ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯಕ್ಕೆ ಶೈಕ್ಷಣಿಕ ಸ್ವಾಯತ್ತತೆ
ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಶ್ರೀ ರತ್ನಕುಮಾರ್ ಹೇಳಿಕೆ
(Bantakal) ಬಂಟಕಲ್ : ಉಡುಪಿಯ ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಬಂಟಕಲ್‌ನಲ್ಲಿ ಸ್ಥಾಪಿತವಾದ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯವು ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ತಲುಪಿದ್ದು, ಶೈಕ್ಷಣಿಕ ಸ್ವಾಯತ್ತತೆ ಹಾಗೂ ಎಲ್ಲಾ ಅರ್ಹ ಬಿ.ಇ ಕೋರ್ಸ್ ಗಳಿಗೆ ರಾಷ್ಟ್ರೀಯ ಮೌಲ್ಯಾಂಕನ ಮಂಡಳಿಯಿಂದ ಮಾನ್ಯತೆಯನ್ನು ಪಡೆದಿದೆ ಎಂದು ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಶ್ರೀ ರತ್ನಕುಮಾರ್ ಹೇಳಿದ್ದಾರೆ.
ಅವರು ಸೋದೆ ಸಮೂಹದ ಇನ್ನಂಜೆ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ನವದೆಹಲಿಯ ವಿಶ್ವವಿದ್ಯಾನಿಲಯ ಅನುದಾನ ಆಯೋಗವು (ಯುಜಿಸಿ) ಸಂಸ್ಥೆಯು ಶೈಕ್ಷಣಿಕ ಗುಣಮಟ್ಟದ ಮೌಲ್ಯಮಾಪನ ನಡೆಸಿ, ಕರ್ನಾಟಕ ರಾಜ್ಯದ ಉನ್ನತ ಶಿಕ್ಷಣ ಪರಿಷತ್ತು ಬೆಂಗಳೂರು ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ಇದರ ಶಿಫಾರಸ್ಸಿನ ಮೇರೆಗೆ 2025-26 ನೇ ಶೈಕ್ಷಣಿಕ ವರ್ಷದಿಂದ ಮುಂದಿನ ಹತ್ತು ವರ್ಷಗಳ ತನಕ ಶೈಕ್ಷಣಿಕ ಸ್ವಾಯತ್ತತೆಯನ್ನು ಮಂಜೂರು ಮಾಡಿದೆ.
ರಾಷ್ಟ್ರೀಯ ಮೌಲ್ಯಂಕನ ಮಂಡಳಿಯು ಇತ್ತೀಚೆಗೆ ವಿದ್ಯಾಸಂಸ್ಥೆಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಕೋರ್ಸ್‌ಗೆ ಮಾನ್ಯತೆ ನೀಡಿದೆ. ಈ ಮಾನ್ಯತೆಯಿಂದ ಎಲ್ಲಾ ಅರ್ಹ ಪದವಿ ಕೋರ್ಸ್‌ಗಳು ರಾಷ್ಟ್ರೀಯ ಮೌಲ್ಯಂಕನ ಮಂಡಳಿಯಿಂದ ಮಾನ್ಯತೆ ಪಡೆದಂತಾಗಿದೆ. ಆವಿಷ್ಕಾರ ಘಟಕ ಮತ್ತು ಉದ್ಯಮಶೀಲತೆ ವಿಭಾಗದಲ್ಲಿ 151-300 ರಲ್ಲಿ ಸಂಸ್ಥೆಯ ಉದ್ಯಮಶೀಲ ಘಟಕವು ಗುರುತಿಸಲ್ಪಟ್ಟಿದೆ.
ಇದರ ಜೊತೆಗೆ ವಿದ್ಯಾಸಂಸ್ಥೆಯು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಪರಿಷತ್ತಿನಿಂದ ಎರಡನೇ ಬಾರಿ “ಎ”ಶ್ರೇಣಿಯ ಮೌಲ್ಯಂಕನ ಪಡೆದಿರುವುದು ವಿದ್ಯಾಸಂಸ್ಥೆಯ ಶೈಕ್ಷಣಿಕ ಪ್ರಗತಿಯನ್ನು ಸೂಚಿಸುತ್ತದೆ.
