ಸಂತೋಷ್ ರಾವ್ ನಿರಪರಾಧಿ ಎಂದು ಸಾಬೀತಾದರೆ ಪಾದ ತೊಳೆದು ನೀರು ಕುಡಿಯಲು ಸಿದ್ಧ : ಗಿಳಿಯಾರು
ಧರ್ಮಸ್ಥಳ ದೇಗುಲದ ಮೇಲಿನ ಅವಹೇಳನ ಖಂಡಿಸಿ ಕಾಪುವಿನಲ್ಲಿ ಜನಾಗ್ರಹ ಸಭೆ
(Kaup) ಕಾಪು : ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಶ್ರೀ ವಿರೇಂದ್ರ ಹೆಗ್ಗಡೆಯವರ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಮತ್ತು ಅವಹೇಳನ ಖಂಡಿಸಿ ಬುಧವಾರ ಕಾಪು ಶ್ರೀ ಹಳೇ ಮಾರಿಗುಡಿಯ ಸಭಾಭವನದಲ್ಲಿ ಧರ್ಮಾತೀತ, ಜಾತ್ಯಾತೀತ ಮತ್ತು ಪಕ್ಷಾತೀತವಾಗಿ ಜನಾಗ್ರಹ ಸಭೆ ನಡೆಯಿತು.
ಸಭೆಯಲ್ಲಿ ಪತ್ರಕರ್ತ ವಸಂತ ಗಿಳಿಯಾರು ಪ್ರಮುಖ ದಿಕ್ಸೂಚಿ ಭಾಷಣ ಮಾಡಿದರು.
ಅವರು ತಮ್ಮ ಭಾಷಣದಲ್ಲಿ, ಸೌಜನ್ಯಳನ್ನು ಅತ್ಯಾಚಾರ ಮಾಡಿದ ಆರೋಪಿ ಸಂತೋಷ್ ರಾವ್. ಆತನನ್ನು ನಾರ್ಕೋ ಎನಾಲಿಸಿಸ್ ಪರೀಕ್ಷೆಗೆ ಒಳ ಪಡಿಸಿದರೆ ಸತ್ಯ ಹೊರ ಬರುತ್ತದೆ. ಆದರೆ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಶ್ರೀ ವಿರೇಂದ್ರ ಹೆಗ್ಗಡೆಯವರ ವಿರುದ್ಧ ನಡೆಸುತ್ತಿರುವ ಅಪಪ್ರಚಾರದ ಸೂತ್ರಧಾರಿಗಳು ನಾರ್ಕೋ ಎನಾಲಿಸಿಸ್ ಪರೀಕ್ಷೆಗೆ ಒಳ ಪಡಿಸಲು ಅಡ್ಡಿ ಪಡಿಸುತ್ತಿದ್ದಾರೆ. ಒಂದು ವೇಳೆ ಪರೀಕ್ಷೆಯಲ್ಲಿ ಸತ್ಯ ಬಯಲಾದರೆ, ಅಪಪ್ರಚಾರದ ಸೂತ್ರಧಾರಿಗಳಿಗೆ ಅಸ್ತಿತ್ವ ಇಲ್ಲದಂತಾಗಿ, ಸುಳ್ಳು ಜಗಜಾಹೀರಾಗುತ್ತದೆ. ಇದರಿಂದ ಅವರು ಪರೀಕ್ಷೆಗೆ ಒಳಪಡಿಸಲು ಬಿಡುತ್ತಿಲ್ಲ. ಸಂತೋಷ್ ರಾವ್‌ರನ್ನು ಮರು ತನಿಖೆಗೆ ಒಳಪಡಿಸಿ ಆತ ನಿರಪರಾಧಿ ಎಂದು ಸಾಬೀತಾದರೆ, ನಾನು ಆತನ ಕಾಲು ತೊಳೆದು ನೀರು ಕುಡಿಯಲು ತಯಾರಿದ್ದೇನೆ. ಮತ್ತು ಮುಂದೆ ಸೌಜನ್ಯ ಪರ ಹೋರಾಟದಲ್ಲಿ ನಾನು ಮುಂಚೂಣಿಯಲ್ಲಿ ಇರುತ್ತೇನೆ ಎಂದೂ ವಸಂತ ಗಿಳಿಯಾರು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಧರ್ಮಸ್ಥಳದ ಧರ್ಮಾಧಿಕಾರಿಯವರ ಅವಹೇಳನ ಸಮಸ್ತ ಹಿಂದೂ ಸಮಾಜದ ಅವಹೇಳನವಾಗಿದೆ, ಇದನ್ನು ನಾವೆಲ್ಲರೂ ಖಂಡಿಸೋಣ ಎಂದರು.
