ಶಾಸಕ ಹರೀಶ್ ಪೂಂಜಾರಿಂದ ಧಾರ್ಮಿಕ ಕೇಂದ್ರದಲ್ಲಿ ಸೌಹಾರ್ದತೆ ಕೆಡಿಸುವ ಪ್ರಯತ್ನ : ರಕ್ಷಿತ್ ಶಿವರಾಂ
(Thekkaru) ತೆಕ್ಕಾರು : ಧಾರ್ಮಿಕ ಕೇಂದ್ರವನ್ನು ಸೌಹಾರ್ದತೆಯ ತಾಣವಾಗಿಸುವ ಬದಲಾಗಿ ಸೌಹಾರ್ದತೆಯನ್ನು ಕೆಡಿಸಿ, ಧರ್ಮಗಳ ನಡುವೆ ಕಂದಕ ನಿರ್ಮಾಣ ಮಾಡಲು ಉಪಯೋಗಿಸುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರ ನಡೆ ಅತ್ಯಂತ ಖಂಡನೀಯ. ಇದು ಜನಪ್ರತಿನಿಧಿಯೊಬ್ಬರ ಬೇಜವಾಬ್ದಾರಿ ನಡೆಗೆ ಸಾಕ್ಷಿಯಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶದ ವೇದಿಕೆಯನ್ನು ಮುಸ್ಲಿಮರ ವಿರುದ್ಧ ದ್ವೇಷ ಹುಟ್ಟಿಸಲು ಉಪಯೋಗಿಸಿರುವುದು ಸರಿಯಲ್ಲ. ತೆಕ್ಕಾರು ಗ್ರಾಮದ ಎಲ್ಲರ ಸಹಕಾರದಿಂದ ದೇವಸ್ಥಾನದ ಅಭಿವೃದ್ಧಿ ಕಾಮಗಾರಿ ಹಾಗೂ ಧಾರ್ಮಿಕ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಗ್ರಾಮದಲ್ಲಿ ಹಿಂದೂ- ಮುಸ್ಲಿಮರು ಸಹೋದರತೆಯಿಂದ ಇರುವುದನ್ನು ಸಹಿಸದ ಶಾಸಕ ಹರೀಶ್ ಪೂಂಜಾ, ತನ್ನ ಭಾಷಣದುದ್ದಕ್ಕೂ ಮುಸ್ಲಿಮರ ಜೊತೆಗೆ ಯಾವುದೇ ಹಿಂದೂಗಳು ವ್ಯವಹರಿಸಬೇಡಿ, ಹಿಂದೂಗಳಿಗೆ ಸೌಹಾರ್ದತೆ ಅಗತ್ಯವಿಲ್ಲ ಎಂದು ಕರೆ ನೀಡುವ ಮೂಲಕ ಧಾರ್ಮಿಕ ಕೇಂದ್ರವನ್ನು ದ್ವೇಷದ ಕೇಂದ್ರವಾಗಿಸಿರುವ ಶಾಸಕರ ನಡೆ ತುಳುನಾಡಿನ ಸೌಹಾರ್ದತೆಗೆ ಅಪಾಯಕಾರಿಯಾಗಿದೆ.
ಶಾಸಕರಾಗಿ ಆಯ್ಕೆಯಾದ ಸಂದರ್ಭದಲ್ಲಿ ಸಂವಿಧಾನಬದ್ದವಾಗಿ ದೇಶದ ಸೌಹಾರ್ದತೆಯನ್ನು ಎತ್ತಿ ಹಿಡಿಯುತ್ತೇನೆ. ಸರ್ವಜನತೆಯನ್ನು ಸಮಾನತೆಯಿಂದ, ಸೌಹಾರ್ದತೆಯಿಂದ ನೋಡುತ್ತೇನೆ ಎಂದು ಪ್ರತಿಜ್ಞೆ ಮಾಡಿದ ಶಾಸಕರು ಇದೀಗ ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳಲು ಧಾರ್ಮಿಕ ವೇದಿಕೆಗಳನ್ನು ಉಪಯೋಗಿಸುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಜನರು ಧಾರ್ಮಿಕ ವೇದಿಕೆಗಳನ್ನು ತಮ್ಮ ರಾಜಕೀಯ ಉದ್ದೇಶಗಳಿಗೆ ಉಪಯೋಗಿಸಲು ಬಿಡಬಾರದು. ಅಂತಹ ಘಟನೆಗಳನ್ನು ಬಲವಾಗಿ ವಿರೋಧಿಸಿ, ತಮ್ಮ ಊರಿನ ಘನತೆ, ಗೌರವ, ಸೌಹಾರ್ದತೆಯನ್ನು ಉಳಿಸಿಕೊಂಡು ಇತರರಿಗೆ ಮಾದರಿಯಾಗಬೇಕು. ಜಿಲ್ಲೆಯಲ್ಲಿ ಕೆಲ ದಿನಗಳಿಂದ ನಡೆಯುತ್ತಿರುವ ಘರ್ಷಣೆಗಳನ್ನು ತಿಳಿಗೊಳಿಸಬೇಕಾದ ಜನಪ್ರತಿನಿಧಿಯ ಈ ರೀತಿಯ ದ್ವೇಷ ಭಾಷಣಗಳು ಖಂಡನೀಯ ಎಂದೂ ರಕ್ಷಿತ್ ಶಿವರಾಂ ಹೇಳಿದ್ದಾರೆ.

