ಮೊಹರಂ ನಾಲ್ಕು ಪವಿತ್ರ ತಿಂಗಳುಗಳಲ್ಲಿ ಒಂದು
ಪವಿತ್ರ ಮೊಹರಂ ಬಗ್ಗೆ ಅನ್ವರ್ ಅಲಿ ಕಾಪುರವರಿಂದ ವಿಶೇಷ ಲೇಖನ
(Kaup) ಕಾಪು: ಇಸ್ಲಾಮಿನ ಪಂಚಾಂಗದ ಮೊದಲ ತಿಂಗಳು ಮೊಹರಂ. ಇದು ಅಲ್ಲಾಹನ ಬಳಿಯಲ್ಲಿ ಅತ್ಯಂತ ಗೌರವಯುತವಾದ ನಾಲ್ಕು ಪವಿತ್ರ ತಿಂಗಳುಗಳಲ್ಲಿ ಒಂದಾಗಿದೆ. ಹೊಸ ಹಿಜ್ರಿ ವರ್ಷವು ಮೊಹರಂ ತಿಂಗಳ ಆಗಮನದೊಂದಿಗೆ ಪ್ರಾರಂಭವಾಗುತ್ತದೆ. ಆದ್ದರಿಂದ ಮುಸ್ಲಿಮರು ಈ ಸಂದರ್ಭವನ್ನು ಆತ್ಮಾವಲೋಕನ, ತೌಬಾ, ಇಬಾದತ್ ಮತ್ತು ಸತ್ಕಾರ್ಯಗಳ ಮೂಲಕ ಸ್ವಾಗತಿಸಬೇಕು.
ಹಿಜ್ರಿ ವರ್ಷವು ಪ್ರವಾದಿ ಮುಹಮ್ಮದ್ (ಸ) ರವರ ಮಕ್ಕಾದಿಂದ ಮದೀನಾಗೆ ನಡೆದ ಐತಿಹಾಸಿಕ ಹಿಜ್ರತ್ ಘಟನೆಯನ್ನು ಆಧರಿಸಿದೆ. ಈ ಹಿಜ್ರತ್ ಕೇವಲ ಸ್ಥಳಾಂತರವಾಗಿರದೆ, ಇಮಾನಿನ ರಕ್ಷಣೆ, ಸತ್ಯದ ಸ್ಥಾಪನೆ ಮತ್ತು ಅಲ್ಲಾಹನ ಆದೇಶಕ್ಕೆ ಸಂಪೂರ್ಣ ಶರಣಾಗತಿಯ ಸಂಕೇತವಾಗಿದೆ. ಆದ್ದರಿಂದ ಹೊಸ ಹಿಜ್ರಿ ವರ್ಷವು ನಮಗೆ ತ್ಯಾಗ, ಸಹನೆ, ಸಂದೇಶ ಪ್ರಚಾರ ಮತ್ತು ಅಲ್ಲಾಹನ ಮೇಲಿನ ಭರವಸೆಯ ಪಾಠವನ್ನು ಕಲಿಸುತ್ತದೆ.
ಇಂದು ಹೊಸ ವರ್ಷಾಚರಣೆಯ ಹೆಸರಿನಲ್ಲಿ ಹಲವರು ಪಟಾಕಿ ಸಿಡಿಸುವುದು, ಅನಗತ್ಯ ಖರ್ಚು ಮಾಡುವುದು, ರಾತ್ರಿ ಪೂರ್ತಿ ಮನರಂಜನೆಯಲ್ಲಿ ತೊಡಗುವುದು ಮುಂತಾದ ಕಾರ್ಯಗಳನ್ನು ನಡೆಸುತ್ತಾರೆ. ಆದರೆ ಇಸ್ಲಾಮಿನಲ್ಲಿ ಹೊಸ ವರ್ಷದ ಆರಂಭವನ್ನು ವಿಶೇಷ ಹಬ್ಬವಾಗಿ ಆಚರಿಸುವ ಬಗ್ಗೆ ಯಾವುದೇ ಸ್ಪಷ್ಟ ಮಾರ್ಗದರ್ಶನ ಇಲ್ಲ. ಪ್ರವಾದಿ (ಸ) ಮತ್ತು ಸಹಾಬಿಗಳು ಹಿಜ್ರಿ ಹೊಸ ವರ್ಷವನ್ನು ವಿಶೇಷ ಉತ್ಸವವಾಗಿ ಆಚರಿಸಿದ ದಾಖಲೆಗಳು ಕಂಡುಬರುವುದಿಲ್ಲ.
