‘ಉಡುಪಿ ಉಚ್ಚಿಲ ದಸರಾ-2026′ : ಅಕ್ಟೋಬರ್ 11ರಿಂದ 21ರವರೆಗೆ ಅದ್ದೂರಿಯಾಗಿ ನಡೆಯಲಿದೆ : ಡಾ ಜಿ. ಶಂಕರ್
ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಡಾ ಜಿ. ಶಂಕರ್
(Uchila) ಉಚ್ಚಿಲ : ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ 5ನೇ ಬಾರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ, ಭಕ್ತರು ಹಾಗೂ ಮೊಗವೀರ ಸಮಾಜದ ಸಹಯೋಗ ದೊಂದಿಗೆ ‘ಉಡುಪಿ ಉಚ್ಚಿಲ ದಸರಾ-2026’ ಅಕ್ಟೋಬರ್ 11ರಿಂದ 21 ಅದ್ದೂರಿಯಾಗಿ ಶ್ರೀಮತಿ ಶಾಲಿನಿ ಜಿ ಶಂಕರ್ ಸಭಾಭವನದಲ್ಲಿ ಜರಗಲಿದೆ ಎಂದು ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರರಾದ ನಾಡೋಜಾ ಡಾ. ಜಿ ಶಂಕರ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪಡುಬಿದ್ರಿಯಿಂದ ಕಾಪು ಸಮುದ್ರತೀರದವರೆಗಿನ ವಿದ್ಯುದ್ದೀಪಾಲಂಕಾರ ಉದ್ಘಾಟನೆಯು ಶನಿವಾರ ಅ.10ರಂದು ಸಂಜೆ 6.30ಕ್ಕೆ ನಡೆಯಲಿದೆ.
ಶ್ರೀ ಕ್ಷೇತ್ರದ ತಂತ್ರಿ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿ ಹಾಗೂ ಪ್ರಧಾನ ಪುರೋಹಿತರಾದ ರಾಘವೇಂದ್ರ ಉಪಾಧ್ಯಾಯರ ನೇತೃತ್ವದಲ್ಲಿ ಅ.11ರಂದು ಬೆಳಗ್ಗೆ 9.30ಕ್ಕೆ ನವದುರ್ಗೆಯರ ಮತ್ತು ಶ್ರೀ ಶಾರದಾ ಮಾತೆಯ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗುವುದು. 10.30ಕ್ಕೆ ‘ಉಡುಪಿ ಉಚ್ಚಿಲ ದಸರಾ-2026’ನ್ನು ಸಚಿವ ಕೆ.ಎಸ್.ಬಸವಂತಪ್ಪ ಉದ್ಘಾಟಿಸುವರು.
ವಸ್ತು ಪ್ರದರ್ಶನ: 11ರಂದು ಬೆಳಗ್ಗೆ 10ಕ್ಕೆ ವಸ್ತು ಪ್ರದರ್ಶನ, ಮಾಹಿತಿ ಶಿಬಿರ, ಮನೋರಂಜನಾ ಮತ್ತು ಜಾತ್ರಾ ಮೈದಾನ ಉದ್ಘಾಟನೆಗೊಳ್ಳಲಿದೆ. ಮತ್ಯದ್ವಾರ, ದವಸ ಧಾನ್ಯಗಳಿಂದ ಮಹಾಮಾತೆಯರು, ಕರಕುಶಲ ವಸ್ತುಗಳ ತಯಾರಿ, ಚನ್ನಪಟ್ಟಣ ಬೊಂಬೆ ತಯಾರಿ ಸೇರಿದಂತೆ ವಿವಿಧ ಪ್ರದರ್ಶನಗಳು ಗಮನ ಸೆಳೆಯಲಿವೆ.
ಸಾಂಸ್ಕೃತಿಕ ಕಾರ್ಯಕ್ರಮ: ಪ್ರತಿದಿನ ಭಜನೆ, ಮಧ್ಯಾಹ್ನ ಭಕ್ತಿ ಗಾನಸುಧೆ, ಧಾರ್ಮಿಕ ಪ್ರವಚನ, ಸಂಗೀತ ರಸಮಂಜರಿ, ಭಜನ್ ಪ್ಯೂಶನ್, ಜಾನಪದ ಹಾಗೂ ಶಾಸ್ತ್ರೀಯ ನೃತ್ಯ ಕಾರ್ಯಕ್ರಮ, ಸಂಗೀತ ಗಾನ ಸಂಭ್ರಮ, ಆಳ್ವಾಸ್ ಸಾಂಸ್ಕೃತಿಕ ವೈಭವ, ಭರತನಾಟ್ಯ, ಜಾನಪದ ನೃತ್ಯ, ನೃತ್ಯ ರೂಪಕ, ಸ್ಯಾಕ್ರೋಫೋನ್ ವಾದನ, ಶಾಸ್ತ್ರೀಯ ಸಂಗೀತ, ವೀಣಾವಾದನ, ‘ರಾಘು ಮಾಸ್ಟು’ ಮತ್ತು ‘ಮಹಿಮೆದ ಅಪ್ಪೆ ಭಗವತಿ’ ತುಳು ನಾಟಕ ಪ್ರದರ್ಶನಗೊಳ್ಳಲಿವೆ.
ಅ.12 ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕ್ಷೇತ್ರಕ್ಕೆ ಭೇಟಿ
ಅ.12 ರಂದು ಮಧ್ಯಾಹ್ನ 3ಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕ್ಷೇತ್ರಕ್ಕೆ ಭೇಟಿ ನೀಡಲಿದ್ದು, ಮಹಿಳಾ ದಸರಾ ಉದ್ಘಾಟಿಸುವರು. ಈ ಸಂದರ್ಭ ಮುಖ್ಯಮಂತ್ರಿಯವರನ್ನು ಅಭಿನಂದಿಸಲಾಗುವುದು. ಅವಿಭಜಿತ ಜಿಲ್ಲೆಯ ಬಂದರು ಹಾಗೂ ಮಹಿಳಾ ಮೀನುಗಾರರ ಸಮಸ್ಯೆಗಳ ಕುರಿತು ಮನವಿ ನೀಡಲಾಗುವುದು.
