ಯಕ್ಷಸೌರಭದ ವತಿಯಿಂದ ಕಾರ್ತಿಕ ಮಾಸದ ಯಕ್ಷಗಾನ ರಂಗದೋಕುಳಿ 2023
ಯುವ ಸಮುದಾಯದಲ್ಲಿ ಯಕ್ಷಗಾನದ ಅಭಿರುಚಿ – ಐರೋಡಿ ಸುಬ್ರಹ್ಮಣ್ಯ ಮಧ್ಯಸ್ಥ
(Kota) ಕೋಟ: ಯಕ್ಷಗಾನದ ಅಭಿರುಚಿ ಯುವ ಸಮುದಾಯದಲ್ಲಿ ಬೆಳೆಯಬೇಕು. ಆಗಮಾತ್ರ ಯಕ್ಷಗಾನ ಕ್ಷೇತ್ರ ನಿತ್ಯ ನಿರಂತರವಾಗಿ ಜನಮಾನಸದಲ್ಲಿ ನೆಲೆಯೂರಲಿದೆ ಎಂದು ಐರೋಡಿ ಶ್ರೀ ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನದ ಧರ್ಮದರ್ಶಿ ಸುಬ್ರಹ್ಮಣ್ಯ ಮಧ್ಯಸ್ಥ ಹೇಳಿದರು.
ಸೋಮವಾರ ಕೋಟದ ಹಿರೇ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ಕೋಟ ಯಕ್ಷಸೌರಭ ಶ್ರೀ ಹಿರೇಮಹಾಲಿಂಗೇಶ್ವರ ಕಲಾರಂಗದ ಆಶ್ರಯದಲ್ಲಿ ಒಂಭತ್ತನೆ ವರ್ಷದ ಕಾರ್ತಿಕ ಮಾಸದ ಯಕ್ಷಾರಾಧನೆ ರಂಗದೋಕುಳಿ 2023 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ದೇಗುಲಕ್ಕೂ ಹಾಗೂ ಯಕ್ಷಗಾನಕ್ಕೂ ಸಾಕಷ್ಟು ವರ್ಷಗಳ ಹಿನ್ನಲೆ ಇದೆ. ಅದರಂತೆ ಯಕ್ಷಸೌರಭಕ್ಕೂ ತನ್ನದೆ ಆದ ಅಸ್ತಿತ್ವ ಹೊಂದಿದೆ. ಈ ದಿಸೆಯಲ್ಲಿ ಧಾರ್ಮಿಕ ಹಿನ್ನಲೆಯಲ್ಲಿ ಕಾರ್ಯಕ್ರಮ ಸಂಯೋಜಿಸಿ ಯಕ್ಷಾರಾಧನೆಗೆ ಹೆಚ್ಚಿನ ಆಯಾಮ ನೀಡುವ ಕಾರ್ಯ ನಿಜಕ್ಕೂ ಪ್ರಶಂಸನೀಯ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗುರು ಚಿತ್ರಪಾಡಿ ಕೃಷ್ಣಮೂರ್ತಿ ಉರಾಳರವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಕ್ಷ ಸೌರಭದ ಅಧ್ಯಕ್ಷ ರಾಘವೇಂದ್ರ ಕರ್ಕೇರ ಕೋಡಿ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಉದ್ಯಮಿ ಎಂ. ಸುಬ್ರಾಯ ಆಚಾರ್ಯ, ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಜಿ. ತಿಮ್ಮ ಪೂಜಾರಿ, ಕೋಟ ಗ್ರಾ.ಪಂ ಸದಸ್ಯ ಶೇಖರ್ ಜಿ. ದೇವಾಡಿಗರ ಸಂಘ ಕೋಟ ಸಾಲಿಗ್ರಾಮ ಅಧ್ಯಕ್ಷ ನರಸಿಂಹ ದೇವಾಡಿಗ ಉಪಸ್ಥಿತರಿದ್ದರು. ಸ್ಥಾಪಕಾಧ್ಯಕ್ಷ ಹರೀಷ್ ಭಂಡಾರಿ ಸ್ವಾಗತಿಸಿದರು. ರಾಜೇಶ್ ಕರ್ಕೇರ ನಿರೂಪಿಸಿದರು. ಕಾರ್ತಿಕ್ ಅಚಾರ್ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಪೌರಾಣಿಕ ಪ್ರಸಂಗ ಸಮರ ಭಾಮಿನಿ ಯಕ್ಷಗಾನ ಪ್ರದರ್ಶನಗೊಂಡಿತು.

