ಮಾರ್ಚ್ 13 – 15: ಉಡುಪಿಯಲ್ಲಿ ಮುರಾರಿ– ಕೆದ್ಲಾಯ ರಂಗೋತ್ಸವ
ರಂಗೋತ್ಸವ ಉದ್ಘಾಟಿಸಲಿರುವ ಮೈಸೂರು ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು
(Udupi) ಉಡುಪಿ: ರಥಬೀದಿ ಗೆಳೆಯರು (ರಿ) ಉಡುಪಿ ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ವರ್ಷಂಪ್ರತಿ ಜರಗುವ ಪ್ರತಿಷ್ಠಿತ ಮುರಾರಿ – ಕೆದ್ಲಾಯ ರಂಗೋತ್ಸವ ಮಾರ್ಚ್ 13, 14 ಮತ್ತು 15 ರಂದು ಪ್ರತಿದಿನ ಸಂಜೆ ಗಂಟೆ 6.30ಕ್ಕೆ ಉಡುಪಿ ಎಂಜಿಎಂ ಕಾಲೇಜು ಮುದ್ದಣ ಮಂಟಪದಲ್ಲಿ ಜರಗಲಿದೆ.
ಮಾರ್ಚ್ 13 ಶುಕ್ರವಾರ ಸಂಜೆ ಗಂಟೆ 5.45ಕ್ಕೆ ರಂಗೋತ್ಸವವನ್ನು ಮೈಸೂರು ರಂಗಾಯಣದ ನಿರ್ದೇಶಕರಾದ ಸತೀಶ್ ತಿಪಟೂರು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆಯ ಸಹಾಯಕ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ ಮತ್ತು ಉಡುಪಿ ಎಂ ಜಿ ಎಂ ಕಾಲೇಜು ಪ್ರಾಂಶುಪಾಲ ಪ್ರೊ. ವನಿತಾ ಮಯ್ಯ ಭಾಗವಹಿಲಿದ್ದಾರೆ .
ಸಭಾ ಕಾರ್ಯಕ್ರಮದ ನಂತರ ರಂಗಾಯಣ ಮೈಸೂರು ರೆಪರ್ಟರಿ ಕಲಾವಿದರಿಂದ ಅಂಬೇಡ್ಕರ್ ಕೊಲಾಜ್ (ರಚನೆ : ಕೋಟಿಗಾನ ಹಳ್ಳಿ ರಾಮಯ್ಯ, ನಿರ್ದೇಶನ : ಚಿದಂಬರರಾವ್ ಜಂಬೆ) ನಾಟಕ ಪ್ರದರ್ಶನಗೊಳ್ಳಲಿದೆ.
ಮಾರ್ಚ್ 14 ಶನಿವಾರ , ಸಮುದಾಯ ಶಿವಮೊಗ್ಗ ಕಲಾವಿದರಿಂದ ನೀರೊಳಗಣ ಕಿಚ್ಚು (ರಂಗರೂಪ : ಡಾ. ಸಾಸ್ವೇಹಳ್ಳಿ ಸತೀಶ್, ಐಕೆ. ಬೊಳುವಾರು ನಿರ್ದೇಶನ : ಡಾ. ಸಾಸ್ವೇಹಳ್ಳಿ ಸತೀಶ್) ಮತ್ತು ಮಾರ್ಚ್ 15. ಭಾನುವಾರ ಸಮುದಾಯ ಬೆಂಗಳೂರು ಕಲಾವಿದರಿಂದ ಭಗವಂತನ ಮರಣ (ಮಲಯಾಳಂ ಮೂಲ ಕತೆ : ಕೆ.ಆರ್ ಮೀರಾ ಕನ್ನಡಕ್ಕೆ : ಕೆ. ಪ್ರಭಾಕರನ್ ರಂಗರೂಪ/ನಿರ್ದೇಶನ : ಡಾ. ಸ್ಯಾಮ್ ಕುಟ್ಟಿ ಪಟ್ಟಂಕರಿ) ನಾಟಕಗಳು ಪ್ರದರ್ಶನಗೊಳ್ಳಲಿದೆ.
ವಿಭಿನ್ನ ಶೈಲಿಯ ವಿಭಿನ್ನ ಕಥಾವಸ್ತುವಿನ ಈ ಮೂರೂ ನಾಟಕಗಳು ಉಡುಪಿಯಲ್ಲಿ ಪ್ರಥಮ ಭಾರಿಗೆ ಪ್ರದರ್ಶನಗೊಳ್ಳಲಿದೆ. ರಂಗಾಸಕ್ತರು ಆಗಮಿಸಿ ರಂಗಾನುಭವವನ್ನು ಪಡೆದು ಕೊಳ್ಳ ಬೇಕೆಂದು ಸಂಸ್ಥೆಯ ನಾಟಕ ವಿಭಾಗದ ಸಂಚಾಲಕರಾದ ಸಂತೋಷ್ ಶೆಟ್ಟಿ ಹಿರಿಯಡ್ಕ ಮತ್ತು ಸಂತೋಷ್ ನಾಯಕ್ ಪಟ್ಲ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