ಬದಲಾಗಿ ಈ ಸಂದರ್ಭವನ್ನು ಕಳೆದ ವರ್ಷದ ಆತ್ಮಪರಿಶೀಲನೆ ಹಾಗೂ ಮುಂದಿನ ವರ್ಷದ ಸಂಕಲ್ಪಗಳಿಗಾಗಿ ಬಳಸುವುದು ಹೆಚ್ಚು ಸೂಕ್ತವಾಗಿದೆ. ಕಳೆದ ವರ್ಷದಲ್ಲಿ ನಮ್ಮಿಂದ ನಡೆದ ತಪ್ಪುಗಳಿಗಾಗಿ ತೌಬಾ ಮಾಡುವುದು, ನಮಾಝ್, ಕುರ್ಆನ್ ಪಠಣ, ದಿಕ್ರ್ ಮತ್ತು ಸತ್ಕಾರ್ಯಗಳನ್ನು ಹೆಚ್ಚಿಸುವ ನಿರ್ಧಾರ ಕೈಗೊಳ್ಳುವುದು ಒಬ್ಬ ಮುಸ್ಲಿಮನ ಕರ್ತವ್ಯವಾಗಿದೆ.
ಮೊಹರಂ ತಿಂಗಳ ವಿಶೇಷತೆಯ ಬಗ್ಗೆ ಪ್ರವಾದಿ (ಸ) ಹೇಳಿದರು:
“ರಮಝಾನ್ ನಂತರದ ಅತ್ಯುತ್ತಮ ಉಪವಾಸವು ಅಲ್ಲಾಹನ ತಿಂಗಳಾದ ಮೊಹರಂನ ಉಪವಾಸವಾಗಿದೆ.”
(ಸಹೀಹ್ ಮುಸ್ಲಿಮ್ )
ಅದೇ ರೀತಿ ಆಶೂರಾ (ಮೊಹರಂ 9ಮತ್ತು 10ಅಥವಾ 10 ಮತ್ತು 11) ರ ದಿನದ ಉಪವಾಸದ ಕುರಿತು ಪ್ರವಾದಿ (ಸ) ಹೀಗೆ ಹೇಳಿದರು:
“ಆಶೂರಾ ದಿನದ ಉಪವಾಸವು ಕಳೆದ ಒಂದು ವರ್ಷದ ಪಾಪಗಳಿಗೆ ಪ್ರಾಯಶ್ಚಿತ್ತವಾಗುತ್ತದೆ ಎಂದು ನಾನು ಅಲ್ಲಾಹನಲ್ಲಿ ನಿರೀಕ್ಷಿಸುತ್ತೇನೆ.”
(ಸಹೀಹ್ ಮುಸ್ಲಿಮ್ )
ಆದ್ದರಿಂದ ಮೊಹರಂ ತಿಂಗಳು ನಮಗೆ ಸಂಭ್ರಮಾಚರಣೆಯ ತಿಂಗಳಲ್ಲ ಬದಲಾಗಿ ಇಬಾದತ್, ಆತ್ಮಶುದ್ಧೀಕರಣ ಮತ್ತು ಅಲ್ಲಾಹನೊಂದಿಗೆ ನಮ್ಮ ಸಂಬಂಧವನ್ನು ಬಲಪಡಿಸುವ ಅವಕಾಶವಾಗಿದೆ.
ಹೊಸ ಹಿಜ್ರಿ ವರ್ಷದ ಆಗಮನವು ನಮ್ಮ ಜೀವನದ ಮತ್ತೊಂದು ವರ್ಷ ಕಳೆದಿರುವುದನ್ನು ನೆನಪಿಸುತ್ತದೆ. ಆದ್ದರಿಂದ ಈ ಸಂದರ್ಭವನ್ನು ಅನಗತ್ಯ ಆಚರಣೆಗಳಲ್ಲಿ ಕಳೆಯದೆ, ಅಲ್ಲಾಹನ ಕಡೆಗೆ ಮರಳುವ, ನಮ್ಮ ಜೀವನವನ್ನು ಸುಧಾರಿಸುವ ಮತ್ತು ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸುವ ಸಂಕಲ್ಪದೊಂದಿಗೆ ಆರಂಭಿಸೋಣ. ಮೊಹರಂ ತಿಂಗಳ ಪವಿತ್ರತೆಯನ್ನು ಕಾಪಾಡಿ, ಉಪವಾಸ, ದುವಾ ಮತ್ತು ಸತ್ಕಾರ್ಯಗಳ ಮೂಲಕ ಹೊಸ ವರ್ಷವನ್ನು ಸ್ವಾಗತಿಸೋಣ.
ಅಲ್ಲಾಹನು ನಮಗೆ ಮೊಹರಂ ತಿಂಗಳ ಮಹತ್ವವನ್ನು ಅರಿತು ಅದರ ಅನುಗ್ರಹಗಳನ್ನು ಪಡೆಯುವ ಸೌಭಾಗ್ಯ ನೀಡಲಿ.
eMediaಕನ್ನಡ.

