ಬಡ ಕಾರ್ಮಿಕರ ಜೀವನೋಪಾಯದ ಆದಾಯಕ್ಕೆ ಕತ್ತರಿ ಹಾಕಿದ ಕೇಂದ್ರ ಸರ್ಕಾರ – ಸೊರಕೆ
ಗ್ರಾಮೀಣ ಕಾಂಗ್ರೆಸ್ ಸಮಿತಿಗಳ ಪದಾಧಿಕಾರಿಗಳ, ಕಾರ್ಯಕರ್ತರ ಸಭೆಯಲ್ಲಿ ಸೊರಕೆ ಮಾತು
(Kaup) ಕಾಪು: ಸಮಾಜದ ಕೆಳಸ್ತರದ ಕೂಲಿ ಕಾರ್ಮಿಕರು ವರ್ಷವಿಡೀ ನಿರಂತರ ಉದ್ಯೋಗವಿಲ್ಲದೆ ಒಪ್ಪೊತ್ತಿನ ಊಟಕ್ಕಾಗಿ ಶ್ರಮಪಡುವುದನ್ನು ಮನಗಂಡು, ಕೇಂದ್ರದಲ್ಲಿ ಮಾಜಿ ಪ್ರಧಾನಿ ಡಾ. ಮನ್ಮೋಹನ್ ಸಿಂಗ್ ರವರು ಪ್ರಧಾನಿಯಾಗಿದ್ದಾಗ ಜಾರಿಗೆ ತಂದಿದ್ದ, ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯು (ಮನರೇಗಾ) ಬಡವರ ಪಾಲಿಗೆ ವರದಾನವಾಗಿ ಪರಿಣಮಿಸಿಸಿದೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದ್ದಾರೆ.
ಅವರು, ಕಾಪು – ಪಡು ಮತ್ತು ಉಳಿಯಾರಗೋಳಿ ಗ್ರಾಮೀಣ ಕಾಂಗ್ರೆಸ್ ಸಮಿತಿಗಳ ಪದಾಧಿಕಾರಿಗಳ ಮತ್ತು ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಇದೀಗ ಅಧಿಕಾರದಲ್ಲಿರುವ ಬಡವರ ವಿರೋಧಿ ಕೇಂದ್ರ ಸರ್ಕಾರವು, ಯೋಜನೆಯ ಮೂಲ ಸ್ವರೂಪವನ್ನೇ ಬದಲಾಯಿಸಿ, ಇಡೀ ವಿಶ್ವಕ್ಕೇ ಆದರ್ಶಪ್ರಾಯವಾದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಹೆಸರನ್ನು ಅಳಿಸಿ, ಆ ಯೋಜನೆಗೆ ಗಾಂಧೀಜಿಯ ಹಂತಕ, ನಾಥೂ’ರಾಮ್’ ಗೋಡ್ಸೆಯ ಹೆಸರಿನಲ್ಲಿರುವ “ರಾಮ್ ” ಹೆಸರನ್ನು ದುರುದ್ದೇಶ ಪೂರಕವಾಗಿ ಜೋಡಿಸುವ ಮೂಲಕ ದ್ವೇಷ ರಾಜಕಾರಣದ ಪರಮಾವಧಿಗೆ ತಲುಪಿದ್ದಾರೆ. ಇದು ರಾಷ್ಟ್ರಪಿತನಿಗೆ ಮಾಡಿದ ಘನಘೋರ ಅವಮಾನ ಮತ್ತು ಅಕ್ಷಮ್ಯ ಅಪರಾಧ ಎಂದು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆಯವರು ಹೇಳಿದರು.
ಇಂದು ಗಾಂಧೀಜಿ ಜೀವಂತ ವಿಲ್ಲದಿದ್ದರೂ ಗಾಂಧೀಜಿ ಯವರ ಗ್ರಾಮ ಸ್ವರಾಜ್ಯದ ಕನಸು ಜೀವಂತವಿದೆ. ಇದೀಗ ಬಿಜೆಪಿಯ ಮಹಾತ್ಮಾ ಗಾಂಧಿ ವಿರೋಧಿ ಸಿದ್ಧಾಂತದಿಂದಾಗಿ ನಾಥೂ ‘ರಾಮ್ ‘ ಗೋಡ್ಸೆ ಹೆಸರನ್ನು ಮುನ್ನೆಲೆಗೆ ತಂದು ಗಾಂಧೀಜಿಯವರನ್ನು ಮತ್ತು ಅವರ “ಗ್ರಾಮ ಸ್ವರಾಜ್ಯ” ದ ಕನಸನ್ನು ಮತ್ತೊಮ್ಮೆ ಕೊಲ್ಲುವಂತಹ ಪ್ರಯತ್ನಕ್ಕೆ ಕೈ ಹಾಕಿರುವುದನ್ನು ಕಾಂಗ್ರೆಸ್ ಪಕ್ಷವು ತೀವ್ರವಾಗಿ ವಿರೋಧಿಸುತ್ತದೆ ಮತ್ತು ಇದರ ವಿರುದ್ಧ ರಾಜ್ಯಾದ್ಯಂತ ಆಂದೋಲನ ನಡೆಸುವ ಮೂಲಕ “ಮನರೇಗಾ” ಮರು ಜಾರಿಗೆ ತರಲು ಪ್ರಬಲ ಹೋರಾಟ ನಡೆಸಲಿದೆ ಎಂದರು.
ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ. ಸುಕುಮಾರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕಾಪು ದಿವಾಕರ್ ಶೆಟ್ಟಿ, ಕಾಪು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಕ್ರಂ ಕಾಪು, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶರ್ಫುದ್ದೀನ್ ಶೇಖ್, ಬ್ಲಾಕ್ ಇಂಟಕ್ ಘಟಕದ ಅಧ್ಯಕ್ಷ ಸುಮನ್ ಬೋಳಾರ್, ಬ್ಲಾಕ್ ಅಲ್ಪ ಸಂಖ್ಯಾತರ ಘಟಕದ ಕಾರ್ಯಾಧ್ಯಕ್ಷ ರಿಯಾಜ್ ಮುದರಂಗಡಿ, ಕಾಪು ಪುರಸಭಾ ವಿಪಕ್ಷ ನಾಯಕಿ ಫರ್ಜಾನ ಸಂಜಯ್, ಯೋಜನಾ ಪ್ರಾಧಿಕಾರ ಸದಸ್ಯ ಲಕ್ಷ್ಮೀಶ ತಂತ್ರಿ, ಕಾಪು ಪಡು ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ದೇವರಾಜ್ ಎ. ಕೋಟ್ಯಾನ್, ಉಳಿಯಾರಗೋಳಿ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಪಕ್ಷದ ಪ್ರಮುಖರು, ಪದಾಧಿಕಾರಿಗಳು, ಪುರಸಭೆಯ ಸದಸ್ಯರು, ಬೂತ್ ಅಧ್ಯಕ್ಷರು, ಬಿ. ಎಲ್. ಎ-2 ಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮೀರ್ ಮೊಹಮ್ಮದ್ ಸ್ವಾಗತಿಸಿದರು. ಪ್ರಭಾಕರ್ ಪೂಜಾರಿ ವಂದಿಸಿದರು.

