ಬಿ.ಸಿ.ರೋಡು: ಟೆಂಪೋ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ದಾರುಣ ಸಾವು
ಬಂಟ್ವಾಳ : ತರಕಾರಿ ಸಾಗಾಟದ ಟೆಂಪೋ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ದಾರುಣವಾಗಿ ಮೃತಪಟ್ಟು ಸಹ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬಿ ಸಿ ರೋಡಿನಲ್ಲಿ ಭಾನುವಾರ ಮುಂಜಾನೆ ಸಂಭವಿಸಿದೆ.
ಮೃತ ಸ್ಕೂಟರ್ ಸವಾರನನ್ನು ಮೂಲತಃ ಫರಂಗಿಪೇಟೆ ಸಮೀಪದ ಅಮ್ಮೆಮಾರು ನಿವಾಸಿ, ಪ್ರಸ್ತುತ ಪಾಣೆಮಂಗಳೂರು ಸಮೀಪದ ಆಲಡ್ಕ ನಿವಾಸಿ ಅಶ್ರಫ್ (36) ಎಂದು ಗುರುತಿಸಲಾಗಿದೆ.
ಗಾಯಾಳು ಸಹ ಸವಾರನನ್ನು ಆತನ ಸ್ನೇಹಿತ ಆಲಡ್ಕ ನಿವಾಸಿ ತನ್ನೀರ್ ಎಂದು ಹೆಸರಿಸಲಾಗಿದೆ.
ಮೆಲ್ಕಾರಿನ ಹೋಟೆಲೊದರಲ್ಲಿ ಕೆಲಸ ಮಾಡುತ್ತಿರುವ ಅಶ್ರಫ್ ಶನಿವಾರ ರಾತ್ರಿ ಬ್ರಹ್ಮರಕೂಟ್ಲವಿನಲ್ಲಿ ನಡೆದ ಕ್ರೀಡಾಕೂಟವನ್ನು ವೀಕ್ಷಿಸಿ ತನ್ನ ಸ್ನೇಹಿತ ತನ್ನೀರ್ ನನ್ನು ಆಲಡ್ಕದಲ್ಲಿರುವ ಮನೆಗೆ ಕರೆದುಕೊಂಡು ಬರುತ್ತಿದ್ದ ವೇಳೆ ಕೈಕಂಬ- ಬಿ ಸಿ ರೋಡು ಮಧ್ಯೆ ಹೆದ್ದಾರಿ ಬದಿಯಲ್ಲಿರುವ ರಖಂ ತರಕಾರಿ ಹಾಗೂ ಹಣ್ಣು ಹಂಪಲು ವ್ಯಾಪಾರದ ಅಂಗಡಿಯ ಮುಂಭಾಗದಲ್ಲಿ ಅನ್ ಲೋಡ್ ಮಾಡಿದ ಟೆಂಪೋ ಚಾಲಕ ಹಠಾತ್ ಆಗಿ ಹೆದ್ದಾರಿಗೆ ರಿವರ್ಸ್ ಬಂದ ಪರಿಣಾಮ ಸ್ಕೂಟರಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಅಪಘಾತದಿಂದ ಗಂಭೀರ ಗಾಯಗೊಂಡ ಅಶ್ರಫ್ ಅವರನ್ನು ತಕ್ಷಣ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಸ್ನೇಹಿತ ತನ್ನೀರ್ ಅವರಿಗೂ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರು, ಪತ್ನಿ ಹಾಗೂ ಅಪ್ರಾಪ್ತ ಹೆಣ್ಣು ಮಗುವನ್ನು ಹೊಂದಿದ್ದು, ಪತ್ನಿ ಎರಡನೇ ಮಗುವಿನ ಗರ್ಭಿಣಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಕ್ರಮಕೈಗೊಳ್ಳದ ಟ್ರಾಫಿಕ್ ಪೊಲೀಸರು:
ಬಿ ಸಿ ರೋಡಿನ ಕೈಕಂಬ ಬಳಿ ಪ್ರತಿದಿನ ಕೂಡಾ ತರಕಾರಿ ಹಾಗೂ ಹಣ್ಣು-ಹಂಪಲು ಅಂಗಡಿಗೆ ಬರುವ ಘನ ವಾಹನಗಳು ನಡು ರಸ್ತೆಯಲ್ಲೇ ನಿಂತು ಲೋಡ್ – ಅನ್ ಲೋಡ್ ನಡೆಸುತ್ತಿದ್ದು, ಇತರ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.
ಈ ಬಗ್ಗೆ ಟ್ರಾಫಿಕ್ ಠಾಣೆಗೆ ಹಲವು ಬಾರಿ ಸ್ಥಳೀಯರು ದೂರಿತ್ತರೂ, ಪೊಲೀಸರು ಈ ವರೆಗೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಹಾಗೂ ಚಾಲಕ ಸಮುದಾಯ ಆರೋಪಿಸಿದೆ.
ಗೂಡ್ಸ್ ವಾಹನಗಳು ಆಗಾಗ ಹಿಂದೆ-ಮುಂದಕ್ಕೆ ಚಲಾಯಿಸುತ್ತಿರುವ ಪರಿಣಾಮ ನಿತ್ಯವೂ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಲೇ ಇರುತ್ತದೆ. ಸಂಬಂಧಪಟ್ಟವರು ಸೂಕ್ತ ಕೈಗೊಳ್ಳದೆ ಇರುವ ಪರಿಣಾಮ ಇದೀಗ ಯುವಕ ಪ್ರಾಣ ಕಳೆದುಕೊಳ್ಳುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

