ಮುರಿದು ಬಿದ್ದ ವಿದ್ಯುತ್ ತಂತಿ ತಗುಲಿ ಪತಿ, ಪತ್ನಿ ಸಾವು: ಕುಂದಾಪುರದಲ್ಲಿ ನಡೆದ ಹೃದಯ ವಿದ್ರಾವಕ ಘಟನೆ
ಕುಂದಾಪುರ: ಮುರಿದು ಬಿದ್ದ ವಿದ್ಯುತ್ ತಂತಿ ತಗುಲಿ ಪತಿ ಸಾವನ್ನಪ್ಪಿದ್ದು, ರಕ್ಷಣೆಗೆ ಧಾವಿಸಿದ ಪತ್ನಿಗೂ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ ದಾರುಣ ಘಟನೆ ಕುಂದಾಪುರ ಹೆಮ್ಮಾಡಿ ಸಮೀಪದ ಸುಳ್ಸೆ ಕರಣಿಕರ ಮನೆಯ ಬಳಿ ನಡೆದಿದೆ.
ಸುಳ್ಸೆ ಯಕ್ಷಿಬ್ರಹ್ಮ ನಂದಿಕೇಶ್ವರ ದೈವಸ್ಥಾನ ಸಮೀಪದ ಸುಳ್ಸೆಯರ ಮನೆ ನಿವಾಸಿ ಮಹಾಬಲ ದೇವಾಡಿಗ (55) ಪತ್ನಿ ಲಕ್ಷ್ಮೀ ದೇವಾಡಿಗ (49) ಮೃತಪಟ್ಟ ದಂಪತಿಗಳು.
ಮಹಾಬಲ ದೇವಾಡಿಗ ಸುಳ್ಸೆ ಕರಣಿಕರ ಮನೆಯಲ್ಲಿ ದಿನಗೂಲಿ ಕೆಲಸ ನಿರ್ವಹಿಸುತ್ತಿದ್ದು, ಇಂದು ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನ ಕಳೆದರೂ ಪತಿ ಮನೆಗೆ ಬಾರದಿರುವುದನ್ನು ಗಮನಿಸಿದ ಪತ್ನಿ ಲಕ್ಷ್ಮೀ ಅನುಮಾನಗೊಂಡು ಕರಣಿಕರ ಮನೆಗೆ ತೆರಳಿದ್ದರು. ಈ ವೇಳೆ ಕರಣಿಕರ ಮನೆಗೆ ಬರುವ ಕಾಲುದಾರಿಯಲ್ಲಿ ತುಂಡರಿಸಿದ ವಿದ್ಯುತ್ ತಂತಿ ತಗುಲಿ ಪತಿ ಬಿದ್ದಿರುವುದು ಲಕ್ಷ್ಮೀ ಗಮನಕ್ಕೆ ಬಂದಿದೆ. ತಕ್ಷಣವೇ ಪತಿಯನ್ನು ರಕ್ಷಿಸಲು ಸ್ಥಳೀಯರಲ್ಲಿ ನೆರವಿಗೆ ಬರುವಂತೆ ಕೂಗತೊಡಗಿದಾಗ ಸಮೀಪದ ಮನೆಯರು ಬರುವಷ್ಟರಲ್ಲಾಗಲೇ ಮಳೆ ನೀರಿನಿಂದ ಒದ್ದೆಯಾದ ಮರದ ತುಂಡಲ್ಲಿ ರಕ್ಷಣೆಗೆ ಧಾವಿಸಿದ ಪರಿಣಾಮ ಲಕ್ಷ್ಮೀಯವರಿಗೂ ವಿದ್ಯುತ್ ಪ್ರವಹಿಸಿ ಅವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತ ಮಹಾಬಲ ದೇವಾಡಿಗ ಹಾಗೂ ಲಕ್ಷ್ಮೀ ದಂಪತಿಗೆ ಇಬ್ಬರು ಮಕ್ಕಳಿದ್ದು, ಓರ್ವ ಪುತ್ರ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಪುತ್ರಿ ವಿದ್ಯಾಭ್ಯಾಸ ಮುಗಿಸಿ ಮನೆಯಲ್ಲಿದ್ದಾಳೆ.
ಮೆಸ್ಕಾಂ ಇಲಾಖೆಯ ನಿರ್ಲಕ್ಷವೇ ಈ ದುರಂತಕ್ಕೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾಬಲ ದೇವಾಡಿಗ ಅವರು ಸಾವನ್ನಪ್ಪಿದ ಕಾಲು ದಾರಿಯ ಮಧ್ಯೆ ಎರಡು ವಿದ್ಯುತ್ ತಂತಿ ಹಾದು ಹೋಗಿದ್ದು, ಅನೇಕ ಕಡೆಗಳಲ್ಲಿ ತುಂಡಾದ ತಂತಿಗಳನ್ನು ಜೋಡಿಸಲಾಗಿದೆ. ಎರಡು ತಂತಿಯಲ್ಲಿ ಒಂದು ತಂತಿ ತುಂಡಾಗಿ ಬಿದ್ದಿದ್ದು, ಇದೇ ತಂತಿ ತಗುಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಮೆಸ್ಕಾಂ ಇಲಾಖೆಯ ನಿರ್ಲಕ್ಷವನ್ನು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ, ಕುಂದಾಪುರ ಗ್ರಾಮಾಂತರ ವೃತ್ತ ನಿರೀಕ್ಷಕ ಜಯರಾಮ್ ಗೌಡ ಘಟನಾ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

