ಮಾದಕ ವಸ್ತುವಿನೊಂದಿಗೆ ಕಾಂಗ್ರೆಸ್ ಮುಖಂಡ ಸಹಿತ ಇಬ್ಬರ ಬಂಧನ
ಬೆಳಪು ಝಹೀರ್ ಅಹ್ಮದ್ ಮತ್ತು ಸಯ್ಯದ್ ಶಮೀಮ್ ಬಂಧಿತರು
(Shirva) ಶಿರ್ವ : ಖಚಿತ ಮಾಹಿತಿ ಆಧರಿಸಿ, ಶಿರ್ವ ಪೊಲೀಸರು ಕಾಪು – ಶಿರ್ವ ರಸ್ತೆಯ ಬದಿ ನಿಂತಿದ್ದ ಕಾರನ್ನು ಪರಿಶೀಲನೆ ಮಾಡಿದಾಗ ಕಾರಿನಲ್ಲಿದ್ದ MDMA ಮಾದಕ ವಸ್ತು ಸಹಿತ ಕಾಂಗ್ರೆಸ್ ಮುಖಂಡನ ಸಹಿತ ಇಬ್ಬರನ್ನು ವಶಕ್ಕೆ ಪಡೆದ ಘಟನೆ ಪಾದೂರು ಗ್ರಾಮದ ಚಂದ್ರನಗರ ಜನತಾ ಕಾಲೋನಿ ಬಳಿ ಘಟಿಸಿದೆ.
ಬೆಳಪು ಗ್ರಾಮದವರಾದ ಝಹೀರ್ ಅಹ್ಮದ್ (66) ಮತ್ತು ಸಯ್ಯದ್ ಶಮೀಮ್ (28) ಬಂಧಿತರು.
2.83 ಗ್ರಾಂ ತೂಕದ MDMA ಮಾದಕ ವಸ್ತು, ಮೊಬೈಲ್ ಫೋನ್ ಮತ್ತು ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹರಿರಾಂ ಶಂಕರ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸುಧಾಕರ ಎಸ್ ನಾಯ್ಕ್ ರವರ ನಿರ್ದೇಶನದಂತೆ, ಕಾರ್ಕಳ ಪೊಲೀಸ್ ಉಪಾಧೀಕ್ಷಕರಾದ ವಿಜಯ್ ಪ್ರಸಾದ್ ಮತ್ತು ಕಾಪು ವೃತ್ತ ನಿರೀಕ್ಷಕರಾದ ಆಝಮತ್ ಆಲಿರವರ ಮಾರ್ಗದರ್ಶನದಲ್ಲಿ ಶಿರ್ವ ಪೊಲೀಸ್ ಠಾಣಾ ಪಿಎಸ್ ಐ ಮಂಜುನಾಥ ಮರಬದ, ಪಿಎಸ್ಐ ಲೋಹಿತ್ ಕುಮಾರ್ ಸಿಎಸ್ ಹಾಗೂ ಠಾಣಾ ಸಿಬ್ಬಂದಿಗಳು ಹಾಗೂ ಅಪರಾಧ ಪರಿಶೀಲನಾಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

