ಮಂಗಳೂರಿನ ಎಜೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಕಟ್ಟಡದಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ̈
(Mangaluru) ಮಂಗಳೂರು, ನ.13: ಎಂಬಿಬಿಎಸ್ ಕಲಿಯುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್ ಕಟ್ಟಡದ 6ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಎಜೆ ಮೆಡಿಕಲ್ ಕಾಲೇಜು ಆವರಣದಲ್ಲಿ ನಡೆದಿದೆ.
ನಸುಕಿನ ಮೂರು ಗಂಟೆ ವೇಳೆಗೆ ಮಂಗಳೂರಿನ ಎಜೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಕಟ್ಟಡದ ಆರನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೊದಲ ವರ್ಷದ ಎಂಬಿಬಿಎಸ್ ಕಲಿಯುತ್ತಿದ್ದ ಪ್ರಕೃತಿ ಶೆಟ್ಟಿ(20) ಮೃತ ವಿದ್ಯಾರ್ಥಿನಿ.
ಪ್ರಾಥಮಿಕ ಮಾಹಿತಿ ಪ್ರಕಾರ, ದಪ್ಪಗಿದ್ದೇನೆ ಎಂದು ವಿದ್ಯಾರ್ಥಿನಿ ಮಾನಸಿಕ ಖಿನ್ನತೆಯಲ್ಲಿದ್ದಳು. ಇದೇ ಚಿಂತೆಯಲ್ಲಿ ಸಾವಿಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.
ಇವರ ಕುಟುಂಬ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ನೆಲೆಸಿದ್ದು ಪ್ರಕೃತಿ ಶೆಟ್ಟಿ ಹಾಸ್ಟೆಲ್ ನಲ್ಲಿ ಉಳಿದುಕೊಂಡು ಓದುತ್ತಿದ್ದರು. ತಂದೆ ಪ್ರಶಾಂತ ಶೆಟ್ಟಿ ಮತ್ತು ತಾಯಿ ಅಥಣಿಯಲ್ಲಿ ನೆಲೆಸಿದ್ದಾರೆ. ತಾಯಿ ಕಾರ್ಕಳ ಮೂಲದವರಾಗಿದ್ದು ಮಗಳು ಡಾಕ್ಟರ್ ಕಲಿಯಬೇಕೆಂದು ಪ್ರತಿಷ್ಠಿತ ಎಜೆ ಮೆಡಿಕಲ್ ಕಾಲೇಜಿಗೆ ಸೇರಿಸಿದ್ದರು.
ಮಂಗಳೂರು ಪೊಲೀಸರು (Mangaluru Police) ಪ್ರಕರಣ ದಾಖಲಿಸಿದ್ದಾರೆ.

