ವಿಶ್ವಪ್ರಸಿದ್ಧ “ಮಟ್ಟು ಗುಳ್ಳ”ಪ್ರತೀಕವಾಗಿ ನಿರ್ಮಿಸಿದ “I LOVE MATTU” ವಿನ್ಯಾಸ ದ್ವಂಸ : ಸ್ಥಳೀಯರ ಆಕ್ರೋಶ
ಮಟ್ಟು ಗುಳ್ಳ ಬೆಳೆಗಾರರ ಸಂಘದ ಅಧ್ಯಕ್ಷ ಸುನಿಲ್ ಡಿ. ಬಂಗೇರ ಮಟ್ಟು ತೀವ್ರ ಆಕ್ಷೇಪ
(Katapadi) ಕಟಪಾಡಿ: ದೇಶ–ವಿದೇಶಗಳಲ್ಲಿಯೂ ತನ್ನದೇ ಆದ ವಿಶೇಷ ಸ್ಥಾನವನ್ನು ಪಡೆದಿರುವ ಮಟ್ಟು ಗುಳ್ಳ ಇಂದು ಉಡುಪಿ ಜಿಲ್ಲೆಯ ಗೌರವದ ಚಿಹ್ನೆಯಾಗಿ ಗುರುತಿಸಿಕೊಂಡಿದೆ.
ವಿಶ್ವಪ್ರಸಿದ್ಧ ಮಟ್ಟು ಗುಳ್ಳದ ಮೇಲಿನ ಅಪಾರ ಅಭಿಮಾನ ಮತ್ತು ಪ್ರೀತಿಯಿಂದ ದಾನಿಗಳಾದ ಸುಭಾಷ್ ಎಂ. ಸಾಲಿಯನ್ ನೆಲ್ಲಿಕಟ್ಟೆ ಅವರು “I LOVE MATTU” ಎಂಬ ವಿನ್ಯಾಸದೊಂದಿಗೆ ಮಟ್ಟು ಗುಳ್ಳದ ಆಕರ್ಷಕ ಮಾದರಿಯನ್ನು ನಿರ್ಮಿಸಿ ಗ್ರಾಮಕ್ಕೆ ಸಮರ್ಪಿಸಿದ್ದರು. ಇದು ಸಾರ್ವಜನಿಕ ಆಕರ್ಷಕ ಕೇಂದ್ರವೂ ಆಗಿತ್ತು. ಈ ವಿನ್ಯಾಸವು ಪ್ರವಾಸಿಗರು, ಹಾಗೂ ಯುವಜನರಿಗೆ ಮಟ್ಟು ಗ್ರಾಮದ ಗುರುತಾಗಿ ಪರಿಣಮಿಸಿತ್ತು.
ವಿಶ್ವಪ್ರಸಿದ್ಧ “ಮಟ್ಟು ಗುಳ್ಳ” ಎಂಬುದು ಕೇವಲ ಒಂದು ಬೆಳೆ ಅಥವಾ ತರಕಾರಿ ಮಾತ್ರವಲ್ಲ ಅದು ಮಟ್ಟು ಗ್ರಾಮದ ಹೆಮ್ಮೆ, ಕರಾವಳಿಯ ಸಂಸ್ಕೃತಿ, ರೈತರ ಪರಿಶ್ರಮ ಮತ್ತು ಶ್ರೀ ಕ್ಷೇತ್ರ ಸೋದೆ ಶ್ರೀ ವಾದಿರಾಜ ಸ್ವಾಮೀಜಿ ಅವರ ಪವಿತ್ರ ಪ್ರಸಾದದ ನೆನಪನ್ನು ಹೊತ್ತಿರುವ ಅಮೂಲ್ಯ ಪರಂಪರೆಯಾಗಿದೆ.
ಕೆಲ ದುಷ್ಕರ್ಮಿಗಳು ರಾತ್ರಿ ವೇಳೆ ಈ ಮಾದರಿಯನ್ನು ಉದ್ದೇಶಪೂರ್ವಕವಾಗಿ ಧ್ವಂಸಗೊಳಿಸಿ ಪುಡಿ ಮಾಡಿರುವ ಘಟನೆ ನಡೆದಿದೆ. ಇದು ಕೇವಲ ಒಂದು ಮಾದರಿಯ ಮೇಲಿನ ದಾಳಿ ಅಲ್ಲ. ಮಟ್ಟು ಗ್ರಾಮದ ಗೌರವ, ರೈತರ ಭಾವನೆ, ಮತ್ತು ವಿಶ್ವಪ್ರಸಿದ್ಧ ಮಟ್ಟು ಗುಳ್ಳದ ಅಸ್ತಿತ್ವದ ಮೇಲಿನ ಅವಮಾನಕರ ಕೃತ್ಯವಾಗಿದೆ.
ಮಟ್ಟು ಗುಳ್ಳ ಬೆಳೆಗಾರರ ಸಂಘದ ಅಧ್ಯಕ್ಷ ಸುನಿಲ್ ಡಿ. ಬಂಗೇರ ಮಟ್ಟು ಮತ್ತು ಸರ್ವ ಸದಸ್ಯರು ಈ ಹೇಯ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ. ಗ್ರಾಮಸ್ಥರ ಮತ್ತು ರೈತರ ಮನಸ್ಸಿಗೆ ನೋವುಂಟುಮಾಡಿರುವ ಇಂತಹ ದುಷ್ಕರ್ಮಿಗಳನ್ನು ತಕ್ಷಣವೇ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆ ಮತ್ತು ಸಂಬಂಧಪಟ್ಟ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

