ಮನುಷ್ಯ ಉಳಿಯಬೇಕಾದರೆ ಜೇನು ಉಳಿಸಿ: ತೋಟಗಾರಿಕಾ ನಿರ್ದೇಶಕಿ ಶ್ರೀಮತಿ ಕ್ಷಮಾ ಪಾಟೀಲ್
ಉಡುಪಿ ಜಿಪಂ ಕಛೇರಿ ಸಭಾಂಗಣದಲ್ಲಿ ನಡೆದ ತರಬೇತಿ ಕಾರ್ಯಾಗಾರ
(Udupi) ಉಡುಪಿ: “ಮಾನವ ಕುಲ ಉಳಿಬೇಕಾದರೆ ಜೇನುನೊಣಗಳನ್ನು ರಕ್ಷಿಸಿ, ಅವುಗಳ ಸಂತತಿಯನ್ನು ವೃದ್ಧಿಸುವುದು ಅತ್ಯಗತ್ಯ. ಇಲ್ಲದಿದ್ದರೆ ಭವಿಷ್ಯದಲ್ಲಿ ಗಂಡಾಂತರ ಖಂಡಿತ” ಎಂದು ಉಡುಪಿ ಜಿಲ್ಲಾ ಪಂಚಾಯತ್ ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕಿ ಶ್ರೀಮತಿ ಕ್ಷಮಾ ಪಾಟೀಲ್ ಎಚ್ಚರಿಸಿದ್ದಾರೆ.
ಉಡುಪಿಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ (ಜಿ.ಪಂ) ಕಛೇರಿ ಸಭಾಂಗಣದಲ್ಲಿ ಇಲಾಖೆಯ ವತಿಯಿಂದ 2026-27ನೇ ಸಾಲಿನ ‘ಮಧುವನ ಮತ್ತು ಜೇನು ಸಾಕಾಣಿಕೆ ಯೋಜನೆ’ ಯಡಿ ರೈತರಿಗಾಗಿ ಆಯೋಜಿಸಲಾಗಿದ್ದ ಜೇನು ಕೃಷಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಜೇನು ಸಾಕಾಣಿಕೆಯು ಆರ್ಥಿಕವಾಗಿ ಅತ್ಯಂತ ಲಾಭದಾಯಕ ಕೃಷಿಯಾಗಿದ್ದು, ಆಹಾರ ಉತ್ಪಾದನೆ ಮತ್ತು ಪ್ರಕೃತಿಯ ಸಮತೋಲನಕ್ಕೆ ಇದು ಅತ್ಯಂತ ಅಗತ್ಯವಾಗಿದೆ. ಸರಕಾರವು ರೈತರ ಅಭಿವೃದ್ಧಿಗಾಗಿ ಹಲವು ರೈತಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಆಸಕ್ತಿ ಮತ್ತು ಶ್ರಮ ವಹಿಸುವ ರೈತರ ಏಳಿಗೆಗೆ ತೋಟಗಾರಿಕೆ ಇಲಾಖೆ ಸದಾ ಶ್ರಮಿಸುತ್ತಿದೆ. ರೈತರು ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹಾಗೂ ಉಡುಪಿ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾದ ಉಪೇಂದ್ರ ನಾಯಕ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ನಿವೃತ್ತ ಜೇನು ಕೃಷಿ ಪ್ರದರ್ಶಕರಾದ ಶ್ರೀ ಲಕ್ಷ್ಮಣ ನಾಯ್ಕ್ ಅವರು ರೈತರಿಗೆ ಜೇನು ಕೃಷಿಯ ಕುರಿತು ತರಬೇತಿ ನೀಡಿದರು.
ಉಡುಪಿ ಜಿಲ್ಲೆಯ ಕಾಪು, ಬ್ರಹ್ಮಾವರ ಮತ್ತು ಉಡುಪಿ ತಾಲೂಕು ವ್ಯಾಪ್ತಿಯ ಸುಮಾರು 50ಕ್ಕೂ ಹೆಚ್ಚು ರೈತ ಬಾಂಧವರು ಈ ತರಬೇತಿ ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಉಡುಪಿ ಜಿ.ಪಂ. ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಎಲ್. ಹೇಮಂತ ಕುಮಾರ್ ವಂದಿಸಿದರು.