ಕಾರ್ಯಕ್ರಮದ ಮೊದಲಿಗೆ ಬೈದ ಶ್ರೀ ಕುಣಿತ ಭಜನಾ ತಂಡದಿಂದ ಕುಣಿತ ಭಜನೆ ನಡೆಯಿತು.
ವೇದಿಕೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಭಕಾಭಿಮಾನಿಗಳ ವೇದಿಕೆಯ ಪ್ರಮುಖರಾದ ದಯಾನಂದ ಹೆಜಮಾಡಿ, ಪಡುಬಿದ್ರಿ ಬೀಡಿನ ಕಿನ್ಯಕ್ಕ ಬಳ್ಳಾಲ್, ದಾಮೋದರ ಶರ್ಮ, ಸಹನಾ ಕುಂದರ್, ನವೀನ್ ಅಮೀನ್ ಶಂಕರಪುರ, ದೇವದಾಸ್ ಹೆಬ್ಬಾರ್, ಸತ್ಯೆಂದ್ರ ಪೈ, ಉದಯ ಶೆಟ್ಟಿ ಇನ್ನಾ, ರಾಘವೇಂದ್ರ ಶೆಟ್ಟಿ, ಮಮತಾ ಶೆಟ್ಟಿ, ನವೀನ್ ಶೆಟ್ಟಿ ಕುತ್ಯಾರು, ಹರಿಣಾಕ್ಷಿ ದೇವಾಡಿಗ, ಅನಿಲ್ ಕುಮಾರ್, ಪ್ರಸಾದ್ ಶೆಣೈ, ನೀರೆ ಕೃಷ್ಣ ಶೆಟ್ಟಿ, ವಿಕ್ರಂ ಕಾಪು, ಗಣೇಶ್ ಆಚಾರ್ಯ, ಗಿರಿಧರ ಸುವರ್ಣ, ಮಹೇಶ್ ಅಂಚನ್, ಗೀತಾಂಜಲಿ ಸುವರ್ಣ, ಶಂಕರ ಕುಂದರ್ ಸೂಡಾ ಮತ್ತಿತರರು ಉಪಸ್ಥಿತರಿದ್ದರು.
ಮಮತಾ ಪೂಜಾರಿ ಎರ್ಮಾಳು ಪ್ರಾರ್ಥಿಸಿದರು. ನವೀನ್ ಅಮೀನ್ ಶಂಕರಪುರ ಸ್ವಾಗತಿಸಿದರು. ರೇಶ್ಮಾ ಉದಯ ಶೆಟ್ಟಿ ನಿರೂಪಿಸಿದರು.
ಸಭೆಯ ಬಳಿಕ ಸರ್ವಿಸ್ ರಸ್ತೆಯ ಮೂಲಕ ಜಾಥಾ ನಡೆಸಿ, ತಹಶಿಲ್ದಾರರ ಕಚೇರಿಗೆ ತೆರಳಿ, ಸರ್ಕಾರಕ್ಕೆ ಸ್ವಯಂಪ್ರೇರಿತ ವಾಗಿ ಅಪಪ್ರಚಾರ ಮಾಡುವವರ ಮತ್ತು ಅವಹೇಳನ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಯಿತು.

