ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಪಾಂಡೆಗಾಂವ-ಕಂಗೋಳಿ ರಸ್ತೆ ಅವ್ಯವಸ್ಥೆ
ರಸ್ತೆಯಲ್ಲಿ ಕಬ್ಬಿನ ಸಸಿ ನೆಟ್ಟು ಪ್ರತಿಭಟನೆ. (ಕೃಪೆ : ಮಹೇಶ್ ಶರ್ಮಾ)
(Kagavada) ಕಾಗವಾಡ: ಚುನಾವಣೆ ಸಮಯದಲ್ಲಿ ನೀಡಿದ ಭರವಸೆಗಳು ಕೇವಲ ಮತಬ್ಯಾಂಕ್ಗೆ ಸೀಮಿತವಾಗಿದ್ದು, ಗೆದ್ದ ಮೇಲೆ ಜನಪ್ರತಿನಿಧಿಗಳು ಈ ಕಡೆ ತಿರುಗಿಯೂ ನೋಡುತ್ತಿಲ್ಲ. ಇತ್ತ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕುರುಡರಂತೆ ವರ್ತಿಸುತ್ತಿದ್ದಾರೆ. ಗ್ಯಾರಂಟಿ ಹೆಸರಿನಲ್ಲಿ ರಸ್ತೆ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಮೂಲೆಗುಂಪು ಮಾಡಲಾಗಿದೆ” ಎಂದು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಪಾಂಡೆಗಾಂವ ಮತ್ತು ಕಂಗೋಳಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಂಡೆಗಾಂವದಿಂದ ಕಂಗೋಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ನಿರಂತರ ಭಾರೀ ವಾಹನಗಳ ಸಂಚಾರದಿಂದಾಗಿ ಸಂಪೂರ್ಣವಾಗಿ ಹದಗೆಟ್ಟಿದ್ದು, ಇಡೀ ರಸ್ತೆ ಕೆಸರಿನ ಹೊಂಡವಾಗಿ ಮಾರ್ಪಟ್ಟಿದೆ.
ಅಪಘಾತಗಳ ಸರಣಿ: ಸಣ್ಣ ಮಳೆಯಾದರೂ ಇಡೀ ರಸ್ತೆ ಕೆಸರುಮಯವಾಗುತ್ತಿದ್ದು, ನಿತ್ಯ ಹಲವಾರು ದ್ವಿಚಕ್ರ ವಾಹನ ಸವಾರರು ಜಾರಿ ಬಿದ್ದು ಗಾಯಗೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳಿಗೆ ತೆರಳಲು, ವಯೋವೃದ್ಧರು ಕುಡಿಯುವ ಫಿಲ್ಟರ್ ನೀರು ತರಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಮತ್ತು ಗರ್ಭಿಣಿಯರನ್ನು ಆಸ್ಪತ್ರೆಗೆ ಕರೆದೊಯ್ಯುವುದು ಅಗ್ನಿಪರೀಕ್ಷೆಯಾಗಿದ್ದು, ಪ್ರಾಣಾಪಾಯದ ಭೀತಿ ಎದುರಾಗಿದೆ.
ಮನವಿ ಸಲ್ಲಿಸಿದರೂ ನಿರ್ಲಕ್ಷ್ಯ:
ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ತಹಶೀಲ್ದಾರ್, ಶಾಸಕರು, ಚಿಕ್ಕೋಡಿ ಲೋಕಸಭಾ ಸಂಸದರು, ಜಿಲ್ಲಾಧಿಕಾರಿ (DC) ಕಚೇರಿ ಹಾಗೂ ಲೋಕೋಪಯೋಗಿ (PWD) ಸಚಿವರಾದ ಸತೀಶ್ ಜಾರಕಿಹೊಳಿ ಅವರಿಗೂ ಪೋಸ್ಟ್ ಮೂಲಕ ಮನವಿ ಸಲ್ಲಿಸಲಾಗಿದೆ. ಆದರೂ ಇದುವರೆಗೂ ಯಾವೊಬ್ಬ ಅಧಿಕಾರಿಯಾಗಲಿ ಅಥವಾ ಜನಪ್ರತಿನಿಧಿಯಾಗಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸದಿರುವುದು ಗ್ರಾಮಸ್ಥರ ಸಹನೆಯ ಗಡಿ ದಾಟಿಸಿದೆ ಎಂದು ರೈತ ಮುಖಂಡ ಸುರೇಶ್ ಮತ್ತು ಗ್ರಾಮಸ್ಥರು ಮಾಧ್ಯಮಗಳ ಮುಂದೆ ಆರೋಪಿಸಿದ್ದಾರೆ.
ಉಗ್ರ ಹೋರಾಟದ ಎಚ್ಚರಿಕೆ:
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣ ಎಚ್ಚೆತ್ತುಕೊಂಡು ಕೂಡಲೇ ರಸ್ತೆಗೆ ಜಲ್ಲಿ ಹಾಕಿ, ತಾತ್ಕಾಲಿಕ ರಿಪೇರಿ ಕೆಲಸವನ್ನು ತಕ್ಷಣವೇ ಪ್ರಾರಂಭಿಸಬೇಕು ಹಾಗೂ ಶೀಘ್ರದಲ್ಲಿ ಶಾಶ್ವತ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಬೇಕು. ಇಲ್ಲವಾದಲ್ಲಿ ಯಾವುದೇ ಮುನ್ಸೂಚನೆ ನೀಡದೆ ಪಾಂಡೆಗಾಂವ-ಕಂಗೋಳಿ ರಸ್ತೆ ತಡೆದು, ತಹಶೀಲ್ದಾರ್ ಹಾಗೂ PWD ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಸ್ವರೂಪದ ಹೋರಾಟ ರೂಪಿಸಲಾಗುವುದು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಸೈನಿಕ, ರೈತ ಸಚಿನ್ ಪಾಟೀಲ, ರಾಜಾರಾಮ ಆಠವಳೆ, ಧನಾಜಿ ಜಾಧವ್ ಹಾಗೂ ರೈತರಾದ ಸುಭಾಷ್, ಸುರೇಶ್ ಪಾಟೀಲ, ಸಂದೀಪ್ ಪಾಟೀಲ, ಅಜಿತ್ ಪಾಟೀಲ, ರಾಜು, ಬಾಳು, ಸದಾ, ತಾನಾಜಿ, ಸಾಗರ್, ಶ್ರೀಮಂತ, ವಿಶ್ವನಾಥ್, ಸುಶೀಲ, ಸಂಗೀತಾ, ರೂಪಾಲಿ, ಕಮಲ, ಶೋಭಾ ಕಾಗಳೆ ಸೇರಿದಂತೆ ಪಾಟೀಲ್ ಬಂಧುಗಳು ಹಾಗೂ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.

