ಮಂಗಳೂರು : ಮೂವರು ಡ್ರಗ್ ಪೆಡ್ಲರ್ಗಳ ಬಂಧನ, 27 ಲಕ್ಷ ರೂ.ಮೌಲ್ಯದ ವಸ್ತು ವಶ
ಮಂಗಳೂರು: ಮಂಗಳೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಡ್ರಗ್ಗಳು ಹಾಗೂ ಮಾರಕಾಸ್ತ್ರಗಳ ಸಮೇತ ಮೂವರು ನಟೋರಿಯಸ್ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ಎಂಡಿಎಂಎ ಡ್ರಗ್, ವೆಪನ್, ಕಂಟ್ರಿಮೇಡ್ ಪಿಸ್ತೂಲ್, ಡ್ಯಾಗರ್ ಹಾಗೂ ಒಂದು ಸಜೀವ ಗುಂಡನ್ನು ಪತ್ತೆ ಮಾಡಲಾಗಿದೆ. ಬಂಧಿತರನ್ನು ಕೃಷ್ಣಪುರ ನಿವಾಸಿ ಮೊಹಮ್ಮದ್ ನಿಯಾಸ್(28), ತಲಪಾಡಿ ನಿವಾಸಿ ನಿಶಾದ್(31), ಪಡೀಲ್ ಕಣ್ಣೂರು ನಿವಾಸಿ ಮಹಮ್ಮದ್ ರಝೀನ್ (24) ಎಂದು ಗುರುತಿಸಲಾಗಿದೆ .
ಈ ಮೂವರು ಡ್ರಗ್ ಪೆಡ್ಲರ್ಗಳನ್ನು ಮಂಗಳೂರಿನ ಉಳ್ಳಾಲ ತಾಲೂಕು ವ್ಯಾಪ್ತಿಯ ಪಿಲಿಕೂರು ಎಂಬಲ್ಲಿ ಬಂಧಿಸಲಾಗಿದೆ. ಸ್ವಿಫ್ಟ್ ಕಾರಿನಲ್ಲಿ ಈ ಮೂವರು ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದರು ಎನ್ನಲಾಗಿದೆ.
ಸಿಸಿಬಿ ಪೊಲೀಸರು ಬಂಧಿತರಿಂದ 180 ಗ್ರಾಂ ತೂಕದ ಸುಮಾರು 9 ಲಕ್ಷ ರೂಪಾಯಿ ಮೌಲ್ಯದ ಎಂಡಿಎಂಎ ಮಾದಕ ವಸ್ತುವನ್ನು ವಶಕ್ಕೆ ಪಡೆದಿದ್ದಾರೆ.
ಈ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಜೈನ್, ಬಂಧಿತರಿಂದ ಮಾರುತಿ ಸ್ವಿಫ್ಟ್ ಕಾರು, ನಾಲ್ಕು ಮೊಬೈಲ್ ಫೋನ್, ಹಣ, ಪಿಸ್ತೂಲ್ ಹಾಗೂ ಸಜೀವ ಗುಂಡುಗಳನ್ನು ವಶಕ್ಕೆ ಪಡೆದಿದ್ದೇವೆ. ವಶಕ್ಕೆ ಪಡೆದ ವಸ್ತುಗಳ ಒಟ್ಟು ಮೌಲ್ಯ 27 ಲಕ್ಷ ರೂಪಾಯಿ ಆಗಬಹುದು.
ಬಂಧಿತ ಆರೋಪಿಗಳ ಮೇಲೆ ಉರ್ವಾ, ಕೊಣಾಜೆ ಪೊಲೀಸ್ ಠಾಣೆಗಳಲ್ಲಿ ಕೊಲೆ ಯತ್ನ, ದರೋಡೆಯಂತಹ ಕೇಸ್ಗಳು ದಾಖಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.