ರಾಜ್ಯಮಟ್ಟದ ಆಹ್ವಾನಿತ ತಂಡಗಳಿಂದ ನೃತ್ಯೋತ್ಸವ-ನೃತ್ಯ, ಸ್ಪರ್ಧೆ, ಮಕ್ಕಳಿಗೆ ಶ್ರೀಶಾರದಾ ಮಾತೆಯ ಛದ್ಮವೇಷ ಸ್ಪರ್ಧೆ, ಮಹಿಳೆಯರ ಹುಲಿಕುಣಿತ ಸ್ಪರ್ಧೆ, ಮಕ್ಕಳಿಗೆ ಕಿನ್ನಿ ಪಿಲಿ ನಲಿಕೆ ಸ್ಪರ್ಧೆ, ಪುರುಷರ ಹುಲಿಕುಣಿತ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಉಡುಪಿ ಮತ್ತು ದ.ಕ. ಜಿಲ್ಲಾಮಟ್ಟದ ಕುಸ್ತಿ ಸ್ಪರ್ಧೆ, ರಾಜ್ಯಮಟ್ಟದ ದೇಹದಾರ್ಡ್ಯ ಸ್ಪರ್ಧೆ, ಸಾಮೂಹಿಕ ಕುಣಿತ ಭಜನೆ, ದಾಂಡಿಯಾ ನೃತ್ಯ, ದಸರಾ ಕವಿಗೋಷ್ಠಿ ನಡೆಯಲಿದೆ ಎಂದರು.
21ರಂದು ಶ್ರೀ ಕ್ಷೇತ್ರ ಉಚ್ಚಿಲದಿಂದ ಹೊರಡುವ ನವದುರ್ಗೆಯರು ಮತ್ತು ಶಾರದಾ ಮಾತೆಯ ವಿಗ್ರಹಗಳನ್ನೊಳಗೊಂಡ ಶೋಭಾಯಾತ್ರೆ ರಾ.ಹೆ.66ರ ಉಚ್ಚಿಲ-ಎರ್ಮಾಳು-ಮೂಳೂರು-ಕೊಪ್ಪಲಂಗಡಿ ಮೂಲಕ ಸಾಗಿ ಕಾಪು ದೀಪಸ್ತಂಭದ ಬಳಿಯ ಸಮುದ್ರದಲ್ಲಿ ವಿಸರ್ಜನೆಗೊಳ್ಳಲಿದೆ. ವಿಗ್ರಹ ವಿಸರ್ಜನಾ ಸಮಯದಲ್ಲಿ ಸಮುದ್ರ ಮಧ್ಯದಲ್ಲಿ ಬೋಟ್‌ಗಳಲ್ಲಿ ವಿದ್ಯುತ್ ದೀಪಾಲಂಕಾರ, ಸಹಸ್ರ ಮಹಿಳೆಯರಿಂದ ಸಾಮೂಹಿಕ ಮಹಾಮಂಗಳಾರತಿ, ಕಾಶಿಯಿಂದ ಆಗಮಿಸುವ ಅರ್ಚಕರಿಂದ ನವದುರ್ಗೆಯರು, ಶ್ರೀ ಶಾರದಾಮಾತೆ ಹಾಗೂ ಸಮುದ್ರರಾಜನಿಗೆ ಗಂಗಾರತಿ ಆಯೋಜಿಸಲಾಗಿದೆ ಎಂದರು.
ದಸರಾ ಸಂದರ್ಭ ಶ್ರೀ ಕ್ಷೇತ್ರ ಸಂದರ್ಶನ ಮಾಡಲು ಬರುವ ಭಕ್ತರ ವಾಹನಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತದೆ. ಭಕ್ತರಿಗೆ ನೆರವಾಗಲು ಅನ್ನಸಂತರ್ಪಣೆಗೆ ಸಹಕರಿಸಲು ದಿನಂಪ್ರತಿ 2000 ಸ್ವಯಂಸೇವಕರು ಸಹಕರಿಸಲಿದ್ದಾರೆ ಎಂದು ಡಾ. ಜಿ ಶಂಕರ ಹೇಳಿದ್ದಾರೆ.
ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಬೆಳ್ಳಂಪಳ್ಳಿ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ ಮೂಳೂರು, ಉಡುಪಿ ಉಚ್ಚಿಲ ದಸರಾ ಸಮಿತಿ ಅಧ್ಯಕ್ಷ ವಿನಯ್ ಕರ್ಕೇರ, ಮಹಿಳಾ ಮಹಾಜನ ಸಂಘದ ಅಧ್ಯಕ್ಷೆ ಕವಿತಾ ಶರತ್, ಮಹಾಜನ ಸಂಘದ ಉಪಾಧ್ಯಕ್ಷ ಮೋಹನ್ ಬೇಂಗ್ರೆ, ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್, ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಸತೀಶ್ ಕುಂದರ್, ನಾಲ್ಕುಪಟ್ಟ ಮೊಗವೀರ ಸಂಘದ ಅಧ್ಯಕ್ಷ ಮನೋಜ್ ಕಾಂಚನ್, ಮಹಿಳಾ ಸಂಘ ಅಧ್ಯಕ್ಷೆ ಸುಗುಣ ಕರ್ಕೇರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

