ಮಜೂರು ಗ್ರಾಮ ಪಂಚಾಯಿತಿಯ ಪಂಪ್ ಚಾಲಕ ಜಯ ಪೂಜಾರಿ ರವರಿಗೆ ಬೀಳ್ಕೊಡುಗೆ
ಸುಮಾರು 36 ವರ್ಷಗಳ ಕಾಲ ಪ್ರಾಮಾಣಿಕತೆ, ಕರ್ತವ್ಯಪರತೆಯಿಂದ ಸೇವೆ ಸಲ್ಲಿಸಿದ ಜಯ ಪೂಜಾರಿ
(Majuru) ಮಜೂರು: ಮಜೂರು ಗ್ರಾಮ ಪಂಚಾಯಿತಿಯಲ್ಲಿ ಪಂಪ್ ಚಾಲಕರಾಗಿ ಸುಮಾರು 36 ವರ್ಷಗಳ ಕಾಲ ನಿಷ್ಠೆ, ಪ್ರಾಮಾಣಿಕತೆ ಹಾಗೂ ಕರ್ತವ್ಯಪರತೆಯಿಂದ ಸೇವೆ ಸಲ್ಲಿಸಿ 31.05.2026 ರಂದು ವಯೋನಿವೃತ್ತಿಗೊಂಡ ಜಯ ಪೂಜಾರಿ ಅವರಿಗೆ ಗ್ರಾಮ ಪಂಚಾಯಿತಿ ವತಿಯಿಂದ ಆತ್ಮೀಯ ಹೃದಯಸ್ಪರ್ಶಿ ಬೀಳ್ಕೊಡುಗೆ ಕಾರ್ಯಕ್ರಮ ನೆರವೇರಿತು.
01.04.1990 ರಂದು ಹಿಂದಿನ ಮಜೂರು ಮಂಡಲ ಪಂಚಾಯಿತಿಯಲ್ಲಿ ಪಂಪ್ ಚಾಲಕರಾಗಿ ಸೇವೆಗೆ ಸೇರ್ಪಡೆಗೊಂಡ ಜಯ ಪೂಜಾರಿಯವರು, 36 ವರ್ಷಗಳ ಕಾಲ ಜನಸೇವೆಯಲ್ಲಿ ತೊಡಗಿ ಮಾದರಿ ಸಿಬ್ಬಂದಿಯಾಗಿ ಗುರುತಿಸಿಕೊಂಡಿದ್ದಾರೆ.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಕಾರ್ಯಕ್ರಮದಲ್ಲಿ ಮಾತನಾಡಿ, ಜಯ ಪೂಜಾರಿ ಅವರ ನಿಸ್ವಾರ್ಥ ಸೇವೆ, ಕರ್ತವ್ಯನಿಷ್ಠೆ ಹಾಗೂ ಸಾರ್ವಜನಿಕರೊಂದಿಗೆ ಹೊಂದಿದ್ದ ಉತ್ತಮ ಬಾಂಧವ್ಯವನ್ನು ಶ್ಲಾಘಿಸಿದರು. ಜಯ ಪೂಜಾರಿಯವರು ಪಂಚಾಯಿತಿ ವ್ಯಾಪ್ತಿಯಲ್ಲಿ ಅವರು ಸಲ್ಲಿಸಿದ ಸೇವೆ ಶ್ಲಾಘನೀಯವಾಗಿದ್ದು, ಯುವ ಪೀಳಿಗೆಗೆ ಆದರ್ಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪಂಚಾಯಿತಿ ಮಾಜಿ ಅಧ್ಯಕ್ಷರು ಪ್ರಸಾದ್ ಶೆಟ್ಟಿ ವಳದೂರು, ಮಾಜಿ ಉಪಾಧ್ಯಕ್ಷೆ ಶ್ರೀಮತಿ ಮಂಜುಳಾ ಆಚಾರ್ಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ವಿಲಾಸಿನಿ, ಗ್ರಾಮ ಆಡಳಿತಾಧಿಕಾರಿ ಶ್ರೀಕಾಂತ್, ಮಾಜಿ ಸದಸ್ಯರು, ಆರೋಗ್ಯಾಧಿಕಾರಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದು, ಜಯ ಪೂಜಾರಿ ಅವರ ಸೇವೆಯನ್ನು ಸ್ಮರಿಸಿ ಗೌರವ ಸಮರ್ಪಿಸಿದರು.
ಜಯ ಪೂಜಾರಿಯವರ ನಿವೃತ್ತ ಜೀವನವು ಆರೋಗ್ಯ, ನೆಮ್ಮದಿ ಮತ್ತು ಸಂತೋಷದಿಂದ ಕೂಡಿರಲಿ ಎಂದು ಎಲ್ಲರೂ ಶುಭ ಹಾರೈಸಿದರು.

