ಮಹಿಳೆಯರು ಸವಾಲುಗಳನ್ನು ಸ್ವೀಕರಿಸುವ ದೃಢ ಮನೋಬಲ ಹೊಂದಿರಬೇಕು – ಶ್ರೀಮತಿ ಶ್ವೇತ ಪಳ್ಳಿ
ಹೆಜಮಾಡಿ ಬಿಲ್ಲವರ ಸಂಘದಲ್ಲಿ ವಿವಿಧ ಘಟಕಗಳ ಸಹಯೋಗದಲ್ಲಿ ಸ್ತ್ರೀ ಸ್ಪೂರ್ತಿ ಕಾರ್ಯಕ್ರಮ
(Hejamadi) ಹೆಜಮಾಡಿ : ಮಹಿಳೆಯರು ಜೀವನದ ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಸಮಾಜದಲ್ಲಿ ತಮ್ಮದೇ ಸ್ಥಾನವನ್ನು ನಿರ್ಮಿಸಿಕೊಳ್ಳಬೇಕು. ಅದಕ್ಕಾಗಿ ದೃಢ ಮನೋಬಲ ಅತ್ಯಾವಶ್ಯಕ ಎಂದು ಉದ್ಘಾಟಿಸಿ ಶ್ರೀಮತಿ ಶ್ವೇತ ಪಳ್ಳಿ ಅವರು ಅಭಿಪ್ರಾಯ ಪಟ್ಟರು.
ಅವರು ಹೆಜಮಾಡಿ ಬಿಲ್ಲವರ ಸಂಘದ ಸಹಯೋಗದಲ್ಲಿ ಯುವವಾಹಿನಿ ಹೆಜಮಾಡಿ ಘಟಕ, ಮಹಿಳಾ ಮಂಡಳಿ ಬಿಲ್ಲವರ ಸಂಘ ಹಾಗೂ ಬಿರುವೆರ್ ಬ್ರದರ್ಸ್ ಹೆಜಮಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಮಹಿಳಾ ದಿನಾಚರಣೆಯ ಪ್ರಯುಕ್ತ ನಡೆದ ಸ್ತ್ರೀ ಸ್ಪೂರ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
“ನನ್ನ ಸಾಧನೆಗೆ ಯುವವಾಹಿನಿಯೇ ಸ್ಪೂರ್ತಿ. ಹೆಚ್ಚಿನ ಯುವಜನತೆ ಇಂತಹ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು,” ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಲ್ಲವರ ಸಂಘದ ಅಧ್ಯಕ್ಷ ಮೋಹನ್ ದಾಸ್ ಹೆಜಮಾಡಿ ವಹಿಸಿದ್ದರು.
ಅವರು ಮಾತನಾಡಿ, ಪ್ರಥಮ ಬಾರಿಗೆ ಹೆಜಮಾಡಿ ಬಿಲ್ಲವರ ಸಂಘದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಸ್ತ್ರೀ ಸ್ಪೂರ್ತಿ 2026 ಕಾರ್ಯಕ್ರಮವನ್ನು ಆಯೋಜಿಸಿದ್ದು ಇಂದಿನ ಆಂಧುನಿಕ ಯುಗದಲ್ಲಿ ಮಹಿಳೆ ಮನೆ ಕೆಲಸಕ್ಕೆ ಮಾತ್ರ ಸೀಮಿತವಾಗಿರದೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ಇಂತಹ ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಗೌರವಿಸಿದರೆ, ಇತರ ಮಹಿಳೆಯರಿಗೂ ವಿವಿಧ ಕ್ಷೇತ್ರಗಳಲ್ಲಿ ತನ್ನನು ತೊಡಗಿಸಿಕೊಳ್ಳಲು ಈ ಕಾರ್ಯಕ್ರಮ ಸ್ಪೂರ್ತಿಯಾಗುತ್ತದೆ ಎಂದರು.
ವೇದಿಕೆಯಲ್ಲಿ ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ದಯಾನಂದ ಹೆಜಮಾಡಿ, ಯುವವಾಹಿನಿ ಕೇಂದ್ರ ಸಮಿತಿಯ ದ್ವಿತೀಯ ಉಪಾಧ್ಯಕ್ಷರಾದ ಸುರೇಶ್ ಪೂಜಾರಿ, ಯುವವಾಹಿನಿ ಅಧ್ಯಕ್ಷ ನಿಶಾಂಕ್ ಎಸ್. ಕೋಟ್ಯಾನ್, ಮಹಿಳಾ ಮಂಡಳಿ ಅಧ್ಯಕ್ಷೆ ಶ್ರೀಮತಿ ಲಾವಣ್ಯ ಪ್ರಮೋದ್ ಹಾಗೂ ಬಿರುವೆರ್ ಬ್ರದರ್ಸ್ ಅಧ್ಯಕ್ಷರಾದ ಮನೋಜ್ ಸುವರ್ಣ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಕು. ಧನಲಕ್ಷ್ಮಿ ಪೂಜಾರಿ ಅವರಿಗೆ ಸ್ತ್ರೀ ಸ್ಪೂರ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೊತೆಗೆ ಬಿಲ್ಲವರ ಸಂಘದ ನಾಲ್ಕು ಕರೆಯ ನಾಲ್ವರು ಹಿರಿಯ ಮಹಿಳೆಯರನ್ನು ಸನ್ಮಾನಿಸಲಾಯಿತು.
ಶ್ರೀಮತಿ ನಳಿನಿ ಉಷಾನಂದ ಅವರು ಪ್ರಸ್ತಾವನೆ ಸಲ್ಲಿಸಿದರು. ಲಾವಣ್ಯ ಪ್ರಬೋಧ್ ಚಂದ್ರ ಸ್ವಾಗತಿಸಿದರು. ಧೀರಜ್ ಕಾರ್ಯಕ್ರಮ ನಿರೂಪಿಸಿದರು. ಪ್ರಾಪ್ತಿ ಆರ್. ಸುವರ್ಣ ವಂದಿಸಿದರು.

