ.
ನಾಗೇಂದ್ರ ಸಿಂಗ್ರವರ ತಲೆಗೆ ಹಾಗೂ ಮೈ, ಕೈಗೆ ತೀವ್ರ ಗಾಯಗೊಂಡಿದ್ದು, ಘಟನಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಡಿಕ್ಕಿ ಹೊಡೆದ ದ್ವಿಚಕ್ರ ವಾಹನದ ಸವಾರ ಹಾಗೂ ಸಹಸವಾರರು ರಸ್ತೆಗೆ ಬಿದ್ದು ಗಾಯಗೊಂಡು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೈ ಕೊಟ್ಟ ಹೆದ್ದಾರಿ ದಾರಿ ದೀಪ ಉಚ್ಚಿಲ ಪರಿಸರದಲ್ಲಿ ಮತ್ತೆ ಘಟಿಸಿದ ಅಪಘಾತ
ಉಚ್ಚಿಲ ರಾಹೆ ೬೬ರ ಪರಿಸರದಲ್ಲಿ ಕಳೆದ ತಿಂಗಳು ನಿರಂತರ ಅಪಘಾತ ಸಂಭವಿಸಿದ್ದು, ತದ ನಂತರ ಹೆದ್ದಾರಿ ಇಲಾಖೆಯ ವಿರುದ್ಧ ನಾಗರೀಕ ಹೋರಾಟ ಸಮಿತಿಯಿಂದ ರಸ್ತೆ ತಡೆ ಸಹಿತ ಪ್ರತಿಭಟನೆ ನಡೆದಿತ್ತು. ಹೆದ್ದಾರಿಯಲ್ಲಿ ಅಲ್ಪ ಸ್ವಲ್ಪ ಕಾಮಗಾರಿ ನಡೆದಿದ್ದು, ಈಗ ಸ್ಥಬ್ದವಾಗಿದೆ. ಅಪೂರ್ವ ಬಾರ್ ಎದುರು ಹೆದ್ದಾರಿಯ ದಾರಿ ದೀಪ ಉರಿಯುತ್ತಿಲ್ಲ. ಹಾಗಾಗಿ ನಿನ್ನೆ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಎರಡು ದಿನಗಳ ಹಿಂದೆ ಮೂಳೂರಿನಲ್ಲಿ ಅಪಘಾತ ಸಂಭವಿಸಿ ಓರ್ವ ಯುವಕ ಮೃತಪಟ್ಟು ಮತ್ತೋರ್ವ ಯುವಕ ಗಂಭೀರ ಗಾಯಗೊಂಡಿದ್ದಾನೆ. ಆ ಪ್ರಕರಣ ಮಾಸುವ ಮುನ್ನವೇ ಎರ್ಮಾಳಿನಲ್ಲಿ ಅಪಘಾತ ಸಂಭವಿಸಿ ಹೊರ ರಾಜ್ಯದ ನಾಗೇಂದ್ರ ಸಿಂಗ್ ಮೃತಪಟ್ಟಿದ್ದಾನೆ. ಹೆದ್ದಾರಿಯಲ್ಲಿ ಕೆಲ ಸಮಯ ಅಪಘಾತ ನಿಲುಗಡೆ ಆಗಿತ್ತಾದರೂ, ಈಗ ಮತ್ತೆ ಅಪಘಾತ ಸಂಭವಿಸಿದೆ.