ಕರ್ನಾಟಕ ರಾಜ್ಯದಲ್ಲಿರುವ ಸುಮಾರು 250ಕ್ಕೂ ಮಿಕ್ಕಿ ತಾಂತ್ರಿಕ ಶಿಕ್ಷಣ ವಿದ್ಯಾಸಂಸ್ಥೆಗಳಲ್ಲಿ 15 ವರ್ಷಗಳ ಸೇವಾವಧಿಯಲ್ಲಿ ಶೈಕ್ಷಣಿಕ ಸ್ವಾಯತ್ತತೆ ಪಡೆದ ಬೆರಳೆಣಿಕೆಯ ವಿದ್ಯಾಸಂಸ್ಥೆಗಳಲ್ಲಿ ಬಂಟಕಲ್‌ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯವೂ ಒಂದು ಎಂಬ ಹೆಗ್ಗೆಳಿಕೆಯೊಂದಿಗೆ, ತಾಂತ್ರಿಕ ಶಿಕ್ಷಣದಲ್ಲಿ ಇನ್ನಷ್ಟು ಸಾಧನೆ ಮಾಡುವ ಯೋಜನೆಗಳೊಂದಿಗೆ ಸಂಸ್ಥೆಯು ದಾಪುಗಾಲು ಇಡುತ್ತಿದೆ.
ಶೈಕ್ಷಣಿಕ ಸ್ವಾಯತ್ತತೆಯಿಂದ ವಿದ್ಯಾಸಂಸ್ಥೆಯು ಕಾಲಕಾಲಕ್ಕೆ ಪಠ್ಯ ವಿಷಯಗಳಲ್ಲಿ ಬದಲಾವಣೆ ತರುವುದು ರಾಷ್ಟ್ರೀಯ ಶಿಕ್ಷಣ ನೀತಿ 2020 ನ್ನು ಉತ್ತಮವಾಗಿ ಶಿಕ್ಷಣದಲ್ಲಿ ಅಳವಡಿಸಿಕೊಳ್ಳುವುದು ನೂತನ ಆವಿಷ್ಕಾರಗಳಿಗೆ ಮತ್ತು ಕಲಿಯುವಿಕೆಯ ಮೌಲ್ಯಮಾಪನ ಮಾಡುವುದು ಸುಲಭವಾಗಿದ್ದು, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ತುಂಬಾ ಅಗತ್ಯವೂ ಆಗಿದೆ.
ಈ ಎಲ್ಲಾ ಬೆಳವಣಿಗೆಗಳೊಂದಿಗೆ ಭವಿಷ್ಯದಲ್ಲಿ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯವು ಒಂದು ಮಾದರಿ ತಾಂತ್ರಿಕ ಶಿಕ್ಷಣ ಸಂಸ್ಥೆಯಾಗಿ ರೂಪುಗೊಳ್ಳುವುದು ನಿಶ್ಚಯ ಎಂದೂ ರತ್ನಕುಮಾರ್ ಹೇಳಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಆಡಳಿತ ಮಂಡಳಿಯ ಕಾರ್ಯದರ್ಶಿ ರತ್ನಕುಮಾರ್, ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ರಾಧಾಕೃಷ್ಣ ಎಸ್ ಐತಾಳ್, ಆಡಳಿತ ಮಂಡಳಿಯ ಸದಸ್ಯರಾದ ಹರೀಶ್ ಬೆಳ್ಮಣ್, ಪ್ರಾಂಶುಪಾಲರಾದ ಪ್ರೊ. ಡಾ. ತಿರುಮಲೇಶ್ವರ ಭಟ್ ಉಪಸ್ಥಿತರಿದ್ದರು.

