ರಾಷ್ಟ್ರೀಯ ಹೆದ್ದಾರಿ 66ರ ಮೂಲ್ಕಿ ವಿಜಯ ಸನ್ನಿಧಿ ಜಂಕ್ಷನ್ ಬಳಿ ಬೈಕ್‌ಗೆ ಕಾರು ಡಿಕ್ಕಿಯಾಗಿ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಸಹಸವಾರೆ ಕೊನೆಯುಸಿರೆಳೆದು ಸವಾರ ಗಾಯಗೊಂಡ ಘಟನೆ ಶುಕ್ರವಾರ ಸಾಯಂಕಾಲ ಸಂಭವಿಸಿದೆ.
ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಬೈಕ್‌ಗೆ ಮೂಲ್ಕಿ ರಾಷ್ಟ್ರೀಯ ಹೆದ್ದಾರಿ ವಿಜಯ ಸನ್ನಿಧಿ ಬಳಿ ಕಿನ್ನಿಗೋಳಿ ಕಡೆಯಿಂದ ಮೂಲ್ಕಿ ಕಡೆಗೆ ಹೆದ್ದಾರಿ ಕ್ರಾಸ್ ಮಾಡುತ್ತಿದ್ದ ಹೋಂಡಾ ಕಾರು ಡಿಕ್ಕಿಯಾಗಿದೆ.
ಅಪಘಾತದ ತೀವ್ರತೆಗೆ ಕಾರು ಬೈಕನ್ನು ದೂಡಿಕೊಂಡು ಹೋಗಿದ್ದು, ಬೈಕ್ ಹಿಂಭಾಗದಲ್ಲಿ ಕುಳಿತಿದ್ದ ಸಹಸವಾರ ಪ್ರೀತಿಕಾ ಶೆಟ್ಟಿ ತಲೆಗೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ಸಾಗಿಸುವಾಗಲೇ ಕೊನೆಯುಸಿರೆಳೆದಿದ್ದಾರೆ.
ಅಪಘಾತದಿಂದ ಕೆಲಹೊತ್ತು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಅಪಘಾತಕ್ಕೀಡಾದ ಎರಡು ವಾಹನಗಳನ್ನು ತೆರವುಗೊಳಿಸಿದ್ದಾರೆ. ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರಿ ಪೊಲೀಸರು ಎಸಿಪಿ ಗೀತಾ ಕುಲಕರ್ಣಿ, ಇನ್‌ಸ್ಪೆಕ್ಟರ್ ಶರೀಫ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

